ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ಕ್ಷೇತ್ರ; ರಂಗಯ್ಯ ಸೇವೆ ಅನನ್ಯ’

ಬಿ.ಎಲ್‌.ದೇವರಾಜು ಅವರಿಗೆ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ; ಕೆ.ಟಿ.ಶ್ರೀಕಂಠೇಗೌಡ ಅಭಿಮತ
Last Updated 9 ಜನವರಿ 2022, 16:27 IST
ಅಕ್ಷರ ಗಾತ್ರ

ಮಂಡ್ಯ: ಸಹಕಾರ ಕ್ಷೇತ್ರಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಎನ್.ಆರ್.ರಂಗಯ್ಯ ಅವರು ಅಪಾರ ಕೊಡುಗೆ ನೀಡುವ ಮೂಲಕ ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಅವರ ಕಾರ್ಯವೈಖರಿಯೇ ಅನುಕರಣೀಯ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನು ವಾರ ಆಯೋಜಿಸಿದ್ದ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳನ್ನು ಕೆ.ವಿ.ಶಂಕರಗೌಡ ಕಟ್ಟಿದವರಾದರೆ, ನಂತರ ಎಚ್.ಡಿ.ಚೌಡಯ್ಯ ಅವರು ಮುಂದುವರಿಸಿಕೊಂಡು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬೇರೂರಲು ಕಾರಣವಾಗಿದ್ದಾರೆ. ಹೀಗಾಗಿ ಸಹಕಾರ ಚಳವಳಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಪಾತ್ರ ದೊಡ್ಡದಿದೆ ಎಂದರು.

ಸ್ವಾತಂತ್ರ್ಯ ನಂತರದಲ್ಲಿ ಸಹಕಾರ ಚಳವಳಿಯ ಕ್ರಾಂತಿಗೆ ಭಾರತದ ಭೂಮಿಕೆ ನಾಂದಿಯಾಯಿತು. ರಂಗಯ್ಯ ಅವರಂಥವರು ಈ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದವರಲ್ಲಿ ಒಬ್ಬರಾಗಿರುವ ಅವರ ಹೆಸರಿನಲ್ಲಿ ಬಿ.ಎಲ್‌.ದೇವರಾಜು ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಸೂಕ್ತವಾಗಿದೆ. ಜನಸಾಮಾನ್ಯರ ಹಣಕ್ಕೆ ಬೆಲೆ ಇದೆ ಎಂಬುದನ್ನು ಅರಿತು ಕಾರ್ಯ ನಿರ್ವಹಿಸಿದವರು ಎಂದು ವಿವರಿಸಿದರು.

ಸಹಕಾರ ಸಂಘಗಳ ಹೆಚ್ಚುವರಿ ನಿರ್ದೇಶಕ ಎಚ್.ಜಯದೇವ್ ಮಾತ ನಾಡಿ, ರಂಗಯ್ಯ ಅವರು ರೈತಾಪಿ ಕುಟುಂಬದಲ್ಲಿ ಜನಿಸಿದವರಾದರೂ ಅವರ ಕಾರ್ಯವೈಖರಿ ಎಲ್ಲರಿಗೂ ಅನುಕರಣೀಯವಾಗಿದೆ. ಅವರು ಸಹಾಯಕ ಉಪನೋಂದಣಾಧಿ ಕಾರಿಯಾಗಿ ವೃತ್ತಿಜೀವನ ಪ್ರಾರಂಭಿಸಿ ದಕ್ಷತೆಯಿಂದ ಸೇವೆ ಸಲ್ಲಿಸಿ ಸಹಕಾರ ಇಲಾಖೆಯ ಮತ್ತು ರೈತರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಹಕಾರ ಇಲಾಖೆಯಲ್ಲಿ ಪೂಜನೀಯ ಸ್ಥಾನವನ್ನು ಹೊಂದಿದ್ದರು ಎಂದರು.

ಪ್ರಶಸ್ತಿ ಸ್ವೀಕರಿಸಿದ ಕೆ.ಆರ್.ಪೇಟೆ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ರಂಗಯ್ಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅದೇರೀತಿ ಜಯಪ್ರಕಾಶಗೌಡ ಅವರು ಕರ್ನಾಟಕ ಸಂಘವನ್ನು ಉತ್ತಮವಾಗಿ ಕಟ್ಟಿ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಯಾವುದೇ ಸಂಘ ಸಂಸ್ಥೆ ಕಟ್ಟಬೇಕಾದರೆ ಒಬ್ಬ ಆ ಸಂಸ್ಥೆಗೆ ಪ್ರಾಣ ಕೊಡುವವರಾಗಿದ್ದು, ಐದು ಜನ ಪ್ರಾಮಾಣಿಕವಾಗಿ ಸಾರ್ವಜನಿಕರ ದುಡ್ಡು ಹೊಡೆಯದೇ ಕಾರ್ಯ ನಿರ್ವಹಿಸುವವರು ಇರಬೇಕು. ಆಗ ಮಾತ್ರ ಆ ಸಂಸ್ಥೆಯನ್ನು ಉತ್ತಮವಾಗಿ ಕಟ್ಟಬಹುದು ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಹೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಎಂ.ಶ್ರೀನಿವಾಸ್, ರಂಗಯ್ಯ ಅವರ ಪುತ್ರ, ಎಂಜಿನಿಯರ್ ಎನ್.ಆರ್.ಮಂಜುನಾಥ್, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್ ಕುಮಾರ್, ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್,ಬೆಂಗಳೂರಿನ ಕೆಐಎಡಿಬಿ ಸಿಇಒ ಡಾ.ಎನ್.ಶಿವಶಂಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT