ಗುರುವಾರ , ಜೂನ್ 17, 2021
24 °C
ಕೊರೊನಾ ಸೋಂಕಿನಿಂದಾಗಿ ದಿನಕ್ಕೆ ಹೆಚ್ಚುತ್ತಿರುವ ಸಾವಿನ ಪ್ರಕರಣ, ಬುಧವಾರ ಗರಿಷ್ಠ 19 ಮಂದಿ ಸಾವು

ಕೋವಿಡ್‌: 16 ದಿನಗಳಲ್ಲಿ 79 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ ಎರಡನೇ ಅಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ. 16 ದಿನಗಳಲ್ಲಿ ಮಂದಿ 79 ಮಂದಿ ಕೊರೊನಾ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕೊರೊನಾ ಒಂದನೇ ಅಲೆಯಲ್ಲಿ ಇದ್ದ ಸಾವಿನ ಪ್ರಮಾಣಕ್ಕೂ ಎರಡನೇ ಅಲೆಯ ಸಾವಿನ ಪ್ರಮಾಣಕ್ಕೂ ವ್ಯತ್ಯಾಸವಿದ್ದು, ಕಡಿಮೆ ಅವಧಿಯಲ್ಲಿ ಅಧಿಕ ಸಾವಿನ ಪ್ರಕರಣಗಳು ದಾಖಲಾಗಿವೆ. ಬುಧವಾರ ಒಂದೇ ದಿನ ಜಿಲ್ಲೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಇದು ಇಲ್ಲಿಯವರೆಗಿನ ಗರಿಷ್ಠ ಸಾವಿನ ಪ್ರಕರಣವಾಗಿದೆ. ರೋಗ ಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯದೆ ರೋಗ ಉಲ್ಬಣಿಸಿದಾಗ ಆಸ್ಪತ್ರೆಗೆ ಬರುತ್ತಿರುವುದೇ ಸಾವಿನ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ನಿತ್ಯವೂ ಒಂದಂಕಿಯಲ್ಲಿದ್ದ ಸಾವಿನ ಪ್ರಮಾಣ, ಮೇ 5 ರಂದು ದಿಢೀರನೇ 19ಕ್ಕೆ ಏರಿಕೆಯಾಗಿದೆ. ಎರಡನೇ ಅಲೆ ಪ್ರಾರಂಭಕ್ಕೂ ಮುನ್ನ ಜಿಲ್ಲೆಯಲ್ಲಿ 154 ಮಂದಿ ಮೃತಪಟ್ಟಿದ್ದರು. ಆದರೆ ಎರಡೇ ತಿಂಗಳ ಅವಧಿಯಲ್ಲಿ ಸುಮಾರು 93 ಮಂದಿ ಜೀವ ಕಳೆದುಕೊಂಡಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಕರ್ಫ್ಯೂ ವಿಧಿಸಿದ್ದರೂ ಸೋಂಕಿನ ಪ್ರಮಾಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಮೊದಲಿಗಿಂತಲೂ ಅಧಿಕ ಪ್ರಮಾಣದ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಸುಮಾರು 1500 ಪ್ರಕರಣಗಳು ವರದಿಯಾಗುತ್ತಿವೆ. ಮೃತಪಟ್ಟವರಲ್ಲಿ ಬೆರಳೆಣಿಕೆ ಮಂದಿ 19ರಿಂದ 27 ವರ್ಷದವರಾಗಿದ್ದಾರೆ.

ಸಾವಿನ ಪ್ರಕರಣಗಳು ಆಗಾಗ್ಗೆ ವರದಿಯಾದರೂ ಜಿಲ್ಲೆಯ ಸಾವಿನ ಪ್ರಮಾಣ ಶೇ 0.07 ಆಗಿದೆ. ಈಗಾಗಲೇ ಕೊರೊನಾ ಪರೀಕ್ಷೆ
ಗಳನ್ನು ಹೆಚ್ಚಿಸಲಾಗಿದೆ. ಸಾರ್ವ
ಜನಿಕರು ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು ಎಂದು ಡಿಎಚ್‌ಒ ಡಾ.ಎಚ್‌.ಪಿ.ಮಂಚೇಗೌಡ ಮನವಿ ಮಾಡಿದ್ದಾರೆ.

1301 ಮಂದಿಗೆ ಸೋಂಕು: ಗುರುವಾರ ಒಂದೇ ದಿನ 1301 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 38145ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ಶೇ 30ಕ್ಕೆ ಏರಿಕೆಯಾಗಿದೆ.

ಮಂಡ್ಯ ತಾಲ್ಲೂಕು 479, ಮದ್ದೂರು 189, ಮಳವಳ್ಳಿ 195, ಪಾಂಡವಪುರ 127, ಶ್ರೀರಂಗಪಟ್ಟಣ 194, ಕೆ.ಆರ್‌.ಪೇಟೆ 14, ನಾಗಮಂಗಲ 78, ಹೊರಜಿಲ್ಲೆಯ 25 ಮಂದಿಗೆ ಸೇರಿದಂತೆ 1301 ಮಂದಿಗೆ ಸೋಂಕು ದೃಢಪಟ್ಟಿದೆ. ಗುರುವಾರ ಒಂದೇ ದಿನ 1191 ಮಂದಿ ಸೇರಿದಂತೆ ಇಲ್ಲಿಯವರೆಗೆ 29479 ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 8417 ಸಕ್ರಿಯ ಪ್ರಕರಣಗಳಿವೆ.

ಸರ್ಕಾರಿ ಆಸ್ಪತ್ರೆಯಲ್ಲಿ 664, ಖಾಸಗಿ ಆಸ್ಪತ್ರೆಯಲ್ಲಿ 206, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1179, ಮನೆ ಆರೈಕೆಯಲ್ಲಿ 6368 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಗುರುವಾರ 267 ರ‍್ಯಾಪಿಡ್‌, 4456 ಆರ್‌ಟಿಪಿಸಿಆರ್‌ ಸೇರಿದಂತೆ 4,723 ಪರೀಕ್ಷೆಗಳನ್ನು ಮಾಡಲಾಗಿದೆ. 155611 ರ‍್ಯಾಪಿಡ್‌, 526212 ಆರ್‌ಟಿಪಿಸಿಆರ್‌ ಸೇರಿದಂತೆ ಇಲ್ಲಿಯವರೆಗೆ 681823 ಪರೀಕ್ಷೆ ಮಾಡಲಾಗಿದೆ.

ಗುರುವಾರ ಕೊರೊನಾ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಮೃತಪಟ್ಟಿದ್ದು, ಇಲ್ಲಿಯವರೆಗೆ 247 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್ ಸೋಂಕಿತ ಆತ್ಮಹತ್ಯೆ
ಕೆರಗೋಡು:
ಸಮೀಪದ ಉಮ್ಮಡಹಳ್ಳಿ ಗ್ರಾಮದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಚೌಡಯ್ಯ (48) ಮೃತ ವ್ಯಕ್ತಿ. ಚೌಡಯ್ಯ ಅವರಿಗೆ ಕೆಲ ದಿನಗಳ ಹಿಂದೆ ಸೋಂಕು ತಗುಲಿದ್ದು, ಮನೆ ಆರೈಕೆಗೆ ಒಳಗಾಗಿದ್ದರು. 

ಬುಧವಾರ ಪತ್ನಿ ಲಲಿತಮ್ಮ ಅವರಿಗೂ ಸೋಂಕು ದೃಢಪಟ್ಟಿತ್ತು. ಸೋಂಕು ತಗುಲಿದ ದಿನದಿಂದಲೂ ಮಾನಸಿಕ ಒತ್ತಡದಲ್ಲಿದ್ದರು. ಬುಧವಾರ ರಾತ್ರಿಯೂ ಊಟವನ್ನು ಜತೆಯಲ್ಲೇ ಮಾಡಿದ್ದರು. ಆಗಲೂ ಕೋವಿಡ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಇರಲಿಲ್ಲ. ಮರಕ್ಕೆ ನೇಣು ಬಿಗಿದುಕೊಂಡ ವಿಷಯ ತಿಳಿಯಿತು ಎಂದು ಪತ್ನಿ ಲಲಿತಮ್ಮ ಹೇಳಿದರು.

ದಂಪತಿಗೆ ಪುತ್ರನಿದ್ದು ಶ್ರವಣಬೆಳಗೊಳದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು