ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಹಾಲು ಖರೀದಿ ದರ; ಏರಿದ ಬೂಸಾ, ಹಿಂಡಿ ಬೆಲೆ!

ಹೆಚ್ಚಿಗೆ ಹಣ ಕೊಟ್ಟರೂ ಸಿಗದ ಹಸುವಿನ ತಿಂಡಿ, ಸಂಕಷ್ಟದಲ್ಲಿ ಹೈನುಗಾರಿಕೆ
Last Updated 29 ಮೇ 2020, 19:30 IST
ಅಕ್ಷರ ಗಾತ್ರ

ಮಂಡ್ಯ:ಒಂದೆಡೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಿದ್ದರೆ, ಇನ್ನೊಂದೆಡೆ ಪಶು ಆಹಾರದ ಬೆಲೆಯೂ ಏರಿಕೆಯಾಗಿದೆ. ಇದರಿಂದ ಹೈನುಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕರ್ನಾಟಕ ಹಾಲು ಒಕ್ಕೂಟಗಳ ಮಹಾಮಂಡಳದ (ಕೆಎಂಎಫ್‌) ವತಿಯಿಂದ ಉಚಿತವಾಗಿ ಹಾಲು ವಿತರಿಸಲಾಗಿದೆ. ಈ ನಷ್ಟ ತುಂಬಿಕೊಳ್ಳುವುದಕ್ಕಾಗಿ, ರಾಜ್ಯದ 14 ಹಾಲು ಒಕ್ಕೂಟಗಳು ₹ 1ರಿಂದ ₹ 3ರವರೆಗೆ ಹಾಲು ಖರೀದಿ ದರ ಕಡಿತಗೊಳಿಸಿವೆ. ಮಂಡ್ಯ ಹಾಲು ಒಕ್ಕೂಟ (ಮನ್‌ಮುಲ್‌) ₹ 3 ಕಡಿತಗೊಳಿಸಿದ್ದು ಪ್ರತಿ ಲೀಟರ್‌ ಹಾಲಿನ ದರ ₹ 27ಕ್ಕೆ ಇಳಿದಿದೆ. ಬೆಂಗಳೂರು ಒಕ್ಕೂಟ (ಬೆಮುಲ್‌) ₹ 2, ಮೈಸೂರು ಒಕ್ಕೂಟ (ಮೈಮುಲ್‌) ₹1ರಂತೆ ದರ ಕಡಿತಗೊಳಿಸಿವೆ.

ಇದರೊಂದಿಗೆ ಫೀಡ್ಸ್‌, ಬೂಸಾ, ಹಿಂಡಿ ದರವು ಪ್ರತಿ ಮೂಟೆಗೆ (50 ಕೆ.ಜಿ ಚೀಲ) ₹ 300ರಿಂದ ₹ 500ರವರೆಗೆ ಏರಿಕೆಯಾಗಿದ್ದು, ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದವರ ಬದುಕಿಗೆ ಬರೆ ಬಿದ್ದಿದೆ.

‘ಮಂಡ್ಯ ಜಿಲ್ಲೆಯಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಕಣ್ಮುಚ್ಚಿದ್ದು ಹೈನುಗಾರಿಕೆಯೇ ರೈತರನ್ನು ಕಾಪಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಹಾಲು ಖರೀದಿ ದರ ಕಡಿತಗೊಳಿಸಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ’ ಎಂದು ರೈತ ಮುಖಂಡ ಶಂಭೂನಹಳ್ಳಿ ಸುರೇಶ್ ಹೇಳಿದರು.

‘ಹೆಚ್ಚಿಗೆ ಹಣ ಕೊಟ್ಟರೂ ಹಿಂಡಿ, ಬೂಸಾ ದೊರೆಯುತ್ತಿಲ್ಲ. ಮೊದಲೆಲ್ಲ ಖಾಸಗಿ ಕಂಪನಿಯವರು ಮನೆ ಬಾಗಿಲಿಗೆ ತಂದು ಹಾಕುತ್ತಿದ್ದರು. ಕೊರೊನಾದಿಂದಾಗಿ ಅವರೂ ಬರುತ್ತಿಲ್ಲ. ಹಳ್ಳಿ ಜನರೂ ಅವರನ್ನು ಸೇರಿಸುತ್ತಿಲ್ಲ. ತಿಂಡಿ ಕೊರತೆಯಿಂದ 35 ಲೀಟರ್‌ ಕರೆಯುತ್ತಿದ್ದ ಹಾಲು ₹ 15 ಲೀಟರ್‌ಗೆ ಇಳಿದಿದೆ. ಸಾಲ ತಂದು ಹಸು ಕಟ್ಟಿದ್ದೆವು, ಸಾಲ ತೀರಿಸುವುದು ಹೇಗೆ ಎಂದು ಆತಂಕವಾಗಿದೆ’ ಎಂದು ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ರೈತಮಹಿಳೆ ಶಿಲ್ಪಾ ಚಂದ್ರಶೇಖರ್‌ ಹೇಳಿದರು.

‘ನನ್ನ ಪತಿ ಅಪಘಾತದಲ್ಲಿ ಗಾಯಗೊಂಡಿದ್ದು ಹಾಸಿಗೆ ಹಿಡಿದಿದ್ದಾರೆ. ಅವರು ಕೆಲಸ ಮಾಡಲಾಗದ ಸ್ಥಿತಿಯಲ್ಲಿದ್ದಾಗ ಹೈನುಗಾರಿಕೆ ನಮ್ಮ ಕೈ ಹಿಡಿಯಿತು. ಸೆಲ್ಕೊ ಫೌಂಡೇಷನ್‌ ವತಿಯಿಂದ ಸೌರಚಾಲಿತ ಹಾಲು ಕರೆಯುವ ಯಂತ್ರವನ್ನು ಉಚಿತವಾಗಿ ನೀಡಿದ ನಂತರ ನಮಗೆ ಅನುಕೂಲವಾಯಿತು. ಕೊರೊನಾ ಸೋಂಕಿನ ಸಂಕಷ್ಟ ಸಮಯದಲ್ಲಿ ಸೆಲ್ಕೊ ಫೌಂಡೇಷನ್‌ ವತಿಯಿಂದ ಧನಸಹಾಯವನ್ನೂ ಮಾಡಿದ್ದಾರೆ’ ಎಂದು ಶಿಲ್ಪಾ ಹೇಳಿದರು.

‘ರಾಜ್ಯದಾದ್ಯಂತ ನಿತ್ಯ 8 ಸಾವಿರ ಲೀಟರ್‌ ಹಾಲು ಮಾರಾಟವಾಗದೇ ಉಳಿಯುತ್ತಿದೆ. ಉಪ ಉತ್ಪನ್ನಗಳೂ ಮಾರಾಟವಾಗುತ್ತಿಲ್ಲ. ನಷ್ಟ ಸರಿದೂಗಿಸಿಕೊಳ್ಳಲು ಮಂಡಳಿಯ ಸೂಚನೆಯಂತೆ ದರ ಕಡಿತಗೊಳಿಸಲಾಗಿದೆ’ ಎಂದು ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ ಹೇಳಿದರು.

ಪಶು ಆಹಾರ (50 ಕೆ.ಜಿ) ಮೊದಲಿನ ದರ ಈಗಿನ ದರ

ನಂದಿನಿ ಫೀಡ್ಸ್‌ ₹1,000 ₹ 1,300

ಖಾಸಗಿ ಕಂಪನಿಯ ಫೀಡ್ಸ್‌ ₹ 1,000 ₹ 1,400

ಎಲೆ ಬೂಸಾ ₹600 ₹ 1,000

ರವೆ ಬೂಸಾ ₹ 1,000 ₹ 1,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT