ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಉಳಿದ ಸೋಂಕಿತರು: ಆಕ್ರೋಶ

ಮದುವೆಗಳಲ್ಲಿ ಸಾವಿರಾರು ಜನ ಭಾಗಿ, ಅಧಿಕಾರಿಗಳ ವಿರುದ್ಧ ವಿರುದ್ಧ ಶಾಸಕರ ಕಿಡಿ
Last Updated 28 ಜೂನ್ 2021, 13:07 IST
ಅಕ್ಷರ ಗಾತ್ರ

ಮಂಡ್ಯ: ‘ಕೋವಿಡ್‌ ಕೇರ್‌ ಕೇಂದ್ರ ಸ್ಥಾಪಿಸಿದ್ದರೂ ಸೋಂಕಿತರನ್ನು ಮನೆಯಲ್ಲೇ ಉಳಿಸಲಾಗುತ್ತಿದೆ. ಅಧಿಕಾರಿಗಳು ನಿಯಮ ಪಾಲನೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದು ಸೋಮವಾರ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಮಳವಳ್ಳಿ ಶಾಸಕ ಕೆ.ಅನ್ನದಾನಿ ‘ಜಿಲ್ಲೆಯಾದ್ಯಂತ ಕೋವಿಡ್‌ ಕೇರ್‌ ಕೇಂದ್ರ ಸ್ಥಾಪಿಸಿದ್ದರೂ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರನ್ನು ಮನೆಯಲ್ಲೇ ಉಳಿಸಿದ್ದಾರೆ. ಆ ಮೂಲಕ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರೋಗಿಗಳ ಮನೆಯಲ್ಲಿ ಪ್ರತ್ಯೇಕವಾಗಿ ಇರುತ್ತಿಲ್ಲ, ಟಿ ಅಂಗಡಿ, ಮದ್ಯದ ಅಂಗಡಿಗಳಿಗೆ ಬಂದು ಇತರರಿಗೆ ಕೋವಿಡ್‌ ಹರಡಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿ ಗೂಡಿಸಿದ ನಾಗಮಂಗಲ ಶಾಸಕ ಕೆ.ಸುರೇಶ್‌ಗೌಡ ‘ನಮ್ಮ ತಾಲ್ಲೂಕಿನಲ್ಲಿ ಸೋಂಕಿತರನ್ನು ಚಿಕಿತ್ಸೆಯ ಮಧ್ಯದಲ್ಲೇ ರೋಗಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ಸರ್ಕಾರದ ಕಾರ್ಯಸೂಚಿ ಉಲ್ಲಂಘನೆ ಮಾಡುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳು, ಕೋವಿಡ್‌ ಕೇರ್‌ ಕೇಂದ್ರಗಳು ಖಾಲಿ ಇದ್ದರೂ ಮನೆಯಲ್ಲಿ ಉಳಿಸುವುದು ಸರಿಯಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಸಿ.ನಾರಾಯಣಗೌಡ, ವಿವಿಧೆಡೆ ಕೋವಿಡ್‌ ನಿಯಮಗಳು ಉಲ್ಲಂಘನೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ತಪ್ಪು ಎಸಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರದ ಮಾರ್ಗಸೂಚಿಯಂತೆ ಮದುವೆಗೆ ತಹಶೀಲ್ದಾರ್‌ ಅನುಮತಿ ಪಡೆಯಬೇಕು. ಆದರೆ ವಿವಿಧೆಡೆ ಅನುಮತಿ ಪಡೆಯದೇ ಮದುವೆ ಮಾಡುತ್ತಿದ್ದಾರೆ. 50 ಜನ ಮಾತ್ರ ಸೇರಬೇಕು ಎಂಬ ನಿಯಮವಿದೆ. ಆದರೆ ಸಾವಿರಾರು ಜನರನ್ನು ಸೇರಿಸಿ ಮದುವೆ ಮಾಡಲಾಗುತ್ತಿದೆ. ಇದರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

‘ವಿವಿಧ ಪಕ್ಷಗಳು ಮುಖಂಡರು ಕಿಟ್‌ ನೀಡುವ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪೊಲೀಸರು ಇದರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲು ಮಾಡದೇ ನಾಯಕರುಗಳಿಗೆ ಭದ್ರತೆ ನಿಡುತ್ತಿದ್ದಾರೆ’ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ನಾರಾಯಣಗೌಡ ಪೊಲೀಸರ ವಿರುದ್ಧ ಕಿಡಿಕಾರಿದರು. ಸಭೆಯಲ್ಲಿದ್ದ ಎಎಸ್‌ಪಿ ಧನಂಜಯ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಎಸ್‌.ಅಶ್ವತಿ ಮಾತನಾಡಿ ‘ಮದುವೆಗೆ ಅನುಮತಿ ಕೊಟ್ಟ ನಂತರ ತಹಶೀಲ್ದಾರ್‌ಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ನಿಗಾ ಇಡುವಲ್ಲಿ ವಿಫಲಗಾರುತ್ತಿದ್ದಾರೆ. ಈ ಬಗ್ಗೆ ಹಲವು ದೂರುಗಳು ಬಂದಿವೆ. ಇನ್ನು ಮುಂದೆ ಪ್ರಕರಣ ದಾಖಲು ಮಾಡುವುದು ಮಾತ್ರವಲ್ಲದೇ ಹೆಚ್ಚು ಜರನು ಸೇರದಂತೆ ನಿಗಾ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಎಚ್‌ಒ ಡಾ.ಟಿ.ಎನ್‌.ಧನಂಜಯ ಮಾಹಿತಿ ನೀಡಿ ‘ಮುಂಬರುವ 3ನೇ ಕೋವಿಡ್‌ ಅಲೆ ನಿಯಂತ್ರಣಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 4 ಸಾವಿರ ಮಕ್ಕಳಿಗೆ ಅಪಾಯ ಎದುರಾಗಬಹುದು. 365 ಮಕ್ಕಳು ಐಸಿಯುಗೆ ಹೋಗುವ ಸಂಭವವಿದೆ ಎಂದು ಅಂದಾಜು ಮಾಡಲಾಗಿದೆ’ ಎಂದರು.

‘ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗಾಗಿ 150 ಆಮ್ಲಜನಕಯುಕ್ತ ಹಾಸಿಗೆ ಸಿದ್ಧಪಡಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗಾಗಿ 6 ಐಸಿಯು ಇದ್ದು ಅವುಗಳನ್ನು 30ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 8 ವೆಂಟಿಲೇಟರ್‌ ಇದ್ದು ಅವುಗಳನ್ನು 33ಕ್ಕೆ ಹೆಚ್ಚಿಸಲು ಚಿಂತಿಸಲಾಗಿದೆ’ ಎಂದರು.

ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಎಸ್‌.ಅಶ್ವತಿ ಇದ್ದರು.

ನಾವು ಶಾಸಕರಲ್ಲವೇ?

ಶಾಸಕ ಸುರೇಶ್‌ಗೌಡ ಮಾತನಾಡಿ ‘ಕೋವಿಡ್‌ ಕುರಿತಂತೆ ಮಾಜಿ ಶಾಸಕರು ನಮ್ಮ ಕ್ಷೇತ್ರದಲ್ಲಿ ಸಭೆ ನಡೆಸಿದ್ದು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ನಾವೇಕೆ ಶಾಸಕರಾಗಿ ಇರಬೇಕು’ ಎಂದು ಪ್ರಶ್ನಿಸಿದರು.

ಶಾಸಕ ಅನ್ನದಾನಿ ಮಾತನಾಡಿ ‘ಮಾಜಿ ಸಚಿವರು ಮಳವಳ್ಳಿಯಲ್ಲಿ ಕಾಮಗಾರಿ ಪರಿಶೀಲನೆ ಮಾಡುತ್ತಾರೆ. ಹಾಗಿದ್ದರೆ ನನ್ನ ಕೆಲಸ ಏನು’ ಎಂದು ಪ್ರಶ್ನಿಸಿದರು.

ಜಿ.ಪಂ ಸಿಇಒ ದಿವ್ಯಾಪ್ರಭು ಉತ್ತರಿಸಿ, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT