ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಹಕ್ಕು ಮಾರಾಟವಾಗಿದೆ, ವ್ಯಾಪಾರ ಮಾಡಿದವರಿಗೆ ಪಾಠ ಕಲಿಸಿ: ಡಿ.ಕೆ.ಶಿವಕುಮಾರ್

ಶೀಳನೆರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಡಿ.ಕೆ.ಶಿವಕುಮಾರ್
Last Updated 28 ನವೆಂಬರ್ 2019, 10:16 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ನಿಮ್ಮ ಹಕ್ಕು ವ್ಯಾಪಾರವಾಗಿದೆ. ಅದನ್ನು ಪ್ರಶ್ನಿಸುವ ಮೂಲಕ ವ್ಯಾಪಾರ ಮಾಡಿದವರಿಗೆ ಪಾಠ ಕಲಿಸಬೇಕು’ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ತಾಲ್ಲೂಕಿನ ಶೀಳನೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿಯವರು ಸುಳ್ಳುಗಳ ಕಂತೆಯನ್ನು ಸೃಷ್ಟಿಸಿ ಜೈಲಿಗೆ ಹಾಕಿದಾಗಲೂ ನೀವು ನನ್ನೊಂದಿಗೆ ಇದ್ದು ಬೆಂಬಲಿಸಿದ್ದೀರಿ. ಅದಕ್ಕಾಗಿ ಕೃತಜ್ಞನಾಗಿದ್ದೇನೆ. ನಿಮ್ಮಿಂದ ಮತ ಪಡೆದು ಬೇರೆ ಪಕ್ಷಕ್ಕೆ ಓಡಿ ಹೋಗುವವನು ನಿಜವಾದ ನಾಯಕನಲ್ಲ. ನಾರಾಯಣಗೌಡರೇ ಏಕೆ ಹೀಗೆ ಮಾಡಿದಿರಿ ಎಂದು ಮುಂಬೈಗೆ ಹೋಗಿದ್ದಾಗ ನಾನು ಫೋನಿನಲ್ಲಿ ವಿಚಾರಿಸಿದ್ದೆ. ವೈಯಕ್ತಿಕ ಸಮಸ್ಯೆ ಹಾಗೂ ಮುಂಬೈನ ಹೋಟೆಲ್ ಉದ್ಯಮದ ಸಮಸ್ಯೆ ಬಗ್ಗೆ ಹೇಳಿಕೊಂಡರು. ವ್ಯವಹಾರವೇ ಬೇರೆ, ರಾಜಕೀಯವೇ ಬೇರೆ. ನನಗೂ ವ್ಯವಹಾರಗಳಿವೆ. ಹಾಗಂತ ಪಕ್ಷ ಬಿಟ್ಟು ಹೋಗಿದ್ದೀನಾ’ ಎಂದು ಪ್ರಶ್ನಿಸಿದರು.

ಸ್ವಾರ್ಥಕ್ಕಾಗಿ ನಾರಾಯಣಗೌಡ ಮಾರಾಟವಾಗಿದ್ದಾರೆಂದು ಇಡೀ ಕ್ಷೇತ್ರದ ಜನ ಮಾತನಾಡಿಕೊಳ್ಳುತಿದ್ದಾರೆ. ಮಾತನಾಡಿಕೊಂಡರೆ ಸಾಲದು ಇಂತಹವರಿಗೆ ಬುದ್ಧಿಯನ್ನೂ ಕಲಿಸಬೇಕು. ಅಂತಹ ಬುದ್ಧಿ ಕಲಿಸುವ ಕಾಲ ಈಗ ಬಂದಿದೆ. ಈ ತಾಲ್ಲೂಕಿನ ಜನ ಪ್ರಾಮಾಣಿಕರು. ಹಣ, ಹೆಂಡ, ಆಮಿಷಗಳಿಗೆ ಬೆಲೆ ಕೊಡದವರು. ಈ ಉಪಚುನಾವಣೆಯಲ್ಲಿ ನಾರಾಯಣಗೌಡರನ್ನು ತಿರಸ್ಕರಿಸಬೇಕು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲ್ಲೂಕಿನಲ್ಲಿ ನಡೆಸಿರುವ ಜೆಡಿಎಸ್ ಪ್ರಚಾರ ಸಭೆಗಳಲ್ಲಿ, ಜನರ ವಿಶ್ವಾಸಕ್ಕೆ ದ್ರೋಹ ಬಗೆದ ಅನರ್ಹ ಶಾಸಕರನ್ನು ಸೋಲಿಸಿ ಎಂದು ಮನವಿ ಮಾಡಿದ್ದಾರೆ. ನಾನೂ ಅದನ್ನೇ ಹೇಳುತ್ತೇನೆ’ ಎಂದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಮಾಜಿ ಸಚಿವ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಡಾ.ರವೀಂದ್ರ, ಸಿ.ಡಿ.ಗಂಗಾಧರ್, ರವೀಂದ್ರಬಾಬು, ಡಾಲು ರವಿ, ಕಿಕ್ಕೇರಿ ಸುರೇಶ್, ಹರಳಹಳ್ಳಿ ವಿಶ್ವನಾಥ್ ಗಣಿಗ ರವಿಕುಮಾರ್, ಅಂಜನಾ ಶ್ರೀಕಾಂತ್, ಆದಿಹಳ್ಳಿ ಮೀನಾಕ್ಷಿ ರಮೇಶ್, ಕೆ.ಬಿ.ರವಿಕುಮಾರ್, ನಂದೀಶ್, ಎಸ್.ವಿ.ವಿನಯ್, ಸಿ.ಬಿ.ಚೇತನ್ ಕುಮಾರ್, ಚಟ್ಟೇನಹಳ್ಳಿ ನಾಗರಾಜು, ಬೋರಮ್ಮ ಮಹದೇವೇಗೌಡ, ಲಕ್ಷ್ಮೀಪುರ ಚಂದ್ರೇಗೌಡ, ಉದೇಶ್ ಇದ್ದರು.

‘ಈ ಹಿಂದೆ ಕ್ಷೇತ್ರದ ಅಭಿವೃದ್ಧಿ ಮಾಡಬಹುದಿತ್ತಲ್ಲವೇ?’

ಈಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುವ ಯಡಿಯೂರಪ್ಪ ಅವರಿಗೆ ಈಗ ಕಣ್ಣು ಬಿತ್ತೇ? ಹಿಂದೆಯೂ ಅವರು ಮುಖ್ಯಮಂತ್ರಿ ಆಗಿದ್ದರು. ಆಗ ಅಭಿವೃದ್ಧಿ ಮಾಡಬಹುದಿತ್ತಲ್ಲವೇ? ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳನ್ನೂ ಮಾದರಿ ಕ್ಷೇತ್ರಗಳನ್ನಾಗಿ ಮಾಡುವುದಾಗಿ ಹೇಳುತ್ತಿದ್ದಾರೆ. 2008ರಲ್ಲೂ ಆಪರೇಷನ್ ಕಮಲ ಮಾಡಿ ಉಪಚುನಾವಣೆ ನಡೆಸಿದ್ದರು. ಆ ಕ್ಷೇತ್ರಗಳನ್ನು ಮಾದರಿ ಕ್ಷೇತ್ರಗಳನ್ನಾಗಿ ಮಾಡುವ ಭರವಸೆ ಕೊಟ್ಟಿದ್ದರು. ಆ ಕ್ಷೇತ್ರಗಳಿಗೆ ಒಮ್ಮೆ ಹೋಗಿ ನೋಡಿ ಗೊತ್ತಾಗುತ್ತದೆ’ ಎಂದು ಡಿ.ಕೆ.ಶಿವಕುಮಾರ್‌ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT