ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀನಗರ: ನನೆಗುದಿಗೆ ಬಿದ್ದ ಕೊಕ್ಕರೆಬೆಳ್ಳೂರು ಯೋಜನೆ

13 ವರ್ಷಗಳಿಂದಲೂ ಪೂರ್ಣಗೊಳ್ಳದ ಕುಡಿಯುವ ನೀರು ಯೋಜನೆ, ಸರ್ಕಾರದ ಹಣ ವ್ಯರ್ಥ: ಆಕ್ರೋಶ
Last Updated 1 ನವೆಂಬರ್ 2020, 3:23 IST
ಅಕ್ಷರ ಗಾತ್ರ

ಭಾರತೀನಗರ: ಕೋಟ್ಯಂತರ ಹಣ ವೆಚ್ಚ ಮಾಡಿ ನಿರ್ಮಿಸಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ 13 ವರ್ಷಗಳಿಂದಲೂ ಪೂರ್ಣಗೊಳ್ಳದೇ ನನೆಗುದ್ದಿಗೆ ಬಿದ್ದಿದ್ದು, ಸರ್ಕಾರದ ಕೋಟ್ಯಂತರ ಹಣ ವ್ಯರ್ಥಗೊಂಡು ಹೊಳೆಯಲ್ಲಿ ಹುಣಸೆಹಣ್ಣು ತೇಯ್ದಂತಾಗಿದೆ.

ತಾಲ್ಲೂಕಿನ ಗಡಿಗ್ರಾಮ ಕೂಳಗೆರೆ ಗ್ರಾಮದಿಂದ ಸೋಮನಹಳ್ಳಿ ಗ್ರಾಮಗಳವರೆವಿಗೂ ಸುಮಾರು 33 ಗ್ರಾಮಗಳ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಪ್ರಸಿದ್ಧದ ಪಕ್ಷಿಧಾಮ ಕೊಕ್ಕರೆಬೆಳ್ಳೂರು ಬಳಿ ಶಿಂಷಾ ನದಿಯಿಂದ ಕೊಕ್ಕರೆಬೆಳ್ಳೂರು ಮತ್ತು 33 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ‘ಬಹುಗ್ರಾಮ ಕುಡಿಯುವ ನೀರು ಯೋಜನೆ’ಯನ್ನು ಸುಮಾರು ₹5.66 ಕೋಟಿ ವೆಚ್ಚದಲ್ಲಿ ಸರ್ಕಾರ ಆರ್ಥಿಕ ಮಂಜೂರಾತಿ ನೀಡಿತ್ತು.

ಕ್ರಮೇಣ ಪರಿಷ್ಕೃತ ಅಂದಾಜು ವೆಚ್ಚ ₹ 6.49 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ಮೈಸೂರಿನ ಸ್ಕಿಲ್‌ ಟೆಕ್‌ ಎಂಜಿನಿಯರ್ಸ್‌ ಅಂಡ್ ಕಂಟ್ರ್ಯಾಕ್ಟರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. 2007–08ರಲ್ಲಿ ಯೋಜನೆಯ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಿತ್ತು. ಅಲ್ಲಿಂದ ಕಾಮಗಾರಿ ಆರಂಭ ಮಾತ್ರ ಕಂಡಿರುವ ಕುಡಿಯುವ ನೀರು ಯೋಜನೆ
ಇಲ್ಲಿಯವರೆಗೂ ಮುಕ್ತಾಯವನ್ನೇ ಕಂಡಿಲ್ಲ. ಕಾಮಗಾರಿ ಆರಂಭಗೊಂಡಾಗಿನಿಂದಲೂ ಇಲ್ಲಿಯವರೆಗೂ ಹತ್ತಾರು ಅಧಿಕಾರಿಗಳು ಇಲಾಖೆಗೆ ಬಂದಿದ್ದಾರೆ. ಹೋಗಿದ್ದಾರೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಮಾತ್ರ ನಿಂತಲ್ಲೇ ನಿಂತಿರುವುದು ಸರ್ಕಾರದ ಹಾಗೂ ಜನಪ್ರತಿನಿಧಿಗಳ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಂತಿದೆ.

ಆರಂಭದಲ್ಲಿ ಈ ಯೋಜನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಒಳಪಟ್ಟಿತ್ತು. 2014ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ನೂತನವಾಗಿ ಸ್ಥಾಪಿಸಿದ ಪರಿಣಾಮ ಈ ಯೋಜನೆಯೂ ನೂತನ ಇಲಾಖೆಗೆ ವರ್ಗಾಯಿಸಲಾಯಿತು.

ಶಿಂಷಾ ಹೊಳೆಯ ಸನಿಹ ನಿರ್ಮಾಣ ಮಾಡಿರುವ ಹೊಳೆಯಿಂದ ನೀರೆತ್ತುವ ಭಾರೀ ಗಾತ್ರದ ಯಂತ್ರಗಳು ಹಾಗೂ ಪೈಪುಗಳು ಈಗಾಗಲೇ ತುಕ್ಕು ಹಿಡಿದು ಸವಕಲಾಗಿವೆ. ಬನ್ನಹಳ್ಳಿ ಗ್ರಾಮದ ಬಳಿ ನಿರ್ಮಾಣ ಮಾಡಿರುವ ನೀರು ಶುದ್ದೀಕರಿಸಲು ನಿರ್ಮಿಸಿರುವ ತೊಟ್ಟಿಗಳು ಪಾಳು ಬಿದ್ದಿದ್ದು, ಗಿಡಗೆಂಡೆಗಳು ಬೆಳೆದು ಪೊದೆ ನಿರ್ಮಾಣವಾಗಿದೆ. ಅಲ್ಲಿರುವ ಪೈಪ್‌ಗಳು ಹಾಗೂ ಪಂಪ್‌ಗಳು ಬಿಸಿಲಿಗೆ ಒಣಗಿ ತುಕ್ಕುಹಿಡಿಯುತ್ತಿವೆ.

ಕಬ್ಬಾರೆ ಗ್ರಾಮದ ಬಳಿ ನಿರ್ಮಿಸಿರುವ ಜಾಕ್‌ವೆಲ್‌ ಕೂಡ ಪೊದೆಗಳಿಂದ ಕೂಡಿದ ಗುಹೆಯಂತೆ ಪಾಳು ಬಿದ್ದಿದ್ದು, ಸರ್ಕಾರದ ಹಣ ಪೋಲಾಗಿರುವುದಕ್ಕೆ ಸಾಕ್ಷಿಯಂತಿದೆ. ಒಟ್ಟಾರೆ ಗಂಡ ಹೆಂಡತಿಯರ ಜಗಳ ಮಧ್ಯೆ ಕೂಸು ಬಡವಾದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮ ಈ ಭಾಗದ ಜನ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.

‘ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಣ ಹೊಡೆಯಲು ಹಲವು ಯೋಜನೆಗಳನ್ನು ರೂಪಿಸುತ್ತಾರೆ. ಹಲವು ಗ್ರಾಮಗಳಲ್ಲಿ ಸ್ಥಾಪನೆಗೊಂಡಿರುವ ಶುದ್ದ ಕುಡಿಯುವ ನೀರು ಘಟಕಗಳು ಈಗಾಗಲೇ ವ್ಯರ್ಥಗೊಂಡು ಉಪಯೋಗಕ್ಕೆ ಬಾರದೇ ಪಾಳು ಬಿದ್ದಿವೆ. ಅವರನ್ನು ಪ್ರಶ್ನಿಸುವವರಿಲ್ಲದೇ ಬೇಲಿಯೇ ಎದ್ದು ಹೊಲ ಮೇಯ್ದ ಆಗಿದೆ’ ಕೂಳಗೆರೆ ಗ್ರಾಮದ ಮುಖಂಡ ಸ್ವಾಮಿ ಸ್ವಾಮಿ ಹೇಳಿದರು.

ಬೇಸಿಗೆ ಬಂತೆಂದರೆ ನೀರಿಗೆ ಹಾಹಾಕಾರ: ‘ನಮ್ಮ ಊರಿನಲ್ಲಿ ಬೇಸಿಗೆ ಬಂತೆಂದರೆ ಕುಡಿಯುವ ನೀರು ಸಮಸ್ಯೆ ತುಂಬಾ ಎದುರಾಗುತ್ತದೆ. ಕರೆಂಟ್‌ ಇಲ್ಲದಿದ್ದರಂತೂ ನಮ್ಮ ಸ್ಥಿತಿ ಕೇಳುವವರೇ ಇಲ್ಲ. ಕುಡಿಯುವ ನೀರು ಯೋಜನೆಯಿಂದ ಸಮಸ್ಯೆ ನೀಗಬಹುದು ಎಂದುಕೊಂಡಿದ್ದೆವು. ಆದರೆ ಸಮಸ್ಯೆ ಸಮಸ್ಯೆಯಾಗೇ ಉಳಿದಿರುವುದು ದುರ್ದೈವ’ ಎಂದು ಗೊಲ್ಲರದೊಡ್ಡಿ ಗ್ರಾಮದ ಶಿಕ್ಷಕ ಶಿವಲಿಂಗಯ್ಯ ಅಳಲು ತೋಡಿಕೊಂಡಿದ್ದಾರೆ.

12 ಗ್ರಾಮಗಳಿಗಾದರೂ ಕುಡಿಯುವ ನೀರು: ‘ಯೋಜನೆಯ ಆರಂಭದಲ್ಲಿದ್ದ 33 ಗ್ರಾಮಗಳ ಪೈಕಿ ಕೂಳಗೆರೆ ಸೇರಿದಂತೆ 10 ಗ್ರಾಮಗಳನ್ನು ಈ ಯೋಜನೆಯಿಂದ ಕೈ ಬಿಡಲಾಗಿದೆ. ಪರಿಷ್ಕೃತ 23 ಗ್ರಾಮಗಳಷ್ಟೇ ಯೋಜನೆ ವ್ಯಾಪ್ತಿಗೆ ಸೇರಿದೆ. ತಾಂತ್ರಿಕ ತೊಂದರೆಗಳಿಂದ ಈ ಯೋಜನೆ ಇನ್ನು ಪೂರ್ಣಗೊಂಡಿಲ್ಲ. ಆದರೂ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಗ್ರಾಮಗಳಿಗೂ ನೀರು ಕೊಡಲಾಗದಿದ್ದರೂ 12 ಗ್ರಾಮಗಳಿಗಾದರೂ ನೀರು ಕೊಡಲು ಶ್ರಮಿಸುತ್ತಿದ್ದೇವೆ’ ಎಂದು ಯೋಜನೆಯ ಉ್ತುವಾರಿ ಹೊತ್ತಿರುವ ಗ್ರಾಮೀಣ ಕುಡಿಯುವ ನೀರುನೈರ್ಮಲ್ಯ ಇಲಾಖೆಯ ಪ್ರಭಾರ ಎಇಇ ಮಹದೇವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT