ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ; ರಾಜಕಾರಣದ ಪ್ರಶ್ನೆಯೇ ಇಲ್ಲ: ಚಲುವರಾಯಸ್ವಾಮಿ

ರೈತ ಹಿತರಕ್ಷಣಾ ಸಮಿತಿಯ ಹೋರಾಟದ ಸ್ಥಳಕ್ಕೆ ಸಚಿವ ಎನ್‌.ಚಲುವರಾಯಸ್ವಾಮಿ ಭೇಟಿ
Published 5 ಸೆಪ್ಟೆಂಬರ್ 2023, 15:30 IST
Last Updated 5 ಸೆಪ್ಟೆಂಬರ್ 2023, 15:30 IST
ಅಕ್ಷರ ಗಾತ್ರ

ಮಂಡ್ಯ: ‘ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಕಾರಣ ಮಾಡುವ ಪ್ರಶ್ನೆಯಿಲ್ಲ. ರೈತರ ಹಿತರಕ್ಷಣೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಸರ್‌ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

‘ತಮಿಳುನಾಡು ಪ್ರತಿನಿತ್ಯ 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರ ಮತ್ತು ನ್ಯಾಯಾಲಯದ ಮೊರೆ ಹೋಗಿದೆ. ಕರ್ನಾಟಕ ಸರ್ಕಾರ ಇಲ್ಲಿನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ. ಪ್ರಾಧಿಕಾರದ ಆದೇಶದ ಮೇರೆಗೆ ಅತಿ ಕಡಿಮೆ ಪ್ರಮಾಣ ನೀರು ಬಿಡಲಾಗುತ್ತಿದೆ’ ಎಂದರು.

‘ಸುಪ್ರೀಂ ಕೋರ್ಟ್‌ ವಿಚಾರಣೆಯಲ್ಲಿ ಪ್ರಬಲ ವಾದ ಮಂಡನೆ ಮಾಡಲಾಗಿದೆ. ಬುಧವಾರ ಪ್ರಕಟವಾಗಲಿರುವ ತೀರ್ಪು ನೋಡಿಕೊಂಡು ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಕಾನೂನು ತಜ್ಞರ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು ಸಲಹೆ ಸೂಚನೆ ಪಡೆಯಲಾಗುತ್ತಿದೆ. ಸುಪ್ರೀಂ ಕೋರ್ಟ್‌ ತೀರ್ಪು ಏನೇ ಬಂದರೂ ಅದರ ಬಗ್ಗೆ ವಿಸ್ತೃತ ಮಾತುಕತೆ ನಡೆಸಿ ರೈತರ ಹಿತ ಕಾಪಾಡುವ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ರಾಜ್ಯದ 28 ಸಂಸದರು, ರಾಜ್ಯಸಭಾ ಸದಸ್ಯರು ಕಾವೇರಿ ವಿಚಾರದಲ್ಲಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ಸಂಸದರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಬೇಕಿತ್ತು. ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ರಾಜ್ಯದ ಪರಿಸ್ಥಿತಿ ವಿವರಣೆ ನೀಡಬೇಕಿತ್ತು. ಆದರೆ, ಬಿಜೆಪಿ ಸಂಸದರು ಆ ಕೆಲಸ ಮಾಡಿಲ್ಲ’ ಎಂದು ಆರೋಪಿಸಿದರು.

‘ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ನಡೆಸುತ್ತಿರುವ ಹೋರಾಟದಲ್ಲಿ ನ್ಯಾಯಯುತ ಬೇಡಿಕೆ ಮುಂದಿಟ್ಟು ಪ್ರತಿಭಟಿಸಲಾಗುತ್ತಿದೆ. ಈ ವೇಳೆ ಯಾರನ್ನು ಸಹ ಟೀಕೆ ಮಾಡದೆ ಹೋರಾಟ ಮುಂದುವರಿಸಿರುವುದು ಒಳ್ಳೆಯ ಬೆಳವಣಿಗೆ. ನಾವು ಕೂಡ ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದೆವು. ಇದೀಗ ಮಂತ್ರಿಯಾಗಿದ್ದೇನೆ. ರಾಜ್ಯವನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸಮಸ್ಯೆಯನ್ನು ಎದುರಿಸಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿಗೆ ಸ್ಪಂದಿಸಬೇಕಾದ ಅವಶ್ಯಕತೆ ಇದೆ’ ಎಂದು ತಿಳಿಸಿದರು.

‘ಕೆಆರ್‌ಎಸ್ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ಬುಧವಾರದಿಂದ ನಾಲೆಗಳಿಗೆ ಎರಡನೇ ಕಂತಿನ ನೀರು ಹರಿಸಲಾಗುವುದು. ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹ ಒಗ್ಗೂಡಿ ರೈತರ ರಕ್ಷಣೆಗೆ ಮುಂದಾಗ ಬೇಕಾಗಿದೆ, ಹೋರಾಟದ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯುತ್ತಿದ್ದು, ನಾಡಿನ ರೈತರಿಗೆ ಒಳಿತಾಗಬೇಕು’ ಎಂದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ‘ಕಾವೇರಿ ಕೊಳ್ಳದ ಪ್ರದೇಶದಲ್ಲಿ ಎಷ್ಟೇ ಪ್ರತಿಭಟನೆ ಮಾಡಿದರೂ ನ್ಯಾಯಾಲಯ ಅದನ್ನು ಪರಿಗಣಿಸುವುದಿಲ್ಲ. ಕರ್ನಾಟಕ ಸರ್ಕಾರ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯದ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ’ ಎಂದು ಆಗ್ರಹಿಸಿದರು.

‘ರೈತರಿಂದ ಮತ ಪಡೆದು ಚುನಾಯಿತರಾಗಿರುವ ಸಂಸದರು ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲುವುದು ಅವರ ಕರ್ತವ್ಯ. ಅವರು ಕೂಡ ಸರ್ಕಾರದ ಭಾಗ. ನಾವು ನೀರು ನಿಲ್ಲಿಸಿ ಎಂದು ಹೋರಾಟ ಮಾಡುತ್ತಿದ್ದೇವೆ. ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ. ರೈತರು ಬೆಳೆದಿರುವ ಬೆಳೆಗೆ ನೀರಿಲ್ಲ. ಹೊಸ ಬೆಳೆ ಹಾಕಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌, ಮುಖಂಡರಾದ ಸಿ.ಡಿ.ಗಂಗಾಧರ, ಎಂ.ಎಸ್‌.ಚಿಂದಂಬರ್, ಇಂಡುವಾಳು ಚಂದ್ರಶೇಖರ್, ಬಸವರಾಜು, ಎಂ.ವಿ.ಕೃಷ್ಣ, ಕೀಲಾರ ಸೋಮಶೇಖರ್, ಜೋಗೀಗೌಡ, ಸಂಪಹಳ್ಳಿ ಕೃಷ್ಣ, ಶಂಕರೇಗೌಡ ಭಾಗವಹಿಸಿದ್ದರು.

28 ಸಂಸದರು ರೈತರ ಪರವಾಗಿ ನಿಲ್ಲಲಿ ವಾಸ್ತವ ಸ್ಥಿತಿ ಸುಪ್ರೀಂ ಕೋರ್ಟ್‌ಗೆ ತಿಳಿಸಲಿ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿಗೆ ಪ್ರಮುಖ ಸ್ಥಾನ

ಸಂಕಷ್ಟ ಸೂತ್ರ: ಪ್ರಧಾನಿ ಬಳಿ ಸರ್ವಪಕ್ಷಗಳ ನಿಯೋಗ

ಮಂಡ್ಯ: ‘ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತುರ್ತಾಗಿ ನಾಲ್ಕು ರಾಜ್ಯಗಳ ಸಭೆ ಕರೆದು ಸಂಕಷ್ಟ ಸೂತ್ರ ರಚಿಸುವಂತೆ ಕೋರಿ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಈ ಕುರಿತು ಪ್ರಧಾನಿ ಕಚೇರಿಗೆ ಸಮಯಾವಕಾಶ ಕೇಳಲಾಗಿದೆ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘2018ರಲ್ಲಿ ಕಾವೇರಿ ಅಂತಿಮ ತೀರ್ಪು ಬಂದಾಗಲೇ ಸಂಕಷ್ಟ ಸೂತ್ರ ರಚನೆಗೆ ಆಗಿನ ಸರ್ಕಾರ ಒತ್ತಾಯಿಸಬೇಕಾಗಿತ್ತು. ಹಾಗೆ ಮಾಡದೆ ತೀರ್ಪನ್ನು ಗೆಜೆಟ್‌ ಪ್ರಕಟಣೆ ಹೊರಡಿಸಿರುವುದೇ ಸಮಸ್ಯೆಗೆ ಮೂಲ ಕಾರಣ. ಆಗಿನ ಬಿಜೆಪಿ ಸರ್ಕಾರದ ನಿರಾಸಕ್ತಿಯಿಂದ ಇಂದು ಬರ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸಬೇಕಾಗಿದೆ’ ಎಂದರು. ‘ಈಗಿನ ಪರಿಸ್ಥಿತಿಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಸಂಕಷ್ಟ ಸೂತ್ರ ರಚನೆಗೆ ಒತ್ತಾಯ ಮಾಡುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ತುರ್ತಾಗಿ 4 ರಾಜ್ಯಗಳ ಸಭೆ ಕರೆದು ಸಂಕಷ್ಟ ಸೂತ್ರ ರಚಿಸಬೇಕು ಎಂದು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದರು. ‘ಜೆಡಿಎಸ್‌ ಸರ್ಕಾರ ಅಸ್ಥಿತ್ವದಲ್ಲಿದ್ದಾಗ ಕಾವೇರಿ ಸಮಸ್ಯೆ ಬಗೆಹರಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಆದರೆ ಈಗ ಕಾವೇರಿ ನೀರಿನ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಗೊತ್ತಿರುವ ವಿಚಾರ’ ಎಂದರು. ಬರ– ಸ್ಪಂದಿಸದ ಪ್ರಧಾನಿ: ‘196 ತಾಲ್ಲೂಕುಗಳಲ್ಲಿ ಬರ ಕಾಡುತ್ತಿದ್ದರೂ ಕೇಂದ್ರ ಸರ್ಕಾರದ ಕಾರ್ಯಸೂಚಿ ಅನ್ವಯ ರಾಜ್ಯದ 62 ತಾಲ್ಲೂಕುಗಳು ಮಾತ್ರ ಬರ ತಾಲ್ಲೂಕು ಘೋಷಣೆಗೆ ಅರ್ಹವಾಗಿವೆ. ನಿಯಮ ತಿದ್ದುಪಡಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ’ ಎಂದು ಚಲುವರಾಯಸ್ವಾಮಿ ಆರೋಪಿಸಿದರು. ‘ಸೆ.7ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬರ ಘೋಷಣೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಬರ ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗುವುದು’ ಎಂದರು.

Cut-off box - ಕಾವೇರಿ ತೀರ್ಪು ಇಂದು: ಕಟ್ಟೆಚ್ಚರ ಹೆಚ್ಚುವರಿ ನೀರು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಪ್ರಕರಣದ ತೀರ್ಪು ಬುಧವಾರ (ಸೆ.6) ಪ್ರಕಟವಾಗಲಿದ್ದು ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲೆಯಾದ್ಯಂತ ಕಾವೇರಿ ಚಳವಳಿ ನಡೆಯುತ್ತಿದ್ದು ತೀರ್ಪಿನ ನಂತರ ಅಹಿತಕರ ಘಟನೆ ತಡೆಗಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ತೀರ್ಪಿನ ನಂತರ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಬುಧವಾರ ಸಂಜೆ 4 ಗಂಟೆಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ಕರೆದಿದೆ. ‘ಹೋರಾಟದ ಸ್ಥಳಗಳಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಗಸ್ತು ಜಾಗೃತಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಹೇಳಿದರು.

Cut-off box - ರಕ್ತದಲ್ಲಿ ಸಹಿ ಮಾಡಿದ ಬಿಜೆಪಿ ಸದಸ್ಯರು ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿ ಬರೆದ ಪತ್ರಕ್ಕೆ ರಕ್ತದಿಂದ ಸಹಿ ಮಾಡಿದ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದು ಜನ–ಜಾನುವಾರುಗಳಿಗೆ ಕುಡಿಯುವ ನೀರು ರೈತರ ಬೆಳೆಗಳಿಗೆ ನೀರು ಇಲ್ಲದ ಪರಿಸ್ಥಿತಿ ಎದುರಾಗಿದೆ. ಹೀಗಿದ್ದರೂ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕೂಡಲೇ ನೀರು ನಿಲ್ಲಿಸಬೇಕು. ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರು. ಕಾವೇರಿ ಕಣಿವೆಯ ಸಿನಿಮಾ ನಟರಾದ ದರ್ಶನ್ ಮತ್ತು ಯಶ್ ಈ ಕೂಡಲೇ ಬೀದಿಗಿಳಿದು ಹೋರಾಡಲು ಮುಂದಾಗಬೇಕು. ಅವರು ಕೂಡ ಕಾವೇರಿ ನೀರು ಕುಡಿಯುತ್ತಿದ್ದು ರೈತರ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಶಿವಕುಮಾರ್ ಆರಾಧ್ಯ ಸಿದ್ದರಾಜುಗೌಡ ಡಣಾಯಕನಪುರ ರವಿಕುಮಾರ್ ಯೋಗೇಶ್ ಚಂದ್ರ ನಿತ್ಯಾನಂದ ಹೊಸಹಳ್ಳಿ ಶಿವು ಆನಂದ್ ಚಂದ್ರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT