ಬುಧವಾರ, ಅಕ್ಟೋಬರ್ 23, 2019
21 °C
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಟೀಕೆ, ‘ನಾರಾಯಣಗೌಡ ಅವರಿಗೆ ವೈಯಕ್ತಿಕ ವರ್ಚಸ್ಸಿಲ್ಲ’

ಕುಮಾರಸ್ವಾಮಿಯ ಬಣ್ಣದ ಮಾತಿಗೆ ಮರುಳಾಗಿದ್ದ ಜನ: ಬಿ.ಕೆ.ಚಂದ್ರಶೇಖರ್‌

Published:
Updated:
Prajavani

ಕೆ.ಆರ್.ಪೇಟೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ಡಿ.ಕುಮಾರ ಸ್ವಾಮಿ ಅವರ ಬಣ್ಣದ ಮಾತಿಗೆ ಮರುಳಾಗಿ ಕ್ಷೇತ್ರದ ಮತದಾರರು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದರೇ ವಿನಃ ನಾರಾಯಣಗೌಡರ ವರ್ಚಸ್ಸಿಗಲ್ಲ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ರೈತರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡುವುದಾಗಿ ಹಾಗೂ ವಿಧವಾ, ವೃದ್ಧಾಪ್ಯ, ಅಂಗವಿಕಲ ವೇತನ ಗಳನ್ನು ಹೆಚ್ಚಿಸಲಾಗುವುದು ಎಂಬ ಆಶ್ವಾಸನೆಗಳಿಗೆ ಮರುಳಾಗಿ ಜನರು ಜೆಡಿಎಸ್‌ಗೆ ಮತ ಚಲಾಯಿಸಿದರು. ಇದರಿಂದ ಕಾಂಗ್ರೆಸ್ ಪಕ್ಷ ಸೋಲಬೇಕಾಯಿತು ಎಂದರು.

ಮುಖ್ಯಮಂತ್ರಿಯಾಗಿದ್ದ ಕುಮಾರ ಸ್ವಾಮಿ ಅವರ ಮೇಲೆ ಒತ್ತಡ ತಂದು ತನ್ನ ಕ್ಷೇತ್ರಕ್ಕೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಲಾಗದ ಅಸಮರ್ಥ ಶಾಸಕ ನಾರಾಯಣಗೌಡ ಕುಂಟು ನೆಪ ಹೇಳಿ ರಾಜೀನಾಮೆ ನೀಡಿದ್ದರು. ಈಗ ಉಪಚುನಾವಣೆ ಘೋಷಣೆಯಾಗಿದೆ. ನಾರಾಯಣ ಗೌಡರಂತಹ ಅಸಮರ್ಥರನ್ನು ಶಾಸಕರನ್ನಾಗಿಸಿದ ಜೆಡಿಎಸ್ ಪಕ್ಷಕ್ಕೆ ಬುದ್ಧಿಕಲಿಸುವ ಅವಕಾಶ ಕ್ಷೇತ್ರದ ಮತದಾರರಿಗೆ ಬಂದಿದೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಪ್ರಕಾಶ್ ಮಾತನಾಡಿ, ‘ಕ್ಷೇತ್ರಕ್ಕೆ ಬೇಡವಾದ ಉಪ ಚುನಾವಣೆಯನ್ನು ನಾರಾಯಣ ಗೌಡ ತಂದೊಡ್ಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಯಾವೊಬ್ಬ ಶಾಸಕನೂ ನಾರಾಯಣಗೌಡರಂತೆ ಮತದಾರರ ತೀರ್ಮಾನದ ವಿರುದ್ಧ ನಡೆದು ಕೊಂಡಿರಲಿಲ್ಲ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ರಾಜ್ಯ ನಗರಾಭಿವೃದ್ಧಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ, ಜಿ.ಪಂ ಸದಸ್ಯ ಕೋಡಿ ಮಾರನಹಳ್ಳಿ ದೇವರಾಜು, ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಮಾಜಿ ಸದಸ್ಯ ನಾಗೇಂದ್ರ ಕುಮಾರ್, ಪುರಸಭಾ ಸದಸ್ಯರಾದ ರವೀಂದ್ರಬಾಬು, ಕೆ.ಸಿ. ಮಂಜುನಾಥ್, ಪ್ರವೀಣ್, ಕೆ.ಬಿ.ಮಹೇಶ್, ಬೂಕನಕೆರೆ ವೆಂಕಟೇಶ್, ಆಲಂಬಾಡಿ ಕಾವಲ್ ಸಂಜೀವಪ್ಪ, ಹರಳಹಳ್ಳಿ ವಿಶ್ವನಾಥ್, ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಮಾದವಪ್ರಸಾದ್, ಚೇತನಾ ಮಹೇಶ್ ಇದ್ದರು.

‘ಕೋಳಿ ಕೇಳಿ ಮೆಣಸು ಅರೆಯಬೇಕೆಂದವರಿಗೆ ಮುಖಭಂಗ’

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮನಸ್ಸು ಮಾಡಿದ್ದರಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲುವಂತಾಯಿತು. ಮೈತ್ರಿ ಧರ್ಮ ಪಾಲಿಸಬೇಕಾದ ಅನಿವಾರ್ಯತೆ ಇತ್ತು. ಎಲ್.ಆರ್.ಶಿವರಾಮೇಗೌಡ ಅಥವಾ ದೇವೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದರು. ‘ಕೋಳಿ ಕೇಳಿ ಮೆಣಸು ಅರೆಯಲಾಗುತ್ತದೆಯೇ’ ಎಂದು ಜೆಡಿಎಸ್‌ನವರು ಹಂಗಿಸಿದ್ದರು. ಅದರ ಪರಿಣಾಮ ಏನೆಂಬುದು ಜೆಡಿಎಸ್ ಮುಖಂಡರಿಗೆ ಈಗ ಅರ್ಥವಾಗಿದೆ’ ಎಂದು ಕೆ.ಬಿ.ಚಂದ್ರಶೇಖರ್ ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)