ಮಂಡ್ಯ: ‘ನಾವು ಕಣ್ಣೀರು ಹಾಕುವುದಿಲ್ಲ, ಕತೆ ಹೇಳುವುದಿಲ್ಲ, ಜೆಡಿಎಸ್‌ಗೆ ಕೊಟ್ಟಂತೆ ನಮಗೂ 5 ವರ್ಷ ಅವಕಾಶ ಕೊಡಿ ನಾವು ಕೆಲಸ ಮಾಡಿತೋರಿಸುತ್ತೇವೆ. ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಬಿಜೆಪಿಗೆ ಅಧಿಕಾರ ಕೊಡಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದರು.
ತಾಲ್ಲೂಕಿನ ಕಂಬದನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಮಂಗಳವಾರ ನಡೆದ ಕಸಬಾ ಮಹಾಶಕ್ತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
‘ಕಳೆದ ಚುನಾವಣೆಯಲ್ಲಿ ಜೆಡಿಎಸ್‌ಗೆ ಕೊಟ್ಟಂತೆ ನಮಗೂ ಒಂದು ಅವಕಾಶ ಕೊಟ್ಟು ನೋಡಿ. ಮೈಸೂರು ಮಹಾರಾಜರ ಕಾಲದಲ್ಲಿ ಉತ್ತಮ ಆಡಳಿತ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದರು. ವಿಶ್ವವೇ ಎದುರು ನೋಡುವಂತಹ ಆಡಳಿತ, ಕೊಡುಗೆ ಕೊಟ್ಟಿದ್ದರು’ ಎಂದರು.
‘ಆ ನಂತರ ಅಧಿಕಾರ ಹಿಡಿದ ಯಾವುದೇ ಪಕ್ಷಗಳು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿಲ್ಲ. ಜೆಡಿಎಸ್ ಪಕ್ಷ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಈ ಬಾರಿ ನಮಗೆ ಅಧಿಕಾರ ಕೊಟ್ಟರೆ ನಾವು ಕೆಲಸ ಮಾಡಿ ತೋರಿಸುತ್ತೇವೆ. 50 ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಐದೇ ವರ್ಷಗಳಲ್ಲಿ ಮಾಡದಿದ್ದರೆ ನನ್ನ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇನೆ’ ಎಂದು ಸವಾಲು ಹಾಕಿದರು.
‘ಮಂತ್ರಿಯಾಗಿ ನನಗೆ ಕೇವಲ ಮೂರೇ ವರ್ಷದ ಅನುಭವವಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ರಾಮನಗರ ಹೇಗೆ ಅಭಿವೃದ್ಧಿ ಹೊಂದಿದೆ ನೋಡಿ. ಕೈಗಾರಿಕೆ, ಕೃಷಿ, ಕೌಶಲ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದನ್ನು ನೋಡಬಹುದು. ಅದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆ ಕೂಡ ಅಭಿವೃದ್ಧಿಯಾಗಬೇಕು’ ಎಂದರು.
‘ಎಚ್.ಡಿ.ಕುಮಾರಸ್ವಾಮಿ ಅವರನ್ನು ನಮ್ಮನೆ ಹುಡುಗ ಎಂದು ಜಿಲ್ಲೆಯ ಜನತೆ ಆಶೀರ್ವಾದ ಮಾಡಿದರು. ಆದರೆ, ಅವರು ಜಿಲ್ಲೆಗೆ ಏನು ಕೊಟ್ಟಿದ್ದಾರೆ? ಮನೆಯ ಸೊಸೆ, ಮೊಮ್ಮಗ, ಮಗ ಎಂದು ಕುಟುಂಬದವರೇ ರಾಜಕೀಯವಾಗಿ ಬರಬೇಕಾ? ನಮ್ಮಲ್ಲಿ ಸೋನಿಯಾಗಾಂಧಿ ಕುಟುಂಬವೂ ಇಲ್ಲ, ದೇವೇಗೌಡರ ಕುಟುಂಬವೂ ಇಲ್ಲ. ಇದು ಜನರ ಆಶೋತ್ತರಗಳನ್ನು ಈಡೇರಿಸುವ ಬಿಜೆಪಿ. ಇಂತಹ ಪಕ್ಷ ಅಧಿಕಾರಕ್ಕೆ ಬರಲು ಜನರು ಆಶೀರ್ವದಿಸಬೇಕು’ ಎಂದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ವಿದ್ಯಾ ನಾಗೇಂದ್ರ, ಡಾ.ಇಂದ್ರೇಶ್, ಎಸ್.ಪಿ.ಸ್ವಾಮಿ, ಅಶೋಕ್ ಜಯರಾಂ, ಭೀಮೇಶ್, ಸುಜಾತಾ ರಮೇಶ್ ಭಾಗವಹಿಸಿದ್ದರು.
***
ನಾರಾಯಣಗೌಡರು ಬಿಜೆಪಿಯಲ್ಲೇ ಇರ್ತಾರೆ
ಸುದ್ದಿಗಾರರ ಜೊತೆ ಮಾತನಾಡಿ ಸಚಿವ ಅಶ್ವತ್ಥನಾರಾಯಣ ‘ಸಚಿವ ನಾರಾಯಣಗೌಡ ಅವರು ನಮ್ಮ ಬಹದ್ದೂರ್ ಗಂಡು. ಅವರು ಬಿಜೆಪಿಯಲ್ಲೇ ಸದಾ ಕಾಲ ಇರುತ್ತಾರೆ. ಈ ಬಗ್ಗೆ ಅನುಮಾನ ಬೇಡ’ ಎಂದರು.
‘ನಾರಾಯಣಗೌಡರು ನಮ್ಮ ನಾಯಕರು ಹಾಗೂ ಸ್ವಾಭಿಮಾನಿ ನಾಯಕ. ಬಿಜೆಪಿ ಸಂಘಟನೆ ಮಾಡಿ ಮಂಡ್ಯ ಜಿಲ್ಲೆ ಅಭಿವೃದ್ಧಿಯ ಕೊಡುಗೆ ನೀಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡಿದ್ದಾರೆ. ರಾಜ್ಯಕ್ಕೆ ಕೊಟ್ಟ ಕಾರ್ಯಗಳು ಬಹಳ ಉತ್ತಮವಾಗಿದೆ. ಸಚಿವರಾಗಿ ರಾಜ್ಯದಲ್ಲಿ ಜನಪರ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಮಲ ಅರಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ’ ಎಂದರು.
‘ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನೇ ಮಾಡಿದರೂ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ’ ಎಂದರು.
***
ಉಸ್ತುವಾರಿ ನೇಮಕ ಸಿ.ಎಂ ಜವಾಬ್ದಾರಿ
‘ಮಂಡ್ಯ ಜಿಲ್ಲೆಯ ಮೇಲೆ ನನಗೆ ಪ್ರೀತಿ, ಉತ್ತಮ ಬಾಂಧವ್ಯ ಇರುವುದು ನಿಜ. ಆದರೆ ಜವಾಬ್ದಾರಿ ಹಾಗೂ ಆಡಳಿತ ಇನ್ನೊಂದು ಭಾಗ. ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದು ಮುಖ್ಯಮಂತ್ತಿಗಳ ಜವಾಬ್ದಾರಿ. ಹೊಸ ನೇಮಕಾತಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಕಾರ್ಯಕ್ರಮಕ್ಕಾಗಿ ಮಾತ್ರ ನಾನು ಬಂದಿದ್ದೇನೆ. ಪಕ್ಷ ಸಂಘಟನೆಯಲ್ಲಿ ನಾನು ತೊಡಗಿಕೊಳ್ಳುತ್ತೇನೆ’ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.
‘ಖಾಲಿ ಇರುವ ಉಸ್ತುವಾರಿ ಕುರಿತಂತೆ ಮುಖ್ಯಮಂತ್ರಿಗಳು ನಿರ್ಣಯ ಕೈಗೊಳ್ಳುತ್ತಾರೆ. ಯಾವ ಕಾಲದಲ್ಲಿ ಏನು ಮಾಡಬೇಕು ಎಂದು ಸಿಎಂ ನಿಶ್ಚಯ ಮಾಡುತ್ತಾರೆ. ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಪಕ್ಷ, ಸರ್ಕಾರ ಸಹಕಾರ ನೀಡುತ್ತದೆ. ಜವಾಬ್ದಾರಿ ಹೊತ್ತುಕೊಳ್ಳಲು ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಇದ್ದಾರೆ. ಸೂಕ್ತ ಎನಿಸಿದವರಿಗೆ ಮುಖ್ಯಮಂತ್ರಿಗಳು ಜವಾಬ್ದಾರಿ ನೀಡುತ್ತಾರೆ. ಅದರ ಬಗ್ಗೆ ನಾನು ಮಾತನಾಡಿದರೆ ತಪ್ಪಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.