ಸೋಮವಾರ, ಜೂನ್ 14, 2021
26 °C
ಜಿ.ಪಂ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ; ಅಧಿಕಾರ ಸ್ಥಾಪಿಸಲು ಹರಸಾಹಸ

ಸದಸ್ಯರ ಆಯ್ಕೆಗೆ ಸಚಿವ, ಸಂಸದೆ, ಶಾಸಕರ ಹಾಜರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಯ ಅಭಿವೃದ್ಧಿಗಾಗಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗೂ ಹಾಜರಾಗದ ಹಲವು ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಬುಧವಾರ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಡೆದ ಜಿ.ಪಂ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಮುಂದಿನ ಸಾಲಿನಲ್ಲೇ ಕುಳಿತಿದ್ದರು.

ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಎಲ್ಲಾ ಅರ್ಹ ಮತದಾರರ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ, ಪಾಂಡವಪುರ ಶಾಸಕ ಸಿ.ಎಸ್‌.ಪುಟ್ಟರಾಜು, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ, ಮಳವಳ್ಳಿ ಶಾಸಕ ಕೆ.ಅನ್ನದಾನಿ, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಮಂಡ್ಯ ಶಾಸಕ ಎಂ.ಶ್ರೀನಿವಾಸ್‌ , ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಎನ್‌.ಅಪ್ಪಾಜಿಗೌಡ ಹಾಜರಿದ್ದರು. ಕೋವಿಡ್‌ ಚಿಕಿತ್ಸೆ ಪಡೆಯುತ್ತಿರುವ ಕಾರಣ ನಾಗಮಂಗಲ ಶಾಸಕ ಸುರೇಶ್‌ಗೌಡ ಹಾಜರಿರಲಿಲ್ಲ.

ಇದಕ್ಕೂ ಮೊದಲು ಕೋರಂಗೆ ಅವಶ್ಯಕವಾದ 29 ಸದಸ್ಯರ ಹಾಜರಾತಿಯೊಂದಿಗೆ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ನಡೆಯುತ್ತಿತ್ತು. ಆದರೆ ಈ ಬಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ ಅವರನ್ನು ಕೆಳಗಿಳಿಸಲು ಹಾತೊರೆಯುತ್ತಿರುವ ಜೆಡಿಎಸ್‌ ಶಾಸಕರು ಅಧಿಕಾರ ಸ್ಥಾಪನೆಗಾಗಿ ತಾವೇ ಸ್ವತಃ ರಂಗ ಪ್ರವೇಶ ಮಾಡಿದ್ದರು. ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌, ಪಕ್ಷೇತರ ಸದಸ್ಯರ ಬೆಂಬಲ ಪಡೆದಿರುವ ಅಧ್ಯಕ್ಷರು ಕೂಡ ಚುನಾವಣೆಯನ್ನು ಪ್ರತಿಷ್ಠೆಯಾಗಿಯೇ ಸ್ವೀಕಾರ ಮಾಡಿದ್ದರು. ಅವರ ಬೆಂಬಲಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ನಿಂತಿದ್ದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೆಡಿಎಸ್‌ ಸದಸ್ಯೆ ಜೆ.ಪ್ರೇಮಕುಮಾರಿ ಅವರನ್ನೂ ಕರೆತರಲಾಗಿತ್ತು. ಜೆಡಿಎಸ್‌ ಹಾಗೂ ಅಧ್ಯಕ್ಷೆ ನಾಗರತ್ನಾ ಬಣದ ನಡುವೆ ಅಧಿಕಾರದ ಪೈಪೋಟಿ ನಡೆದಿತ್ತು.

ಎಲ್ಲವೂ ರಾಜಕಾರಣಕ್ಕಾಗಿ: ಸ್ಥಾಯಿ ಸಮಿತಿ ಸದಸ್ಯರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಆದರೆ ಜಿಲ್ಲಾ ಪಂಚಾಯಿತಿಯ ಅನುದಾನ ಹಂಚಿಕೆಯಲ್ಲಷ್ಟೇ ಅವರು ಪಾತ್ರ ವಹಿಸುತ್ತಾರೆ. ಆದರೆ ಜಿಲ್ಲಾ ಪಂಚಾಯಿತಿಯ ಆಡಳಿತದಲ್ಲಿ ಹಸ್ತಕ್ಷೇಪ ವಿಚಾರ ಬಂದಾಗ ಇವರು ಗಮನ ಸೆಳೆಯುತ್ತಾರೆ. ರಾಜಕಾರಣ ಮಾಡುವುದಕ್ಕಾಗಿ ಈ ಸ್ಥಾನಗಳು ಪ್ರಮುಖವಾಗಿವೆ. ಬಹುಮತ ಇರುವ ಪಕ್ಷದಲ್ಲಿ ಹೆಚ್ಚಿನ ಸ್ಥಾನ ಪಡೆಯುವ ಉದ್ದೇಶದಿಂದ ಜೆಡಿಎಸ್‌ ಶಾಸಕರು ಹಾಜರಾಗಿದ್ದರು.

ಒಟ್ಟು 33 ಜಿಪಂ ಸದಸ್ಯರು ಸೇರಿ 7 ಮಂದಿ ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು, ಸಂಸದರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ ಹಾಕಲು ಅರ್ಹತೆ ಪಡೆಯುತ್ತಾರೆ. ಎಲ್ಲರೂ ಸೇರಿದತೆ 58 ಮತದಾರರ ಹಕ್ಕು ಚಲಾವಣೆಗೆ ಅರ್ಹರಾಗಿದ್ದರು. ಸಾಮಾನ್ಯ, ಹಣಕಾಸು, ಕೃಷಿ ಮತ್ತು ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ನ್ಯಾಯ (5 ಸಮಿತಿ) ಸಮಿತಿಗಳಿಗೆ 33 ಸದಸ್ಯರನ್ನು ಆಯ್ಕೆಯಾದರು.

************

ಜೆಡಿಎಸ್‌ಗೆ 31 ಸ್ಥಾನ

28 ಸದಸ್ಯರನ್ನು ಹೊಂದಿರುವ ಜೆಡಿಎಸ್‌, ಸ್ಥಾಯಿ ಸಮಿತಿಯಲ್ಲೂ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಯಿತು. ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೂ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 33 ಸದಸ್ಯ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ಅವರಲ್ಲಿ 31 ಸ್ಥಾನಗಳಲ್ಲಿ ಜೆಡಿಎಸ್‌ ಸದಸ್ಯರು ಗೆಲವು ಸಾಧಿಸಿದರು. ಇನ್ನೆರಡು ಸ್ಥಾನಗಳು ಸಮಬಲ ಸಾಧಿಸಿದ ಕಾರಣ ಲಾಟರಿ ಎತ್ತಿಸಲಾಯಿತು. ಲಾಟರಿಯಲ್ಲಿ ಅಧ್ಯಕ್ಷೆ ನಾಗರತ್ನಾ ಅವರ ಬೆಂಬಲಿಗರ ಬಣದ (ಕಾಂಗ್ರೆಸ್‌) ಸದಸ್ಯರು ಗೆಲವು ಸಾಧಿಸಿದರು.

ಆಯ್ಕೆ ಬೆನ್ನಲ್ಲೇ ರಾಜೀನಾಮೆ

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಆಯ್ಕೆಯಾದ 10 ನಿಮಿಷದಲ್ಲೇ ಬೆಳಗೊಳ ಕ್ಷೇತ್ರದ ಜೆಡಿಎಸ್‌ ಸದಸ್ಯೆ ಸವಿತಾ ಲೋಕೇಶ್‌ ರಾಜೀನಾಮೆ ನೀಡಿದ್ದಾರೆ. ಮುಖಂಡರು ಭರವಸೆ ನೀಡಿದ್ದ ಸಮಿತಿ ಬಿಟ್ಟು ಕೃಷಿ ಮತ್ತು ಕೈಗಾರಿಕಾ ಸಮಿತಿಗೆ ಆಯ್ಕೆ ಮಾಡಿದ್ದಾರೆ ಎಂಬ ಬೇಸರದಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಸವಿತಾ ಸಂಪರ್ಕಕ್ಕೆ ಸಿಗಲಿಲ್ಲ.

 ‘ಏನೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಮುಖಂಡರ ಜೊತೆ ಕುಳಿತು ಚರ್ಚಿಸಿ ಸರಿಪಡಿಸಲಾಗುವುದು’ ಎಂದು ಜೆಡಿಎಸ್‌ ಮುಖಂಡರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು