ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7, 8ರಂದು ಶೋಧನಾ ಸಮಿತಿ ಸಭೆ

Last Updated 4 ಏಪ್ರಿಲ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನೀತಿಸಂಹಿತೆ ಜಾರಿಯಾದ ಬಳಿಕ ಮೂರು ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ಕೃಷಿ ಇಲಾಖೆಯು ಶೋಧನಾ ಸಮಿತಿಯ ಸಭೆ ಕರೆದಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಶೋಧನಾ ಸಮಿತಿ ಸಭೆ ಇದೇ 7ರಂದು ಹಾಗೂ ರಾಯಚೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶೋಧನಾ ಸಮಿತಿ ಸಭೆ ಇದೇ 8ರಂದು ನಡೆಯಲಿದೆ.

‘ರಾಜ್ಯದಲ್ಲಿ ಮಾರ್ಚ್‌ 27ರಂದು ಬೆಳಿಗ್ಗೆ 11.10ರಿಂದ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದೆ. ಕೃಷಿ ಇಲಾಖೆ ಮಾರ್ಚ್‌ 28ರಂದು ಸಭೆಯ ದಿನಾಂಕ ನಿಗದಿ ಮಾಡಿದೆ. ಕೃಷಿ ಇಲಾಖೆ ತರಾತುರಿಯಲ್ಲಿ ನೇಮಕ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಈ ನಡೆ ಅನುಮಾನ ಹುಟ್ಟಿಸಿದೆ. ಸಚಿವರು ಇಲಾಖೆಯ ಅಧಿಕಾರಿಗಳ ಮೂಲಕ ಕೆಲಸ ಮಾಡಿಸಲು ಮುಂದಾಗಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ತಜ್ಞರೊಬ್ಬರು ಆರೋಪಿಸಿದರು.

‘ಸಮಿತಿಯನ್ನು ನೀತಿಸಂಹಿತೆ ಘೋಷಣೆಗೂ ಮುನ್ನ ರಚಿಸಲಾಗಿತ್ತು. ಸಭೆಯ ದಿನಾಂಕವನ್ನಷ್ಟೇ ಮಾರ್ಚ್‌ 28ರಂದು ನಿಗದಿ ಮಾಡಲಾಗಿದೆ. ಈಗ ಎಲ್ಲ ಉಸ್ತುವಾರಿಯನ್ನು ಇಲಾಖೆಯ ಕಾರ್ಯದರ್ಶಿ ನೋಡಿಕೊಳ್ಳುತ್ತಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

‘ಸಭೆ ನಡೆಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬಂದಿಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಮಿತಿ ಮೂವರ ಹೆಸರನ್ನು ಅಂತಿಮಗೊಳಿಸಿ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಲಿದೆ. ಅವರು ಅದನ್ನು ರಾಜ್ಯಪಾಲರಿಗೆ ಕಳುಹಿಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT