ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಭೆ ಅನಾವರಣ; ಪರಿಷತ್ ಪ್ರೋತ್ಸಾಹ’

ಡಾ.ಎಚ್.ಎಲ್.ನಾಗರಾಜು ಹೇಳಿಕೆ
Last Updated 27 ಸೆಪ್ಟೆಂಬರ್ 2021, 5:41 IST
ಅಕ್ಷರ ಗಾತ್ರ

ಪಾಂಡವಪುರ: ಮಕ್ಕಳಲ್ಲಿರುವ ಸಾಹಿತ್ಯ ಪ್ರತಿಭೆಯನ್ನು ಅನಾವರಣಗೊಳಿಸಲು ಪರಿಷತ್ ಕೆಲಸ ಮಾಡುತ್ತಿದೆ ಎಂದು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಗೌರವಾ ಧ್ಯಕ್ಷ, ಹಿರಿಯ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಕ ರೇವಂತ್ ರಾಜೀವ್ ಅವರ ‘ಮಕ್ಕಳಿಗಾಗಿ ಸಚಿತ್ರ ರಾಮಾಯಣ’ಹಾಗೂ ‘ರಂಗೋಲಿ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಪ್ರಸಿದ್ಧ ಸಾಹಿತಿಗಳು, ಲೇಖಕರು ಬರಹಗಾರರನ್ನು ಮಾತ್ರ ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನಗಳಿಗೆ ಆಹ್ವಾನಿಸುತ್ತಿತ್ತು. ಈ ಸಮ್ಮೇಳನಗಳಲ್ಲಿ ಹಣ ನೀಡಿ ಭಾಷಣ ಮಾಡಿಸುವುದು ನಡೆದೇ ಇದೆ. ಆದರೆ, ಬರಹಗಾರ ಮಕ್ಕಳನ್ನು ಕಡೆಗಣಿಸಲಾಗಿತ್ತು. ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಕನ್ನಡತನ, ಸಾಹಿತ್ಯದತ್ತ ಪ್ರೋತ್ಸಾಹಿಸಿದರೆ ಕನ್ನಡ ಸಾಹಿತ್ಯವೂ ಸಮೃದ್ಧವಾಗುತ್ತದೆ. ಈ ದಿಸೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಶ್ರಮಿಸುತ್ತಿದೆ ಎಂದರು.

ಚಿಕ್ಕ ವಯಸ್ಸಿನಲ್ಲೇ ರೇವಂತ್ ರಾಜೀವ್ ಎರಡು ಕೃತಿಗಳನ್ನು ಹೊರತಂದಿರುವುದು ಶ್ಲಾಘನೀಯ. ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧ್ಯತೆ ರೇವಂತ್‌ನಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಫಾಟಿಸಿದ ಶಾಸಕ ಸಿ.ಎಸ್.ಪುಟ್ಟರಾಜು, ಸಾಹಿತ್ಯ ಕ್ಷೇತ್ರದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಪ್ರಯತ್ನಪಡಬೇಕಿದೆ. ರೇವಂತ್‌ಗೆ ಆತನ ತಾತ, ಸ್ವಾತಂತ್ರ್ಯ ಹೋರಾಟಗಾರ ಮೊಗಣ್ಣಗೌಡರ ಪ್ರೇರಣೆಯಿದೆ ಎಂದರು.

ರಾಜಕಾರಣಿಗಳೇ ಅಧಿಕಾರಿಗಳನ್ನು ಭ್ರಷ್ಟರನ್ನಾಗಿಸುತ್ತಿದ್ದಾರೆ. ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅವರ ಉತ್ತಮ ಆಡಳಿತವನ್ನು ಹಾಳು ಮಾಡುತ್ತಿದ್ದಾರೆ. ಆದರೆ, ಡಾ.ಎಚ್.ಎಲ್.ನಾಗರಾಜು ಅವರಂಥ ಅಧಿಕಾರಿಗಳು ಪ್ರಭಾವಕ್ಕೂ ಮಣಿಯದೆ ಕಾನೂನಾತ್ಮಕವಾಗಿ ಜನ ಸಾಮಾನ್ಯರ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕೃತಿ ಕುರಿತ ಮಾತನಾಡಿದ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಎನ್.ಮಂಜುನಾಥ್, ಬಾಲಕ ರೇವಂತ್ ಕನ್ನಡ ಸಾಹಿತ್ಯವನ್ನು ಅಧ್ಯಯನ ನಡೆಸಿಯೇ ಸಾಹಿತ್ಯವನ್ನು ರಚಿಸಿದ್ದಾರೆ. ಅವರ ಮಕ್ಕಳಿಗಾಗಿ ಸಚಿತ್ರ ರಾಮಾಯಣ, ರಂಗೋಲಿ ಕವನ ಸಂಕಲದಲ್ಲಿ ಕನ್ನಡ ಪ್ರಜ್ಞೆ ವಿಪುಲವಾಗಿದೆ ಎಂದರು.

ರೇವಂತ್ ಗುರುಗಳಾದ ಗುಲ್ಜಾರ್ ಹಾಗೂ ದಿವ್ಯಾಮಣಿ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ರಾಜಕಾರಣಿ ಇ.ಎಸ್.ಸೀತಾರಾಮಯ್ಯ, ಜಾನಪದ ವಿದ್ವಾಂಸ ಡಾ.ಕ್ಯಾತನಹಳ್ಳಿ ರಾಮಣ್ಣ, ಪುಸ್ತಕ ಮನೆ ಎಂ.ಅಂಕೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ವೆಂಕಟ ರಾಮೇ ಗೌಡ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ರಚನ ಪ್ರಕಾ ಶನದ ಕೆ.ಸಿ.ಓಂಕಾರಪ್ಪ, ಎಂಜಿನಿಯರ್ ರಾಜೀವ್, ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT