ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯಲ್ಲಿ ದೋಸ್ತಿ, ಸ್ಥಳೀಯ ಸಂಸ್ಥೆಗಳಲ್ಲಿ ಕುಸ್ತಿ : ಆರ್‌.ಅಶೋಕ್‌

ರಾಜ್ಯ ಸರ್ಕಾರದ ವಿರುದ್ಧ ಶಾಸಕ ಆಕ್ರೋಶ
Last Updated 27 ಆಗಸ್ಟ್ 2018, 14:17 IST
ಅಕ್ಷರ ಗಾತ್ರ

ಮಂಡ್ಯ: ‘ರಾಜ್ಯ ವಿಧಾನಸಭೆಯಲ್ಲಿ ದೋಸ್ತಿ ಮಾಡಿಕೊಂಡ ಕಾಂಗ್ರೆಸ್‌ – ಜೆಡಿಎಸ್‌ ಪಕ್ಷಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕುಸ್ತಿ ಮಾಡುತ್ತಿವೆ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಹೀಗಾಗಿ ಶೀಘ್ರ ಸರ್ಕಾರ ಪತನವಾಗಲಿದೆ’ ಎಂದು ಶಾಸಕ ಆರ್‌.ಅಶೋಕ್‌ ಹೇಳಿದರು.

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಪ್ರಣಾಳಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಎರಡು ನಾಲಗೆಯ ಸರ್ಕಾರವಿದೆ. ಕಾಂಗ್ರೆಸ್ ನಾಲಗೆ 7 ಕೆ.ಜಿ ಅಕ್ಕಿ ಕೊಡಬೇಕು ಎಂದು ಹೇಳಿದರೆ, ಜೆಡಿಎಸ್ ನಾಲಗೆ 4 ಕೆ.ಜಿ ಕೊಡಬೇಕು ಎಂದು ಹೇಳುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನ ಹೊಂದಿದ್ದ ಕಾಂಗ್ರೆಸ್ 80 ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ 38 ಸ್ಥಾನಕ್ಕೆ ಇಳಿದಿದೆ. ನಗರ, ಪಟ್ಟಣ ಪ್ರದೇಶದಲ್ಲಿ ನೂರಾರು ಸಮಸ್ಯೆಗಳಿವೆ. ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಸ್ವಚ್ಛತೆಯಲ್ಲಿ ಕೊರತೆಯಾಗಿದೆ. ಆದರೂ ಸರ್ಕಾರ ಇದಾವುದಕ್ಕೂ ತಲೆಕೆಡಿಸಿಕೊಂಡಿಲ್ಲ’ ಎಂದು ಆರೋಪಿಸಿದರು.

‘ಪೌರ ಕಾರ್ಮಿಕರಿಗೆ 7 ತಿಂಗಳುಗಳಿಂದ ವೇತನ ನೀಡದೆ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಾಲಯಗಳ ಹುಂಡಿಗೆ ಕೈ ಹಾಕಿ ₹ 124 ಕೋಟಿ ಹಣ ತೆಗೆದುಕೊಂಡಿದ್ದಾರೆ. ಆ ಮೂಲಕ ಸರ್ಕಾರ ದಿವಾಳಿಯಾಗಿದೆ ಎಂಬುದನ್ನು ಒಪ್ಪಿಕೊಕೊಂಡಿದೆ. ರೈತರ ಸಾಲ ಮನ್ನಾ ವಿಷಯವನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ’ ಎಂದು ಹೇಳಿದರು.

‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹುಡುಗಾಟದ ಹುಡುಗ. ಅವರು ಮನೆತನದಿಂದ ಗುರುತಿಸಿಕೊಂಡಿದ್ದಾರೆಯೇ ಹೊರತು ಅವರ ಸ್ವಂತ ಸಾಧನೆಯಿಂದಲ್ಲ. ಅವರ ಸ್ವಂತ ಸಾಧನೆ ಪರಿಗಣಿಸಿದರೆ ಶೂನ್ಯ ಮಾತ್ರ ಸಿಗುತ್ತದೆ. ವಿದೇಶಕ್ಕೆ ಹೋಗಿ ದೇಶದ ಮಾನ ಕಳೆಯುತ್ತಿರುವ ಅವರಿಗೆ ದೇಶದ ಮೇಲೆ ಎಳ್ಳಷ್ಟೂ ಕಾಳಜಿ ಇಲ್ಲ. ಕೊಡಗು ನಿರಾಶ್ರಿತರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ವ್ಯಾಪ್ತಿಗೆ ಬರುವ ಅನುದಾನ ಘೋಷಣೆ ಮಾಡಿದ್ದಾರೆ. ನೆರೆ ಪರಿಹಾರ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ಹಣ ಬಿಡುಗಡೆ ಮಾಡಲಿದ್ದಾರೆ’ಎಂದರು.

‘ಸೆ.3ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಬಸವರಾಜ ಪಾಟೀಲ್‌ ಯತ್ನಾಳ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಯತ್ನಾಳ್ ಅವರ ಮಾತು ಶೀಘ್ರ ನಿಜವಾಗಲಿದೆ. ಲೋಕಸಭೆ ಚುನಾವಣೆಗೂ ಮೊದಲೇ ಸಮ್ಮಿಶ್ರ ಸರ್ಕಾರ ನಾಶವಾಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ’ ಎಂದರು.

ಬಿಜೆಪಿ ಜಿಲ್ಲಾ ಉಸ್ತುವಾರಿ ಅಶ್ವಥ್‌ನಾರಾಯಣ ಮಾತನಾಡಿ ‘ಮಂಡ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬದ್ಧ. ನಗರದಲ್ಲಿ ಸರಿಯಾಗಿ ತೆರಿಗೆ ಸಂಗ್ರಹವಾಗದೇ ಆದಾಯ ಕಡಿಮೆಯಾಗಿದೆ. ಅಭಿವೃದ್ಧಿ ಯೋಜನೆಗಳು ಅನುಷ್ಠಾನ ಹಂತದಲ್ಲೇ ನನೆಗುದಿಗೆ ಬಿದ್ದಿವೆ’ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾಗಣ್ಣಗೌಡ, ನಗರ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್, ಮುಖಂಡರಾದ ಚಂದಗಾಲು ಎನ್.ಶಿವಣ್ಣ, ಅಶೋಕ್, ಎಚ್.ಪಿ.ಮಹೇಶ್ ಇದ್ದರು.

**********

ಮಹಾನಗರ ಪಾಲಿಕೆ ಸ್ಥಾಪನೆ ಭರವಸೆ

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರೂಪಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಮಂಡ್ಯದ ಸಮಗ್ರ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದೆ. ಮಂಡ್ಯದಿಂದ 5 ಕಿ.ಮೀ ವ್ಯಾಪ್ತಿಯ ಎಲ್ಲಾ ಹಳ್ಳಿಗಳನ್ನು ಸೇರಿಸಿ ಮಹಾನಗರ ಪಾಲಿಕೆ ಸ್ಥಾಪನೆ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ನಗರಸಭೆಯಲ್ಲಿ ಬೇರೂರಿರುವ ಬಹುತೇಕ ಸಿಬ್ಬಂದಿ ವರ್ಗಾವಣೆ ಮಾಡಿ ಆಡಳಿತಕ್ಕೆ ಕಾಯಕಲ್ಲ ನೀಡಬೇಕಾಗಿದೆ. ಮಾರುಕಟ್ಟೆ ನಿರ್ಮಾಣಕ್ಕೆ ಹತ್ತಾರು ಬಾರಿ ಶಂಕುಸ್ಥಾಪನೆ ಮಾಡಲಾಗಿದೆ. ಆದರೆ ಮಾರುಕಟ್ಟೆ ಮಾತ್ರ ನಿರ್ಮಾಣವಾಗಿಲ್ಲ. ಹೀಗಾಗಿ ಬಿಜೆಪಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ ಎಂದು ತಿಳಿಸಿದೆ.‌ ಕುಡಿಯುವ ನೀರು, ಒಳಚರಂಡಿ, ರಿಂಗ್‌ ರಸ್ತೆ ನಿರ್ಮಾಣ, ತೂಬಿನಕೆರೆ ಉಪನಗರ ನಿರ್ಮಾಣ, ನಗರವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವ ಕುರಿತು ಬಿಜೆಪಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT