ಶುಕ್ರವಾರ, ನವೆಂಬರ್ 22, 2019
20 °C
ಕೆ.ಆರ್‌.ಪೇಟೆಯಲ್ಲಿ ಬೃಹತ್‌ ಆರೋಗ್ಯ ಮೇಳ; ಅಭಿಮತ

ನಾರಾಯಣಗೌಡರ ಮೂಲಕ ಹುಟ್ಟೂರಿನ ಋಣ ತೀರಿಸುವೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

Published:
Updated:
Prajavani

ಕೆ.ಆರ್.ಪೇಟೆ: ‘ಹುಟ್ಟೂರಿನ ಋಣ ತೀರಿಸಲು ಸಾಧ್ಯವಿಲ್ಲ. ಆದರೂ ಕೆ.ಸಿ.ನಾರಾಯಣಗೌಡರು ಹಮ್ಮಿಕೊಂಡಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾದರಿ ತಾಲ್ಲೂರು ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ ಎಸ್.ಯಡಿಯೂಪಪ್ಪ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ನಾನು ಈ ದಿನ ಬರುವ ಸ್ಥಿತಿ ಇರಲಿಲ್ಲ. ಆದರೆ ಈ ತಾಲ್ಲೂಕಿನ ಸಜ್ಜನ ಮುಖಂಡ ನಾರಾಯಣಗೌಡರಿಗೆ ಮಾತು ಕೊಟ್ಟಿದ್ದೆ. ಮಾತಿಗೆ ತಪ್ಪಬಾರದು ಎಂದು ಎಷ್ಟೇ ಕೆಲಸದ ಒತ್ತಡವಿದ್ದರೂ ಅದನ್ನು ಬದಿಗಿಟ್ಟು ಬಂದಿದ್ದೇನೆ. ಕೆ.ಆರ್.ಪೇಟೆ ನನಗೆ ಜನ್ಮ ನೀಡಿದ ತಾಲ್ಲೂಕು. ಇಲ್ಲಿಯ ಋಣ ನನ್ನ ಮೇಲಿದ್ದು ಅದನ್ನು ತೀರಿಸುವ ಜವಾಬ್ದಾರಿ ಇದೆ’ ಎಂದರು.

‘ರಾಜಕಾರಣ ಹರಿಯುವ ನೀರಿದ್ದಂತೆ, ಆದರೆ ನಾರಾಯಣಗೌಡರು ಒಳ್ಳೆಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಎಲ್ಲಾ ಕೆಲಸಗಳಿಗೂ ನಾಡಿನ ಮುಖ್ಯಮಂತ್ರಿಯಾಗಿ ಸ್ಪಂದನೆ ನೀಡುತ್ತೇನೆ. ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಉದ್ದನೆಯ ಪಟ್ಟಿ ನೀಡಿದ್ದಾರೆ. ಅವೆಲ್ಲವನ್ನೂ ಮುಂದಿನ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಲಾಗುವುದು. ಈ ಜಿಲ್ಲೆ ಮತ್ತು ತಾಲ್ಲೂಕಿನ ಬಗ್ಗೆ ನಾರಾಯಣಗೌಡರಿಗೆ ಒಳ್ಳೆಯ ಕಳಕಳಿ ಇದೆ. ಅವರ ಕಳಕಳಿಗೆ ಸೂಕ್ತ ಸಮಯದಲ್ಲಿ ಒಳ್ಳೆಯ ಗೌರವವೂ ಸಿಗಲಿದೆ’ ಎಂದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ ‘ನಾರಾಯಣಗೌಡರ ಬೇಡಿಕೆಗಳೆಲ್ಲವೂ ಸರ್ಕಾರದ ಮನಸ್ಸಿನಲ್ಲಿದೆ. ಕೆ.ಆರ್.ಪೇಟೆ ತಾಲ್ಲೂಕಿಗೆ ಬೇಕಾದಂತಹ ಎಲ್ಲಾ ವೈದ್ಯಕೀಯ ಸೇವೆ ಒದಗಿಸಲಾಗುವುದು. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನು ಆಧುನೀಕರಿಸಿ ಹೈಟೆಕ್ ಆಸ್ಪತ್ರೆ ರೂಪಿಸಲಾಗುವುದು. ಮುಂದಿನ ವರ್ಷದಲ್ಲಿ ನರ್ಸಿಂಗ್ ಕಾಲೇಜು ಆರಂಭವಾಗಲಿದೆ. ನಾವು ಹೇಳಿ ಹೋಗುವವರಲ್ಲ. ನಾರಾಯಣಗೌಡರು ಹೇಳಿದ್ದೆಲ್ಲವನ್ನೂ ಕಾರ್ಯರೂಪಕ್ಕೆ ತಂದೇ ವಿರಮಿಸುತ್ತೇವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಮಾತನಾಡಿ ‘ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ಮ ಗುರಿ. ಹಿಂದೆ ಏನಾಗಿತ್ತು, ಯಾರು ಏನು ಮಾಡಿದರು ಎಂಬುದು ನಮಗೆ ಬೇಕಿಲ್ಲ. ಜಿಲ್ಲೆಯ ಜನರ ಬೇಡಿಕೆಯಾದ ಪಿಎಸ್ಎಸ್ಕೆ ಕಾರ್ಖಾನೆ ಹಾಗೂ ಮಂಡ್ಯದ ಮೈಷುಗರ್ ಕಾರ್ಖಾನೆಯ ಬಗ್ಗೆ ಅಲ್ಲಿನ ಜನರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ. ಮುಂಬರುವ ವರ್ಷ ಎರಡೂ ಸಕ್ಕರೆ ಕಾರ್ಖಾನೆ ಆರಂಭವಾಗುತ್ತವೆ’ ಎಂದರು.

ಸಂಸದೆ ಸುಮಲತಾ ಅಂಬರೀಷ್‌, ಸಕ್ಕರೆ ಕಾರ್ಖಾನೆಗಳು ಆರಂಭಗೊಳ್ಳಬೇಕು. ಶ್ರೀರಂಗಪಟ್ಟಣ ದೇಶದ ಪ್ರಮುಖ ಪ್ರವಾಸಿತಾಣವಾಗಬೇಕು. ಎಲ್ಲಾ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ ‘ತಾಲ್ಲೂಕಿನ ಅಭಿವೃದ್ಧಿಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ. ನನಗೆ ನನ್ನ ತಾಲ್ಲೂಕಿನ ಸಮಗ್ರ ಅಬಿವೃದ್ಧಿಯೇ ಮುಖ್ಯ. ನಾನು ₹ 700 ಕೋಟಿ ಅನುದಾನ ಕೇಳಿದ್ದೆ. ಆದರೆ ಯಡಿಯೂರಪ್ಪ ಅವರು ₹ 1000 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಸಭೆಯಲ್ಲಿ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್‌ಮುಲ್‌ ನಾಮ ನಿರ್ದೇಶಿತ ನಿರ್ದೇಶಕ ತಮ್ಮಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಬೂಕಹಳ್ಳಿ ಮಂಜು, ಡಾ.ಸಿದ್ದರಾಮಯ್ಯ, ಸಿಂಧಘಟ್ಟ ಅರವಿಂದ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ, ಕೆ.ಯಾಲಕ್ಕಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಇದ್ದರು. ನಂತರ ಸಾವಿರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪ್ರತಿಕ್ರಿಯಿಸಿ (+)