ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ

ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ; ಬಿ.ವೈ.ವಿಜಯೇಂದ್ರ ಸೂಚನೆ
Last Updated 8 ಸೆಪ್ಟೆಂಬರ್ 2020, 16:01 IST
ಅಕ್ಷರ ಗಾತ್ರ

ಮಂಡ್ಯ: ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಹೆಚ್ಚು ಪ್ರವಾಸ ಮಾಡುವ ಮೂಲಕ ಪಕ್ಷದ ಬಲವರ್ಧನೆಗೆ ಒತ್ತು ನೀಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪಕ್ಷದ ಮುಖಂಡರನ್ನು ಸೃಷ್ಟಿ ಮಾಡುವ ಚುನಾವಣೆಯಾಗಿವೆ. ಕಾರ್ಯಕರ್ತರಿಗೆ ಹೆಚ್ಚು ಶಕ್ತಿ ತುಂಬುವ ಮೂಲಕ ಸಂಘಟನೆ ಮಾಡಬೇಕು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆ ಮಾಡಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಇತಿಹಾಸ ನಿರ್ಮಿಸಬೇಕು. ಕಮಲ ಅರಳುವುದಿಲ್ಲ ಎಂದಿದ್ದವಿರೋಧ ಪಕ್ಷದ ನಾಯಕರಿಗೆ ತಕ್ಕ ಉತ್ತರ ನೀಡಬೇಕು’ ಎಂದರು.

‘ಜಿಲ್ಲೆಯಲ್ಲಿ ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಕಮಲ ಅರಳಿಸುವ ಮೂಲಕ ತಕ್ಕ ಉತ್ತರ ನೀಡಲಾಗಿದೆ. ಈ ಗೆಲುವಿನ ಸಾಧನೆ ಮುಂದುವರಿಯಬೇಕು. ಈ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು’ ಎಂದು ಹೇಳಿದರು.

‘ಈ ಹಿಂದೆ ಇದ್ದ ಸರ್ಕಾರಗಳು ಒಂದು ಜಿಲ್ಲೆ ಅಥವಾ ಪ್ರದೇಶಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿದ್ದವು. ಆದರೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಹಲವಾರು ಸವಾಲುಗಳು ಎದುರಾದರೂ ಅಭಿವೃದ್ಧಿ ಪಥದಲ್ಲಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತಿದ್ದಾರೆ’ ಎಂದರು.

‘ಶೀಳನೆರೆ ಏತನೀರಾವರಿ ಯೋಜನೆಗೆ ₹260 ಕೋಟಿ, ಸಂತೇಬಾಚನಹಳ್ಳಿ ನೀರಾವರಿ ಯೋಜನೆಗೆ ₹212 ಕೋಟಿ, ವಿವಿಧ ರಸ್ತೆ ಕಾಮಗಾರಿಗೆ ₹20–30ಕೋಟಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಇತ್ತಿಚೆಗೆ ಮಂಡ್ಯ ನಗರಸಭೆಗೆ ₹26.5ಕೋಟಿ ನೀಡಲಾಗಿದೆ. ಇದು ನಮ್ಮ ತವರು ಜಿಲ್ಲೆಯಾಗಿದ್ದು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ಜಿಲ್ಲೆಯಲ್ಲಿ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ, ಯಡಿಯೂರಪ್ಪ ಅವರ ಆಶೀರ್ವಾದದಿಂದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವನಾಗಿದ್ಧೇನೆ. ಜಿಲ್ಲೆಯನ್ನು ಬಿಜೆಪಿ ಭದ್ರ ಕೋಟೆ ಮಾಡಲು ಹಗಲು ರಾತ್ರಿ ದುಡಿಯಬೇಕು. ಅದಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕು’ ಎಂದರು.

ಮುಖಂಡ ಸಿದ್ದರಾಮಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಕುಮಾರ್‌, ಮಾಜಿ ಅಧ್ಯಕ್ಷ ನಾಗಣ್ಣಗೌಡ, ನಗರಸಭೆ ಸದಸ್ಯ ಎಂ.ಪಿ.ಅರುಣ್‌ಕುಮಾರ್‌, ಜಿಪಂ ಸದಸ್ಯ ಚಂದಗಾಲು ಶಿವಣ್ಣ ಇದ್ದರು.

ಡ್ರಗ್ಸ್‌ ಮುಕ್ತ ರಾಜ್ಯ ನಿರ್ಮಾಣವೇ ಗುರಿ

‘ರಾಜ್ಯ ಬಿಜೆಪಿ ಸರ್ಕಾರ ಡ್ರಗ್ಸ್‌ ಮಾಫಿಯಾ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಇದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಕರ್ನಾಟಕವನ್ನು ಡ್ರಗ್ಸ್‌ ಮುಕ್ತ ಮಾಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ’ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಜ್ಯದಲ್ಲಿ ಹಿಂದಿನಿಂದಲೂ ಡ್ರಗ್ಸ್‌ ದಂಧೆಗಳು ನಡೆಯುತ್ತಿದ್ದವು. ಆದರೆ ಯಾವುದೇ ಸರ್ಕಾರಗಳು ಕ್ರಮತೆಗೆದುಕೊಳ್ಳಲು ಮುಂದಾಗಿರಲಿಲ್ಲ. ಇದನ್ನು ಬಿಜೆಪಿ ಸರ್ಕಾರ ಸವಾಲಾಗಿ ಸ್ವೀಕರಿಸಿದ್ದು, ಡ್ರಗ್ಸ್‌ ಮಾಫಿಯಾ ಮಟ್ಟ ಹಾಕಲು ಕಟಿಬದ್ಧವಾಗಿದೆ’ ಎಂದರು.

‘ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ. ಆ ನಿಟ್ಟಿನಲ್ಲೂ ವಿಚಾರಣೆ ನಡೆಯುತ್ತಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್. ವಿವೇಕ್, ಜಿಪಂ ಸದಸ್ಯ ಎನ್.ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT