ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಹಾಯದ ನೆಪದಲ್ಲಿ ರಾಜಕಾರಣ

ಮೇಲುಕೋಟೆ ಕ್ಷೇತ್ರದಲ್ಲಿ ಬಹಿರಂಗ ಜಿದ್ದಾಜಿದ್ದಿಗೆ ಕಾರಣವಾದ ‘ಸಮಾಜಸೇವೆ’
Last Updated 21 ಜೂನ್ 2021, 13:09 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಸಂಕಷ್ಟ ಸಮಯದಲ್ಲಿ ಜಿಲ್ಲೆಗೆ ಅಪಾರ ಪ್ರಮಾಣದ ಸಹಾಯ ಹರಿದು ಬಂದಿದ್ದು ಹಲವರು ಪ್ರಚಾರದ ಹಂಗಿಲ್ಲದೇ ತನು–ಮನ–ಧನ ಅರ್ಪಿಸಿದ್ದಾರೆ. ಆದರೆ ಕೆಲ ರಾಜಕೀಯ ಪಕ್ಷಗಳ ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಆಹಾರ ಧಾನ್ಯಗಳ ಕಿಟ್‌ ವಿತರಣೆ ಮಾಡುತ್ತಿರುವುದು ಬಹಿರಂಗಗೊಂಡಿದೆ.

ಉದ್ದಿಮೆದಾರರು, ಚಲನಚಿತ್ರ ನಿರ್ಮಾಪಕರು, ಹೊರದೇಶಗಳಲ್ಲಿ ನೆಲೆಸಿರುವವರು ಜಿಲ್ಲೆಗೆ ಐಸಿಯು ಘಟಕ, ಆಮ್ಲಜನಕ ಉತ್ಪಾದನಾ ಘಟಕ, ಕಾನ್ಸಂಟ್ರೇಟರ್‌, ವೈದ್ಯಕೀಯ ಉಪಕರಣ ನೀಡಿದ್ದಾರೆ. ಸಾಮಾನ್ಯ ಜನರು ಕೂಡ ತಾವು ಉಳಿತಾಯ ಮಾಡಿದ ಹಣದಲ್ಲಿ ಸಹಾಯ ನೀಡಿದ್ದಾರೆ. ವಿವಿಧ ಸಂಘಟನೆಗಳು ಯಾವುದೇ ಪ್ರಚಾರದ ಹಂಗಿಲ್ಲದೇ, ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡಿದ್ದಾರೆ.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ಜಿಲ್ಲೆಗೆ ಅಪಾರ ಪ್ರಮಾಣದ ನೆರವು ಹರಿದು ಬಂದಿದೆ. ಆದರೆ ರಾಜಕೀಯ ಪಕ್ಷಗಳ ಮುಖಂಡರು ‘ಸಮಾಜಸೇವೆ’ಯ ಹೆಸರಿನಲ್ಲಿ ಮಾಡುತ್ತಿರುವ ಸಹಾಯದ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರ ಇರುವುದು ರಹಸ್ಯವಾಗಿ ಉಳಿದಿಲ್ಲ. ಮೇಲುಕೋಟೆ ಕ್ಷೇತ್ರದಲ್ಲಿ ಸಮಾಜಸೇವೆ ಎಂಬುದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಕಾಂಗ್ರೆಸ್‌ ಯುವ ಮುಖಂಡ, ಮೈಸೂರು ಜಿಲ್ಲೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಪಾಂಡವಪುರ ತಾಲ್ಲೂಕಿನಾದ್ಯಂತ ಆಹಾರಧಾನ್ಯ, ವೈದ್ಯಕೀಯ ಪರಿಕರಗಳ ಕಿಟ್‌ ವಿತರಿಸಿದ್ದಾರೆ. ತಾಲ್ಲೂಕು ಆಸ್ಪತ್ರೆಗೆ 3 ಆಂಬುಲೆನ್ಸ್‌, ಮೇಲುಕೋಟೆ ಕ್ಷೇತ್ರ ವ್ಯಾಪ್ತಿ, ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಗೆ 1 ಆಂಬುಲೆನ್ಸ್‌ ವಿತರಣೆ ಮಾಡಿದ್ದಾರೆ. ಸಾವಿರಾರು ಜನರಿಗೆ ವೈದ್ಯಕೀಯ, ಆಹಾರ ಧಾನ್ಯಗಳ ಕಿಟ್‌ ವಿತರಣೆ ಮಾಡಿದ್ದಾರೆ.

‘ಆಂಬುಲೆನ್ಸ್‌ಗಳ ಮೇಲೆ ರೇವಣ್ಣ ಚಿತ್ರ ಹಾಕಿಸಿರುವುದು, ಅವು ಕ್ಷೇತ್ರದಾದ್ಯಂತ ಓಡಾಡುತ್ತಿರುವುದು ಹಾಲಿ ಶಾಸಕ ಸಿ.ಎಸ್‌.ಪುಟ್ಟರಾಜು ಅವರಿಗೆ ನುಂಗಲಾಗದ ತುತ್ತಾಗಿದೆ. ರೇವಣ್ಣ ಅವರ ಶಕ್ತಿ ಪ್ರದರ್ಶನ ಸಹಿಸಿಕೊಳ್ಳದ ಅವರು ಅಧಿಕಾರಿಗಳನ್ನು ಬಳಸಿಕೊಂಡು ಆಂಬುಲೆನ್ಸ್‌ಗಳನ್ನು ಜಪ್ತಿ ಮಾಡಿಸಿದ್ದಾರೆ. ಕೋವಿಡ್‌ ನಿಯಮ ಉಲ್ಲಂಘನೆ ಹೆಸರಿನಲ್ಲಿ ಬೆಂಬಲಿಗರ ಮೇಲೆ ಎಫ್‌ಐಆರ್‌ ದಾಖಲು ಮಾಡುವಂತೆ ಮಾಡಿದ್ದಾರೆ. ಪುಟ್ಟರಾಜು ಅವರಿಗೆ ಈ ಅಸಹಿಷ್ಣುತೆ ಏಕೆ’ ಎಂದು ರೇವಣ್ಣ ಬೆಂಬಲಿಗರು ಪ್ರಶ್ನಿಸುತ್ತಾರೆ.

ರೇವಣ್ಣ ವಿರುದ್ಧ ಸಿ.ಎಸ್‌.ಪುಟ್ಟರಾಜು ಅವರು ಎಲ್ಲೂ ಬಹಿರಂಗವಾಗಿ ಹೇಳಿಕೆ ಕೊಟ್ಟಿಲ್ಲ. ಆದರೆ, ಅಧಿಕಾರಗಳ ಮೇಲೆ ಒತ್ತಡ ತಂದು ಅವರು ಸಹಾಯ ಮಾಡದಂತೆ ತಡೆಯುತ್ತಾರೆ ಎಂಬ ಆರೋಪ ಇದೆ. ಕೆ.ಎಸ್‌.ಪುಟ್ಟಣ್ಣಯ ಕುಟುಂಬ ಸದಸ್ಯರು ಮಾಡಿರುವ ಸಹಾಯದ ವಿರುದ್ಧವೂ ಇದೇ ನೀತಿ ಅನುಸರಿಸುತ್ತಿದ್ದಾರೆ ಎಂದು ರೈತಸಂಘದ ಸದಸ್ಯರು ಆರೋಪಿಸುತ್ತಾರೆ.

‘ರೇವಣ್ಣ ನಿಜವಾದ ಸಮಾಜ ಸೇವಕನಾಗಿದ್ದರೆ ಪಾಂಡವಪುರಕ್ಕೆ ಮಾತ್ರ ಸಹಾಯ ಮಾಡುವ ಅಗತ್ಯವಿರಲಿಲ್ಲ. ಬೇರೆ ಕ್ಷೇತ್ರಗಳ ಜನರಿಗೆ, ತಾವು ಉದ್ಯಮ ನಡೆಸುವ ಮೈಸೂರು ಜಿಲ್ಲೆಯಲ್ಲಿ ಸಹಾಯ ಮಾಡಬಹುದಾಗಿತ್ತು. ಕೋವಿಡ್‌ ಅವಧಿಯಲ್ಲಿ ಜನರನ್ನು ಸೇರಿಸಿ ಗದ್ದಲ, ಗೊಂದಲ ಸೃಷ್ಟಿಸಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಬೆಂಬಲಿಗರ ವಿರುದ್ಧ ದಾಖಲಾಗಿದೆ’ ಎಂದು ಪುಟ್ಟರಾಜು ಬೆಂಬಲಿಗರು ತಿಳಿಸುತ್ತಾರೆ.

ರೇವಣ್ಣ ಕೊಟ್ಟ ನೆರವನ್ನು ಅಧಿಕಾರಿಗಳೇ ಸ್ವೀಕಾರ ಮಾಡಿದ್ದಾರೆ. ನಂತರ ಅವರ ವಿರುದ್ಧವೇ ಕ್ರಮ ಕೈಗೊಂಡಿದ್ದಾರೆ. ರಾಜಕೀಯ ಮುಖಂಡರ ಜಿದ್ದಾಜಿದ್ದಿಯಿಂದಾಗಿ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ.

‘ಆಂಬುಲೆನ್ಸ್‌ಗಳಿಗೆ ನಿಯಮಾನುಸಾರ ಮುಖಂಡರ ಭಾವಚಿತ್ರ ಹಾಕಬಾರದು. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

****

ಅವತಾರ ಎತ್ತಿ ಬಂದವರು...

ಪಾಂಡವಪುರ ತಾಲ್ಲೂಕು ಮಾತ್ರವಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ‘ರಾಜಕಾರಣ ಉದ್ದೇಶದ ಸಹಾಯ’ ತೀವ್ರವಾಗಿದೆ. ಮಂಡ್ಯ ತಾಲ್ಲೂಕಿನಲ್ಲಂತೂ ಬೇರೆಡೆ ನೆಲೆಸಿರುವ ಮುಖಂಡರು ಅವತಾರ ಎತ್ತಿ ಬಂದಿದ್ದಾರೆ. ಕೋವಿಡ್‌ 1ನೇ ಅಲೆಯಲ್ಲಿ ಇಲ್ಲದವರು, ಈಗ ಎಲ್ಲಿಂದ ಬಂದರು ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

*******

ಸಿ.ಎಸ್‌.ಪುಟ್ಟರಾಜು ಅವರು ಎಷ್ಟೇ ತಡೆದರೂ ನಾನು ಸಮಾಜ ಸೇವೆ ಮಾಡುವುದನ್ನು ನಿಲ್ಲಿಸುವುದಿಲ್ಲ. ನನ್ನ ಸೇವೆ ನಿರಂತರವಾಗಿ ನಡೆಯುತ್ತದೆ

–ಬಿ.ರೇವಣ್ಣ, ಸಮಾಜಸೇವಕ

ನಮ್ಮ ವಿರುದ್ಧ ಮಾತನಾಡಿದರೆ ದೊಡ್ಡ ನಾಯಕರಾಗಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಅದಕ್ಕೆಲ್ಲಾ ಜನರು ತಕ್ಕ ಉತ್ತರ ಕೊಡುತ್ತಾರೆ

–ಸಿ.ಎಸ್‌.ಪುಟ್ಟರಾಜು, ಶಾಸಕ, ಮೇಲುಕೋಟೆ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT