ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಅಭಿಮಾನಿ: ಅಣ್ಣಾವ್ರ ಚಿತ್ರಗಳ ಮಾಹಿತಿ ಕಣಜ ಶ್ರೀರಂಗಪಟ್ಟಣದ ಮಾಯಣ್ಣ

ಇಂದು ಡಾ.ರಾಜ್‌ಕುಮಾರ್‌ ಜನ್ಮದಿನ, ವಿವಿಧ ಪ್ರಶಸ್ತಿಗಳನ್ನು ಪಡೆದ ಅಭಿಮಾನಿ
Last Updated 24 ಏಪ್ರಿಲ್ 2019, 5:49 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ವರನಟ ಡಾ.ರಾಜಕುಮಾರ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪ, 10ನೇ ಚಿತ್ರ ಅಣ್ಣ ತಂಗಿ, 20ನೇ ಚಿತ್ರ ಶ್ರೀಶೈಲ ಮಹಾತ್ಮೆ, 30ನೆಯದ್ದು ಕರುಣೆಯೇ ಕುಟುಂಬದ ಕಣ್ಣು, 100ನೇ ಚಿತ್ರ ಭಾಗ್ಯದ ಬಾಗಿಲು...

ಪಟ್ಟಣದ ಆರ್ಟ್ಸ್‌ ಮಾಯಿ ಅಲಿಯಾಸ್ ಮಾಯಣ್ಣ, ಡಾ.ರಾಜ್‌ಕುಮಾರ್ ಅವರ ಚಿತ್ರಗಳು, ಬಿಡುಗಡೆಯಾದ ವರ್ಷ, ದಿನಾಂಕ, ನಿರ್ದೇಶನ, ನಿರ್ಮಾಪಕರ ಹೆಸರನ್ನು ಪಟಪಟನೆ ಹೇಳುವ ಪರಿ ಕೇಳಿದರೆ ಅಚ್ಚರಿಯಾಗುತ್ತದೆ. ಡಾ.ರಾಜ್ ನಟನೆಯ 205 ಚಿತ್ರಗಳು, ಆ ಚಿತ್ರಗಳಲ್ಲಿನ ನಾಯಕಿಯರು, ಹಾಡುಗಳು, ಅವುಗಳನ್ನು ಬರೆದವರು, ಹಾಡಿದವರು ಎಲ್ಲರ ಹೆಸರು ಹೇಳುತ್ತಾರೆ. ಇಷ್ಟೆಲ್ಲಾ ವಿಷಯಗಳು ಇವರ ನೆನಪಿನ ಬುತ್ತಿಯಲ್ಲಿವೆ. ವರನಟನ ಚಿತ್ರಗಳ ಮಾಹಿತಿಯನ್ನು ಅಸ್ಖಲಿತವಾಗಿ ಹೇಳಿ ಬೆರಗು ಹುಟ್ಟಿಸುತ್ತಾರೆ. ನಿದ್ರೆಯ ಮಂಪರಿನಲ್ಲಿ ಕೇಳಿದರೂ ಅಣ್ಣಾವ್ರ ಯಾವುದೇ ಚಿತ್ರಗಳ ಬಗ್ಗೆ ಹೇಳುವ ಮಾಯಿ ಡಾ.ರಾಜ್ ಚಿತ್ರಗಳ ಮಾಹಿತಿ ಕಣಜದಂತಿದ್ದಾರೆ.

ವರನಟನ ಚಿತ್ರಗಳ ಸಮಗ್ರ ಮಾಹಿತಿ ಮಾಯಿ ಅವರ ನಾಲಗೆಯ ತುದಿಯಲ್ಲೇ ಇದೆ. ಡಾ.ರಾಜ್ ಅವರಿಗೆ ದೊರೆತಿರುವ ಬಿರುದು ಮತ್ತು ಪ್ರಶಸ್ತಿಗಳು, ಅವುಗಳನ್ನು ನೀಡಿದವರು, ಪ್ರಶಸ್ತಿ ಸಂದ ವರ್ಷದ ಬಗ್ಗೆ ಇವರು ನಿಂತಲ್ಲೇ ಹೇಳಬಲ್ಲರು. ಇವರ ಸ್ಕೂಟರ್ ಮೇಲೆ ರಾಜಣ್ಣನ ಚಿತ್ರಗಳ ಒಂದಿಲ್ಲೊಂದು ಹೆಸರು ಯಾವಾಗಲೂ ರಾರಾಜಿಸುತ್ತದೆ.

ರಾಜ್‌ಕುಮಾರ್ ಅವರ ಜತೆ ಮಾತನಾಡಿದ, ಅವರ ಜತೆ ಫೋಟೊ ತೆಗೆಸಿಕೊಂಡ ಕ್ಷಣಗಳನ್ನು ಆಗಾಗ ನೆನೆದು ಮಾಯಣ್ಣ ಪುಳಕಿತರಾಗುತ್ತಾರೆ. ರಾಜ್ ಅವರು ತ್ರಿಪಾತ್ರದಲ್ಲಿ ನಟಿಸಿರುವ 1978ರಲ್ಲಿ ಬಿಡುಗಡೆಯಾದ, ಸಿ.ವಿ. ಸೋಮಶೇಖರ್ ನಿರ್ದೇಶನದ ‘ಶಂಕರ್ ಗುರು’ ಇವರ ಅಚ್ಚುಮೆಚ್ಚಿನ ಚಿತ್ರವಂತೆ. ಈ ಚಿತ್ರದ ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ... ಹಾಡನ್ನು ಮಾಯಿ ಸದಾ ಗುನುಗುತ್ತಾರೆ.

1972ರಲ್ಲಿ ಬಿಡುಗಡೆಯಾದ ಸಿದ್ದಲಿಂಗಯ್ಯ ನಿರ್ದೇಶನದ ‘ಬಂಗಾರದ ಮನುಷ್ಯ’ ಚಿತ್ರವನ್ನು ಲೆಕ್ಕವಿಲ್ಲದಷ್ಟು ಸಲ ನೋಡಿದ್ದಾರೆ. ದೊರೈ ಭಗವಾನ್ ನಿರ್ದೇಶನದ, 1997ರಲ್ಲಿ ತೆರೆಕಂಡ ಜೀವನಚೈತ್ರ ಚಿತ್ರದ ನಾದಮಯ.... ಹಾಡು ಸಂಗೀತಗಾರರನ್ನೇ ಮೋಡಿ ಮಾಡುತ್ತದೆ ಎಂದು ಮಾಯಿ ವ್ಯಾಖ್ಯಾನಿಸುತ್ತಾರೆ.

ವೃತ್ತಿಯಲ್ಲಿ ಬ್ಯಾನರ್, ನಾಮಫಲಕ ಬರೆಯುವ ಮಾಯಿ ಅಲಿಯಾಸ್ ಮಾಯಣ್ಣ ಅಂಚೆ ಕಚೇರಿಯಲ್ಲಿ ಹೊರ ಗುತ್ತಿಗೆ ಕೆಲಸವನ್ನೂ ಮಾಡುತ್ತಾರೆ. ಪಟ್ಟಣ ಮತ್ತು ಆಸುಪಾಸಿನಲ್ಲಿ ಆರ್ಟ್ಸ್‌ ಮಾಯಿ ಎಂದೇಪ್ರಸಿದ್ಧರಾಗಿರುವ ಇವರು ರಾಜ್‌ಕುಮಾರ್ ನಟನೆಯ ಅಷ್ಟೂ ಚಿತ್ರಗಳನ್ನು ನೋಡಿರುವ ಹೆಗ್ಗಳಿಕೆ ಹೊಂದಿದ್ದಾರೆ.

ಶೂಟಿಂಗ್ ವೀಕ್ಷಣೆ: ಶ್ರೀರಂಗಪಟ್ಟಣ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿರುವ ಡಾ.ರಾಜ್ ನಟನೆಯ ಮಯೂರ, ಬಹದ್ದೂರ್ ಗಂಡು, ಚಲಿಸುವ ಮೋಡಗಳು, ಜ್ವಾಲಾಮುಖಿ, ಶ್ರುತಿ ಸೇರಿದಾಗ, ತಾಯಿಗೆ ತಕ್ಕ ಮಗ, ಗುರಿ, ನ್ಯಾಯವೇ ದೇವರು, ನಾನೊಬ್ಬ ಕಳ್ಳ ಸೇರಿದಂತೆ ಬಹುತೇಕ ಚಿತ್ರಗಳ ಚಿತ್ರೀಕರಣವನ್ನು ನೋಡಿದ ಖುಷಿ ಮಾಯಿ ಅವರದ್ದು.

ಸನ್ಮಾನ: ಅಣ್ಣಾವ್ರ ಅಪ್ಪಟ ಅಭಿಮಾನಿ ಮಾಯಿ ಅವರನ್ನು ವಿವಿಧ ಸಂಘ, ಸಂಸ್ಥೆಗಳು ಗೌರವಿಸಿದೆ. ಬೆಂಗಳೂರು, ದೊಡ್ಡಬಳ್ಳಾಪುರ, ಮೈಸೂರಿನ ಡಾ.ರಾಜಕುಮಾರ್ ಅಭಿಮಾನಿಗಳ ಸಂಘಗಳ ಪ್ರಶಸ್ತಿ ನೀಡಿ ಪುರಸ್ಕರಿಸಿವೆ. ಪಟ್ಟಣದಲ್ಲಿ ನಡೆದ ರಾಜ್ಯೋತ್ಸವ ಇತರ ಕಾರ್ಯಕ್ರಮಗಳಲ್ಲಿ ಕೂಡ ಅಣ್ಣಾವ್ರ ಈ ಅಭಿಮಾನಿಗೆ ಗೌರವ ಸಿಕ್ಕಿದೆ.

‘ನಾನು 20 ವರ್ಷದವನಿದ್ದ ದಿನಗಳಿಂದಲೂ ಡಾ.ರಾಜಕುಮಾರ್ ಅವರ ಅಭಿಮಾನಿ. ವರನಟನನ್ನು ನೋಡುತ್ತ, ಆ ಮೋಹಕ ದನಿ ಕೇಳುತ್ತಾ ರೋಮಾಂಚನಗೊಳ್ಳುತ್ತೇನೆ. ಹೊಸ ಸೈಕಲ್, ಸ್ಕೂಟರ್ ಕೊಂಡ ನೂರಾರು ಮಂದಿಗೆ ರಾಜ್ ಮತ್ತು ಅವರ ಚಿತ್ರಗಳ ಹೆಸರು ಬರೆದುಕೊಟ್ಟಿದ್ದೇನೆ. ಈ ದೇಹದಲ್ಲಿ ಶಕ್ತಿ ಇರುವರೆಗೆ ರಾಜಣ್ಣ ಅವರ ಜನ್ಮದಿನ ಆಚರಿಸುತ್ತೇನೆ’ ಎಂಬುದು 62ರ ಹರೆಯದ ಮಾಯಿ ಅವರ ಅಭಿಮಾನದ ಮಾತು.

ಡಾ.ರಾಜ್ ಹುಟ್ಟುಹಬ್ಬ ಆಚರಣೆ

ಮಾಯಿ ಅವರು ಕಳೆದ 30 ವರ್ಷಗಳಿಂದ ಡಾ.ರಾಜಕುಮಾರ್ ಅವರ ಜನ್ಮದಿನವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿ ವರ್ಷ ಏ.24ರಂದು ಇಲ್ಲಿನ ಜಯಲಕ್ಷ್ಮೀ ಚಿತ್ರ ಮಂದಿರ ರಸ್ತೆಯಲ್ಲಿ ಗೆಳೆಯರ ಜತೆಗೂಡಿ ವರನಟನ ಜನ್ಮದಿನ ಆಚರಿಸುತ್ತಾರೆ. ಡಾ.ರಾಜ್ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ, ಪುಷ್ಪಾರ್ಚನೆ ಮಾಡಿ ಸಿಹಿ ವಿತರಿಸುವ ಪದ್ಧತಿ ಅನೂಚಾನವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT