ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಸಮಾನತೆಯ ಭಾರತ ನಮ್ಮದಾಗಲಿ: ರಾಹುಲ್‌ ಗಾಂಧಿ

ಬಡವರಿಗಾಗಿ ಒಂದು, ಶ್ರೀಮಂತರಿಗಾಗಿ ಇನ್ನೊಂದು ಭಾರತ ಸೃಷ್ಟಿಸಿದ ಬಿಜೆಪಿ –ರಾಹುಲ್‌ ವಾಗ್ದಾಳಿ
Last Updated 8 ಅಕ್ಟೋಬರ್ 2022, 4:21 IST
ಅಕ್ಷರ ಗಾತ್ರ

ಮಂಡ್ಯ: ‘ದ್ವೇಷ, ಅಸೂಯೆ, ಜಾತಿ, ಧರ್ಮ, ಅಸಮಾನತೆಯೇ ತುಂಬಿರುವ ಬಿಜೆಪಿಯ ಭಾರತವನ್ನು ನಾವು ತಿರಸ್ಕರಿಸಬೇಕು, ಸರ್ವ ಸಮಾನತೆಯ ಭಾರತ ನಮ್ಮದಾಗಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಪ್ರತಿಪಾದಿಸಿದರು.

ಭಾರತ್ ಜೋಡೊ ಯಾತ್ರೆ ಅಂಗವಾಗಿ ಬೆಳ್ಳೂರಿನ ಬಸ್‌ನಿಲ್ದಾಣದ ವೃತ್ತದಲ್ಲಿ ಶುಕ್ರವಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಬಡವರಿಗಾಗಿ ಒಂದು, ಶ್ರೀಮಂತರಿಗಾಗಿ ಇನ್ನೊಂದು ಭಾರತ ವನ್ನು ಸೃಷ್ಟಿಸಿದೆ’ ಎಂದು ಟೀಕಿಸಿದರು.

‘ಕರ್ನಾಟಕದಲ್ಲಿ ಮೂರು ಕರಾಳ ಕೃಷಿ ಕಾನೂನುಗಳು ಇನ್ನೂ ಇವೆ. ಅವು ಕೃಷಿಕರು, ಬಡವರು, ಯುವಜನರು, ಕಾರ್ಮಿಕರನ್ನು ನಾಶಮಾಡುವ ಅಸ್ತ್ರಗಳು. ಜಿಎಸ್‌ಟಿ, ನೋಟ್‌ ಬ್ಯಾನ್‌ ಮೂಲಕ ಬಿಜೆಪಿ ಬಡವರ ಹಣ ಲೂಟಿ ಮಾಡುತ್ತಿದೆ’ ಎಂದರು.

‘ವಿಶ್ವದ 2ನೇ ಶ್ರೀಮಂತ ಭಾರತೀಯ ಪ್ರಧಾನಿಗೆ ಹತ್ತಿರವಿದ್ದಾರೆ. ಕೆಲ ವರ್ಷಗಳ ಹಿಂದೆ ಪಟ್ಟಿಯಲ್ಲೇ ಇರದಿದ್ದ ಅವರು, ರಾಕೆಟ್‌ ವೇಗದಲ್ಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಡ ಜನರ ಹಣ ಲೂಟಿ ಮಾಡುತ್ತಾ
ಶ್ರೀಮಂತನಾಗಿದ್ದಾರೆ’ ಎಂದರು.

‘ದೇಶದಲ್ಲಿ ಶ್ರೀಮಂತರಿಗೆ ಕನಸುಗಳಿವೆ, ಅವರಿಗೆ ವಿಮಾನ ನಿಲ್ದಾಣ, ಬಂದರು, ರಸ್ತೆ, ದೊಡ್ಡ ಸಂಸ್ಥೆಗಳು ಬೇಕಾಗಿವೆ. ಅವರು ಕೃಷಿ ವ್ಯವಸ್ಥೆ ನಿಯಂತ್ರಿಸುತ್ತಾರೆ, ನಿತ್ಯ ಶ್ರೀಮಂತರಾಗುತ್ತಿದ್ದಾರೆ. ಬಡವರ ಮಕ್ಕಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದರು.

ರಾಗಿಗೆ ಎಂಎಸ್‌ಪಿ ಬೇಕು: ‘ಜನರ ಜೊತೆ ನಡೆಯುವಾಗ ಹಲವು ಸಮಸ್ಯೆಗಳು ಗಮನಕ್ಕೆ ಬಂದಿವೆ. ರಾಗಿ ಬೆಳೆಗೆ ಬೆಂಬಲ ಬೆಲೆ (ಎಂಎಸ್‌ಪಿ) ಬೇಕು. ಕಳೆದ ವರ್ಷ ಕ್ವಿಂಟಲ್‌ ರಾಗಿ ದರ ₹ 3,377 ಇತ್ತು, ಈ ವರ್ಷ ₹ 2 ಸಾವಿರಕ್ಕೆ ಕುಸಿದಿದೆ. ಎಕರೆಗೆ ಕೇವಲ 5 ಕ್ವಿಂಟಲ್‌ ರಾಗಿ ಖರೀದಿಸುವ ಮಿತಿ ಏಕೆ’ ಎಂದು ರಾಹುಲ್‌ ಪ್ರಶ್ನಿಸಿದರು.

‘ಕೃಷಿ ಉತ್ಪನ್ನಗಳಿಗೂ ಜಿಎಸ್‌ಟಿ ಹಾಕುವುದನ್ನು ರೈತರು ಪ್ರಶ್ನಿಸುತ್ತಿದ್ದಾರೆ. ರಸಗೊಬ್ಬರದ ಮೇಲೆ ಶೇ 5, ಟ್ರ್ಯಾಕ್ಟರ್‌ ಖರೀದಿಗೆ ಶೇ 12, ಕೀಟನಾಶಕಗಳಿಗೆ ಶೇ 18ರಷ್ಟು ಜಿಎಸ್‌ಟಿ ಇದೆ. ಅನ್ನನೀಡುವ ರೈತರು ತೆರಿಗೆ ಏಕೆ ಕಟ್ಟಬೇಕು’ ಎಂದು ಪ್ರಶ್ನಿಸಿದರು.

ಕವಿತಾ ಲಂಕೇಶ್‌ ಭಾಗಿ: ನಾಗಮಂಗಲ ತಾಲ್ಲೂಕು ಅಂಚೆಭೂವನಹಳ್ಳಿ ಬಳಿ ರಾಹುಲ್‌ ಅವರ ಜೊತೆಗೆ ಗೌರಿ ಲಂಕೇಶ್‌ ಅವರ ತಾಯಿ ಇಂದಿರಾ ಮತ್ತು ಸಹೋದರಿ, ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಕೆಲಹೊತ್ತು ಹೆಜ್ಜೆ ಹಾಕಿದರು.

‘ಬಸವಣ್ಣನ ಸಂದೇಶ ಮುಚ್ಚಿಡುವ ಪ್ರಯತ್ನ’

‘ಶಾಂತಿ ಕರ್ನಾಟಕದ ಡಿಎನ್‌ಎ. ಯಾರನ್ನೂ ದ್ವೇಷಿಸಬೇಡ, ಯಾರನ್ನೂ ಹಿಂಸಿಸಬೇಡ ಎಂದು ಬಸವಣ್ಣ ಹೇಳಿದ್ದಾರೆ. ಅವರು ತೋರಿದ ಹಾದಿಯಲ್ಲೇ ನಾನೂ ನಡೆಯುತ್ತಿದ್ದೇನೆ. ಕರ್ನಾಟಕ ಸರ್ಕಾರ ಬಸವಣ್ಣನ ಸಂದೇಶವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ’ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

‘ಪಠ್ಯಪರಿಷ್ಕರಣೆ ನೆಪದಲ್ಲಿ ಬಸವಣ್ಣನ ಸಂದೇಶ ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ ಮುಚ್ಚಿಡಲು ಸಾಧ್ಯವೇ? ಕರ್ನಾಟಕದಲ್ಲಿ ಜನಸಾಗರವನ್ನು ಕಂಡಿದ್ದೇನೆ. ಹರಿಯುತ್ತಿರುವ ಜನಸಾಗರದಲ್ಲಿ ಜಾತಿ, ಧರ್ಮಗಳೆಂಬ ಭೇದವಿಲ್ಲ’ ಎಂದರು.

ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಚಿತ್ರ: ದೂರು ದಾಖಲು

ಮಂಡ್ಯ: ‘ಭಾರತ್‌ ಜೋಡೊ ಯಾತ್ರೆ ವೇಳೆ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಚಿತ್ರ ಕಂಡುಬಂದಿದ್ದು, ಅದು ಬಿಜೆಪಿಯ ಕಿಡಿಗೇಡಿಗಳ ಕೃತ್ಯ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಶುಕ್ರವಾರ ಪೊಲೀಸರಿಗೆ ದೂರುನೀಡಿದ್ದಾರೆ.

‘ಜನರ ಆಶಯ ಮರೆತ ಬಿಜೆಪಿ’

ಕೊಪ್ಪಳ: ‘ಬಿಜೆಪಿಯನ್ನು ಬೆಳೆಸಿದ ಆರ್‌ಎಸ್‌ಎಸ್‌ ಮತ್ತು ಹಿಂದೂಪರ ಸಂಘಟನೆಗಳೇ ಈಗ ಆ ಪಕ್ಷವನ್ನು ವಿರೋಧಿಸುತ್ತಿವೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

‘ಜನರ ಭಾವನೆ, ಆಶೋತ್ತರ ಮರೆತು ವ್ಯವಹಾರ ಮಾಡಲು ಅಧಿಕಾರಕ್ಕೆ ಬಂದ ಬಿಜೆಪಿಯವರು ಇಷ್ಟು ವರ್ಷ ಆಡಳಿತದಲ್ಲಿ ವ್ಯವಹಾರವನ್ನೇ ಮಾಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ರಾಹುಲ್ ಅವರನ್ನು ಪಪ್ಪು ಎಂದು ಟೀಕಿಸು ವವರಿಗೆ ಭವಿಷ್ಯದ ರಾಜಕಾರಣದ ಅರಿವಿಲ್ಲ‌. ಭಾರತ್ ಜೋಡೊ ಯಾತ್ರೆ ಮೂಲಕ ಕಾಂಗ್ರೆಸ್ ದೇಶವನ್ನು ಒಂದು ಮಾಡುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT