ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋವಿಡ್ ಹೆಚ್ಚಳ

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಉಪವಿಭಾಗಾಧಿಕಾರಿ ಆಕ್ರೋಶ
Last Updated 3 ಮೇ 2021, 3:49 IST
ಅಕ್ಷರ ಗಾತ್ರ

ನಾಗಮಂಗಲ: ‘ಕೋವಿಡ್ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ನೇಮಿಸಿರುವ ಅಧಿಕಾರಿಗಳಲ್ಲಿ ಕೆಲವು ಬೇಜವಾಬ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕೋವಿಡ್ ಹೆಚ್ಚುತ್ತಿದೆ’ ಎಂದು ಉಪವಿಭಾಗಾಧಿಕಾರಿ ಶಿವಾನಂದ ಅವರು ಸಭೆಗೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಟಿಎಚ್‌ಒ‌ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಕೋವಿಡ್ ನಿರ್ವಹಣೆ ಮತ್ತು ನಿಯಂತ್ರಣ ಕುರಿತಂತೆ ನೇಮಿಸಲಾಗಿರುವ ನೋಡೆಲ್ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸೂಚನೆ ನೀಡಿದರೂ ಸಹ ಏಕೆ ಸಂಬಂಧಿಸಿದ ನೋಡೆಲ್ ಅಧಿಕಾರಿಗಳು ಸಭೆಗೆ ಗೈರಾಗಿದ್ದನ್ನು ಕಂಡು, ಅಧಿಕಾರಿಗಳ ಹೆಸರು ಗೊತ್ತಿಲ್ಲ ಎಂದ ಮೇಲೆ ಏನು ಕೆಲಸ ಮಾಡುತ್ತೀರಾ ಹೇಳಿ ಎಂದು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನೋಡೆಲ್ ಅಧಿಕಾರಿಗಳ ಹಾಜರಾತಿಯನ್ನು ತೆಗೆದುಕೊಂಡು ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

‘ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳುಭಾನುವಾರ ರಜೆ ಎನ್ನುವ ಮನೋಭಾವನೆಯನ್ನು ಬಿಟ್ಟು ಕರ್ತವ್ಯದಲ್ಲಿ ತೊಡಗುವ ಕಡೆಗೆ ಗಮನಹರಿಸಿ. ಅಲ್ಲದೇ ಗೈರಾಗಿದ್ದ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತಗೆದುಕೊಂಡು ಇದೇ ಕಡೆಯ ಅವಕಾಶ. ಮುಂದೆ ಇಂತಹ ನಿರ್ಲಕ್ಷ್ಯ ಕಂಡುಬಂದರೆ ಮುಂದೆ ಏನೇ ಆದರೂ ಅದಕ್ಕೆ ನೀವೆ ಹೊಣೆಯಾಗುತ್ತೀರಾ’ ಎಂದು ಸೂಚಿಸಿದರು.

‘ಹಾಜರಿದ್ದ ಅಧಿಕಾರಿಗಳೊಂದಿಗೆ ಕೋವಿಡ್ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಚರ್ಚಿಸಿದರು. ಕೋವಿಡ್ ನಿಯಂತ್ರಣ ಉದ್ದೇಶದಿಂದ ಪ್ರತಿ ಎರಡು ಗ್ರಾ.ಪಂ ಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನಿರಂತರವಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ನಾವು ಅವರಿಗೆ ಬೆಂಬಲವಾಗಿ ಕೆಲಸ ಮಾಡಬೇಕಾಗಿದೆ. ಮಾನವ ಕುಲವನ್ನೇ ನಾಶ ಮಾಡುತ್ತಿರುವ ಕೋವಿಡ್ ಸೋಂಕಿನ‌ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು’ ಎಂದು ಹೇಳಿದರು.

‘ಜನರಿಗೆ ಕೋವಿಡ್ ಬಗ್ಗೆ ಮತ್ತಷ್ಟು ತಿಳಿವಳಿಕೆ ನೀಡುವ ಮೂಲಕ ಹರಡುವಿಕೆಯನ್ನು ತಡೆಯಬೇಕಾಗಿದೆ‌‌. ಜೊತೆಗೆ ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಪರಿಣಾಮಕಾರಿಯಾಗಿ ಗುರುತಿಸಿ ಪರೀಕ್ಷೆ ನಡೆಸಿ ಕ್ವಾರಂಟೈನ್‌ಗೆ ಒಳಪಡಿಸಬೇಕು. ಜೊತೆಗೆ ಹೋಂ ಕ್ವಾರಂಟೈನ್‌ನಲ್ಲಿರುವ ರೋಗಿಗಳು ಹೊರಗಡೆ ಓಡಾಡುತ್ತಿರುವುದು ಕಂಡು ಬಂದರೆ ಅವರ ಮೇಲೆ ಎಫ್‌ಐಆರ್ ದಾಖಲಿಸಿ’ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ಕುಂಞಿ ಅಹಮ್ಮದ್, ಟಿಎಚ್‌ಒ ರಮೇಶ್, ಡಿವೈಎಸ್ಪಿ ನವೀನ್ ಕುಮಾರ್, ಸಿಪಿಐ ಸುಧಾಕರ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವೆಂಕಟೇಶ್, ಡಾ‌.ಶರತ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT