ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಶೆಯಿಂದ ಹೊರಬರಲು ಎಚ್‌ಡಿಕೆಗೆ ವರ್ಷ ಬೇಕಾಯ್ತಾ: ಬಿ.ಸಿ.ಪಾಟೀಲ

Last Updated 8 ಸೆಪ್ಟೆಂಬರ್ 2020, 14:28 IST
ಅಕ್ಷರ ಗಾತ್ರ

ಮಂಡ್ಯ: ‘ಸಮಿಶ್ರ ಸರ್ಕಾರ ಬೀಳಲು ಡ್ರಗ್ಸ್‌ ಮಾಫಿಯ ಕಾರಣ ಎಂದು ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಬಿದ್ದಾಗಲೇ ಹೇಳಬೇಕಾಗಿತ್ತು. ನಶೆಯಿಂದ ಹೊರಬರಲು ಅವರಿಗೆ ಒಂದು ವರ್ಷ ಬೇಕಾಯ್ತಾ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ‌ ಮಂಗಳವಾರ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅವರು ಊಸರವಳ್ಳಿ ಇದ್ದ ಹಾಗೆ, ಸಮಯಕ್ಕೆ ತಕ್ಕಹಾಗೆ ಬದಲಾಗುತ್ತಾರೆ. ಈಗ ಡ್ರಗ್ಸ್‌ ವಿಚಾರ ಬಂದಿದ್ದು ಸರ್ಕಾರ ಬೀಳಲು ಡ್ರಗ್ಸ್‌ ಮಾಫಿಯ ಕಾರಣ ಎನ್ನುತ್ತಿದ್ಧಾರೆ. ಮುಂದೆ ಲಿಕ್ಕರ್‌ ಸಮಸ್ಯೆ ಬಂದರೆ ಸರ್ಕಾರದಪತನಕ್ಕೆ ಲಿಕ್ಕರ್‌ ಲಾಭಿ ಕಾರಣ ಎನ್ನುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಸ್ಯಾಂಡಲ್‌ವುಡ್‌ ನೆಶೆವುಡ್‌ ಆಗಿಬಿಟ್ಟಿದೆ, ಚಿತ್ರರಂಗದಲ್ಲಿ ಎಲ್ಲರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಆದರೆ ಒಂದು ಕೊಡ ಹಾಲಿನಲ್ಲಿ ಒಂದು ಹರಳು ಉಪ್ಪು ಬಿದ್ದರೂ ಹಾಲು ಹಾಳಾಗುತ್ತದೆ. ಈಗ ಸ್ಯಾಂಡಲ್‌ವುಡ್‌ ಸಮಸ್ಯೆಯೂ ಹೀಗೆಯೇ ಆಗಿದೆ. ಸೆಲೆಬ್ರಿಟಿಗಳು ಯಾವಾಗಲೂ ಗಾಜಿನ ಮನೆಯಲ್ಲಿ ಇರುತ್ತಾರೆ. ಒಂದು ಸಣ್ಣ ತಪ್ಪು ಮಾಡಿದರೂ ಜನರಿಗೆ ತಿಳಿಯುತ್ತದೆ’ ಎಂದರು.

‘ನಟಿ ರಾಗಿಣಿ 2ನೇ ಆರೋಪಿಯಾಗಿದ್ದಾರೆ, 1ನೇ ಆರೋಪಿ ಬಗ್ಗೆ ಯಾರೂ ಹೇಳುತ್ತಿಲ್ಲ. ಆರೋಪಿ ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದರು.

ಬಿಜೆಪಿ ಮುಖಂಡರೇ ಆಗಿದ್ದರೂ ಸಹಕಾರ ಇಲ್ಲ: ಬಿ.ವೈ.ವಿಜಯೇಂದ್ರ

‘ಡ್ರಗ್ಸ್‌ ದಂಧೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಇದ್ದರೂ ಅವರಿಗೆ ಸಹಕಾರ ನೀಡುವುದಿಲ್ಲ. ದಂಧೆಯನ್ನು ಬುಡಸಮೇತ ಕಿತ್ತುಹಾಕುವುದೇ ನಮ್ಮ ಉದ್ದೇಶವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಳೆದ ಉಪ ಚುನಾವಣೆಯಲ್ಲಿ ನಮ್ಮ ಪರ ನಟಿ ರಾಗಿಣಿ ಪ್ರಚಾರ ಮಾಡಿದ್ದು ನಿಜ. ಆದರೆ ಅವರು ಬಿಜೆಪಿಗೆ ಸೇರ್ಪಡೆ ಆಗಿಲ್ಲ. ಚಿತ್ರನಟರು ಒಂದೇ ಪಕ್ಷಗಳಿಗೆ ಪ್ರಚಾರ ಮಾಡುವುದಿಲ್ಲ, ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ಸಾಮಾನ್ಯ ’ ಎಂದರು.

‘ಡ್ರಗ್ಸ್‌ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದನ್ನು ಬಿಜೆಪಿ ಸರ್ಕಾರ ಸವಾಲಾಗಿ ಸ್ವೀಕಾರ ಮಾಡಿದೆ. ಇದರಲ್ಲಿ ಹಿಟ್‌ ಅಂಡ್‌ ರನ್‌ ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT