ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನದಲ್ಲಿ ಶಾಸಕ ದರ್ಶನ್‌ ‍ಪುಟ್ಟಣ್ಣಯ್ಯ ಸ್ವದೇಶಕ್ಕೆ: ರೈತಸಂಘ

Published 4 ನವೆಂಬರ್ 2023, 16:13 IST
Last Updated 4 ನವೆಂಬರ್ 2023, 16:13 IST
ಅಕ್ಷರ ಗಾತ್ರ

ಪಾಂಡವಪುರ:‘ಅಮೆರಿಕಾದಲ್ಲಿರುವ ತಮ್ಮ ಕುಟುಂಬ, ಮಗನ ಅನಾರೋಗ್ಯ ಸಂಬಂಧ ಅಮೆರಿಕಾಕ್ಕೆ ತೆರಳಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ತವರಿಗೆ ಹಿಂತಿರುಗಲಿದ್ದಾರೆ.  ಇದಕ್ಕೆ ರಾಜಕಾರಣ ಬೆರೆಸುವುದು ಬೇಡ’ ಎಂದು ರೈತ ಸಂಘದ ಮುಖಂಡ ಚಿಕ್ಕಾಡೆ ಹರೀಶ್ ಹೇಳಿದರು.

‘ಮಗನ ಆರೋಗ್ಯ ಹದಗೆಟ್ಟಿದ್ದರಿಂದ ನೋಡಲು ಅಮೆರಿಕಾಕ್ಕೆ ಹೋಗಲೇಬೇಕಾದ ಅನೀವಾ‌ರ್ಯದಿಂದಾಗಿ ತೆರಳಿದ್ದಾರೆ. ಈ ಕಾರಣದಿಂದಾಗಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವಕ್ಕೆ ಹಾಜರಾಗಲಿಲ್ಲ. ಆದರೆ ತಾಲ್ಲೂಕು ಆಡಳಿತದ ಜತೆ ನಿರಂತರ ಸಂಪರ್ಕ ಸಾಧಿಸಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಲು ಕಾರಣರಾಗಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜಕಾರಣದ ಜತೆಗೆ ಕುಟುಂಬದ ಸದಸ್ಯರ ಆರೋಗ್ಯದ ಕಡೆಗೂ ಗಮನಹರಿಸಬೇಕಾಗುತ್ತದೆ. ಅವರ ಪ್ರವಾಸದಿಂದ ತಾಲ್ಲೂಕು ಆಡಳಿತದ ಯಾವುದೇ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿಲ್ಲ. ಶಾಸಕರ ಕಚೇರಿ ನಿತ್ಯ ತೆರೆದಿದ್ದು, 5 ಮಂದಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಆಲೋಚನೆ ಹಾಗೂ ಸ್ವಪ್ರಯತ್ನದಿಂದ ಪ್ರಾರಂಭವಾದ ಇ–ಆಫೀಸ್ ಮೇಲ್ ಮೂಲಕ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಶಾಸಕರು ಕಳೆದ 15 ದಿನಗಳಿಂದಲೂ ಸಾರ್ವಜನಿಕರ ಸಮಸ್ಯೆಗಳಿಗೆ ಇ ಮೇಲ್ ಮೂಲಕವೇ ಅಧಿಕಾರಿಗಳಿಗೆ ಸೂಚನೆ ನೀಡಿ ಬಗೆಹರಿಸುತ್ತಿದ್ದಾರೆ. ಆದರೆ ಈ ಹಿಂದಿನ ಶಾಸಕರು ಕಚೇರಿಗೆ ಸುಳಿಯುತ್ತಿರಲಿಲ್ಲ’ ಎಂದು ಹೇಳಿದರು.

‘ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ಪ್ರಯತ್ನದಿಂದಾಗಿ ತಾಲ್ಲೂಕು ಕಂದಾಯ ಇಲಾಖೆಯಲ್ಲಿನ ಎಲ್ಲಾ ಬಗೆಯ ಕಡತಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಇದಕ್ಕಾಗಿ ರಜೆ ದಿನಗಳಲ್ಲೂ ಅಧಿಕಾರಿಗಳು ಮತ್ತು ನೌಕರ ವರ್ಗ ಕೆಲಸ ನಿರ್ವಹಿಸಿದ್ದಾರೆ. ಹೀಗೆ ಆಡಳಿತದಲ್ಲಿ ಬದಲಾವಣೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ರೈತರು ಮತ್ತು ಸಾರ್ವಜನಿಕರು ತಾಲ್ಲೂಕು ಕಚೇರಿಗೆ ಪದೇ ಪದೇ ಅಲೆಯುವುದನ್ನು ತಪ್ಪಿಸಲು ಹಲವಾರು ಕ್ರಮವಹಿಸಿದ್ದಾರೆ’ ಎಂದರು.

‘ಮೈಸೂರು–ಪಾಂಡವಪುರ–ನಾಗಮಂಗಲ ಮಾರ್ಗದ ಸುಮಾರು 36 ಮಾರ್ಗ ಬಸ್‌ಗಳ ಜತೆಗೆ ಪಾಂಡವಪುರ ಡಿಪೋಗೆ ಸೇರಿದ 16 ಬಸ್‌ಗಳು ಸಂಚರಿಸುತ್ತಿವೆ. ಶಾಸಕ ದರ್ಶನ್ ಅವರು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆಸಕ್ತಿ ವಹಿಸಿ ಬಸ್ ಸಂಚಾರ ಕಲ್ಪಿಸಿದ್ದಾರೆ. ಮತ್ತಷ್ಟು ಬಸ್‌ಗಳು ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸಲು ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಇಷ್ಟರಲ್ಲಿಯೇ ಈ ಮಾರ್ಗಕ್ಕೆ ಬಸ್‌ಗಳು ಸಂಚರಿಸಲಿವೆ. ಬಸ್ಸಿಗಾಗಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೂ ರಾಜಕೀಯ ಬಣ್ಣ ಬಳಿದು ಶಾಸಕ ದರ್ಶನ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡರಾದ ಬೀರಶೆಟ್ಟಹಳ್ಳಿ ಗಿರೀಶ್, ಚಿಕ್ಕಾಡೆ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT