ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಐಕ್ಯತೆ ಒಡೆಯುತ್ತಿರುವ ಕೇಂದ್ರ ಸರ್ಕಾರ

ಸಿಐಟಿಯು ಸುವರ್ಣ ಮಹೋತ್ಸವಕ್ಕೆ ಚಾಲನೆ; ಕಾರ್ಯದರ್ಶಿ ಕೆ.ಎನ್.ಉಮೇಶ್ ಸಲಹೆ
Last Updated 22 ಜೂನ್ 2019, 13:03 IST
ಅಕ್ಷರ ಗಾತ್ರ

ಮಂಡ್ಯ: ‘ಕೇಂದ್ರ ಸರ್ಕಾರ ಕಾರ್ಮಿಕ ವರ್ಗವನ್ನು ವಿಭಾಗಿಸುವ ಮೂಲಕ ಕಾರ್ಮಿಕರ ರಕ್ಷಣಾ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ. ಇದನ್ನು ತಡೆಯಲು ಎಲ್ಲಾ ಕಾರ್ಮಿಕರು ಐಕ್ಯತೆಯಿಂದ ಹೋರಾಟ ಮಾಡಬೇಕಾದ ಅಗತ್ಯವಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದರು.

ಅಖಿಲ ಭಾರತ ಟ್ರೇಡ್ ಯೂನಿಯನ್ ಶತಮಾನೋತ್ಸವ, ಸಿಐಟಿಯು ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶದಲ್ಲಿ ಕಾರ್ಮಿಕ ಸಂಘಟನೆಗಳು ತೀವ್ರ ಸಂಘರ್ಷದ ಹಾದಿಯಲ್ಲಿ ಬೆಳೆದು ಬಂದಿವೆ. 1920 ರಲ್ಲಿ ಕೇಂದ್ರ ಕಾರ್ಮಿಕ ಸಂಘಟನೆ ಪ್ರಾರಂಭವಾಗಿ ಸ್ವಾತಂತ್ರ್ಯ ಪಡೆಯಲು ತನ್ನದೇ ಕೊಡುಗೆ ನೀಡಿದೆ. ಮಹಾತ್ಮ ಗಾಂಧೀಜಿ ಅವರ ದಂಡಿ ಸತ್ಯಾಗ್ರಹ ಹಾಗೂ ಚಲೇಜಾವ್‌ ಚಳವಳಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆ ಪರವಾಗಿ ಕೈಗಾರಿಕೆ ಮತ್ತು ರೈತ ಕಾರ್ಮಿಕರು ಪಾಲ್ಗೊಂಡು ತ್ಯಾಗ, ಬಲಿದಾನ ಅರ್ಪಿಸಿದ್ದಾರೆ. ಆದರೆ ಸ್ವಾತಂತ್ರ್ಯದ ನಂತರ ರಾಜಕೀಯ ಕುತಂತ್ರದ ಪರಿಣಾಮದಿಂದ ಕೇಂದ್ರ ಕಾರ್ಮಿಕ ಸಂಘಟನೆ ಹಲವು ಭಾಗವಾಯಿತು’ ಎಂದರು.

‘ಸ್ವಾತಂತ್ರ್ಯ ನಂತರ ಸಂವಿಧಾನ ನೀಡಿದ ಕಾರ್ಮಿಕ ಹಕ್ಕುಗಳನ್ನು ಅರ್ಹರಿಗೆ ತಲುಪಿಸಲು 1970 ರಲ್ಲಿ ಸಿಐಟಿಯು ಪ್ರಾರಂಭವಾಯಿತು. ಅಂದಿನಿಂದ ಎಲ್ಲಾ ಕಾರ್ಮಿಕರನ್ನು ಒಂದುಗೂಡಿಸಿ ಐಕ್ಯತೆ ಹಾಗೂ ಸಂಘರ್ಷದ ಮೂಲಕ ಹಕ್ಕುಗಳನ್ನು ಪಡೆಯುಲು ಶ್ರಮಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಕಾರ್ಮಿಕರನ್ನು ಕೂಲಿಗಳು, ಹಮಾಲಿಗಳು, ದಿನಗೂಲಿಗಳು, ನಿರ್ವಹಣಾಕಾರರು, ನೌಕರರು, ಅಧಿಕಾರಿಗಳು ಎಂದು ವಿಂಗಡಿಸಲು ಮುಂದಾಗಿರುವುದು ದರಂತವಾಗಿದೆ. ಇದಕ್ಕೆ ಅವಕಾಶ ನೀಡದೆ ಕಾರ್ಮಿಕರೆಲ್ಲರೂ ಸಿಐಟಿಯು ಅಡಿಯಲ್ಲಿ ಐಕ್ಯತೆ ಪ್ರದರ್ಶನ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜಿ.ರಾಮಕೃಷ್ಣ ಮಾತನಾಡಿ, ‘ಪ್ರಸ್ತುತ ಕೇಂದ್ರ ಸರ್ಕಾರ ಕನಿಷ್ಠ ಕೂಲಿ, ವೇತನ ಹೆಚ್ಚಳ, ಜೀವನ ನಿರ್ವಹಣಾ ವೆಚ್ಚದ ಮಾಪನ ಹಾಗೂ ಕಾರ್ಮಿಕ ಕಾನೂನು ರಕ್ಷಣೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ. ಕಾರ್ಮಿಕರ ಕಾನೂನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕೇವಲ ಶ್ರೀಮಂತ ವರ್ಗದ ಪರವಾಗಿ ಆಡಳಿತ ಮಾಡುವ ಮೂಲಕ ದೇಶದ ಕಾರ್ಮಿಕರನ್ನು ಶೋಷಣೆ ಮಾಡಲು ಮುಂದಾಗಿದೆ. ಇದನ್ನು ತಡೆದು ಕಾರ್ಮಿಕ ಹಿತ ರಕ್ಷಣೆ ಮಾಡಿ ಸಮಾಜದಲ್ಲಿ ಉತ್ತಮ ಜೀವನ ಸಾಗಿಸುವಂತೆ ಮಾಡಲು ಕೇಂದ್ರದ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಸಿಐಟಿಯು ಸುವರ್ಣ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು. ಸಿಐಟಿಯು ಪದಾಧಿಕಾರಿಗಳಾದ ಮಂಜುಳಾರಾಜ್, ಮಹದೇವಮ್ಮ, ಎಸ್.ಬಿ.ರಾಮು, ಪ್ರಮೀಳಾಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT