ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬೇಡ್ಕರ್ ನೀಡಿದ ಸಂವಿಧಾನ ವಿಶ್ವಕ್ಕೆ ಮಾದರಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

Published 26 ಜನವರಿ 2024, 12:43 IST
Last Updated 26 ಜನವರಿ 2024, 12:43 IST
ಅಕ್ಷರ ಗಾತ್ರ

ಪಾಂಡವಪುರ: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶುಕ್ರವಾರ ಆಯೋಜಿಸಿದ್ದ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂವಿಧಾನದ ಅರಿವು ಮೂಡಿಸಲು ಜ.26ರಿಂದ ಫೆ.23ರವರೆಗೆ ಸಂವಿಧಾನ ಜಾಥಾ ಆಯೋಜಿಸಿದ್ದು ಪ್ರತಿ ಗ್ರಾಮಗಳಿಗೆ ಜಾಥಾ ಬರಲಿದೆ. ಸಕಲ ಗೌರವಗಳೊಂದಿಗೆ ಅದ್ದೂರಿಯಾಗಿ ಹಬ್ಬದ ವಾತಾವರಣದಲ್ಲಿ ಸ್ವಾಗತಿಸುವ ಕೆಲಸವನ್ನು ಮಾಡಬೇಕಿದೆ’ ಎಂದರು.

‘ಯಾರೊಬ್ಬರು ತಾಲ್ಲೂಕು ಕಚೇರಿಗೆ ಅಲೆಯದಂತೆ ಕಂದಾಯ ಇಲಾಖೆಯ ಎಲ್ಲ ಕೆಲಸ ಕಾರ್ಯ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಸಕನಾಗಿ ಕ್ರಮವಹಿಸಿದ್ದೇನೆ. ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ವಾಸ್ತವ್ಯ ಹೂಡಿ ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲೋಪವಿಲ್ಲದಂತೆ ಸಿದ್ದಪಡಿಸಲಿದ್ದಾರೆ. ಡಿಜಿಟಲೀಕರಣದಿಂದ ಈ ಕೆಲಸವನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು,

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಎಲ್.ಎಂ.ನಂದೀಶ್, ‘ಅಂಬೇಡ್ಕರ್ ಅವರು ಸಂವಿಧಾನ ನೀಡುವ ಮೂಲಕ ದೇಶದ ಆಡಳಿತ ಮತ್ತು ಪ್ರಗತಿಗೆ ಭದ್ರ ಬುನಾದಿ ಹಾಕಿದ್ದಾರೆ. ನಮ್ಮ ಎಲ್ಲ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ’ ಎಂದರು.

ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಂದ ದೇಶಾಭಿಮಾನ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ.ಎಸ್.ಶ್ರೇಯಸ್, ಉಪ ತಹಶೀಲ್ದಾರ್ ಎಸ್.ಸಂತೋಷ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಉಪ ವಿಭಾಗೀಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್, ಬಿಇಒ ಬಿ.ಚಂದ್ರಶೇಖರ್, ಪೊಲೀಸ್ ಇನ್‌ಸ್ಪೆಕ್ಟರ್‌ ವಿವೇಕಾನಂದ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆನ್ನಾಳು ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಎಸ್.ದಯಾನಂದ್, ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್, ಕದಸಂಸ ಮೈಸೂರು ವಿಭಾಗೀಯ ಸಂಚಾಲಕ ಡಿ.ಕೆ.ಅಂಕಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT