ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೇ ರದ್ದಾಗಲಿ: ರೈತರ ಆಗ್ರಹ

ಮತ್ತೆ ನೀರು ಬಿಡುಗಡೆ; ವಿವಿಧ ಸಂಘಟನೆಗಳ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ
Published 19 ಸೆಪ್ಟೆಂಬರ್ 2023, 14:38 IST
Last Updated 19 ಸೆಪ್ಟೆಂಬರ್ 2023, 14:38 IST
ಅಕ್ಷರ ಗಾತ್ರ

ಮಂಡ್ಯ: ‘ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ವನ್ನೇ ರದ್ದು ಮಾಡಬೇಕು’ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ನಗರದ ಸರ್‌ ಎಂ.ವಿ. ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಹೆದ್ದಾರಿ ತಡೆ ನಡೆಸಿ ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನೀರು ನಿರ್ವಹಣಾ ಪ್ರಾಧಿಕಾರದಿಂದ ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಿದೆ. ಪ್ರಾಧಿಕಾರದ ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಅವಲೋಕನ ಮಾಡುವುದನ್ನು ಬಿಟ್ಟು ಮತ್ತೆ ನೀರು ಹರಿಸಬೇಕು ಎಂದು ಆದೇಶ ನೀಡುತ್ತಿರುವುದು ಖಂಡನೀಯ. ಈ ಆದೇಶವನ್ನು ಸರ್ಕಾರ ಪಾಲನೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಮಾತು ಕೊಟ್ಟಿದ್ದ ಸರ್ಕಾರ ಇದೀಗ ನೀರು ಬಿಟ್ಟು ರೈತರಿಗೆ ದ್ರೋಹ ಮಾಡಿದೆ. ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕುಡಿಯುವ ನೀರನ್ನು ಸಹ ಬರಿದು ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲು ಹೊರಟಿರುವ ಸರ್ಕಾರದ ನಡೆ ಸರಿಯಲ್ಲ’ ಎಂದು ಕಿಡಿಕಾರಿದರು.

ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್‌, ಮುಖಂಡರಾದ ಎಂ.ಎಸ್. ಆತ್ಮಾನಂದ, ಕೆ.ಬೋರಯ್ಯ, ಸಾತನೂರು ಜಯರಾಮ್, ಸಿದ್ದರಾಮೇಗೌಡ, ವೆಂಕಟಗಿರಿಯಯ್ಯ, ಎಂ.ವಿ.ಕೃಷ್ಣ, ಇಂಡವಾಳು ಚಂದ್ರಶೇಖರ್, ಮುದ್ದೇಗೌಡ, ಮಂಜುನಾಥ್, ಅಂಬುಜಮ್ಮ ಭಾಗವಹಿಸಿದ್ದರು.

ಜೆಡಿಎಸ್‌ ಮುಖಂಡರ ಆಕ್ರೋಶ: ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ನೀಡಿದ ಜೆಡಿಎಸ್‌ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಸಿ.ಎಸ್‌.ಪುಟ್ಟರಾಜು ಮಾತನಾಡಿ, ‘ರಾಜ್ಯ ಸರ್ಕಾರದ ವೈಫಲ್ಯದಿಂದಾಗಿ ಮತ್ತೆ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ರಾಜ್ಯ ಸರ್ಕಾರ, ಸಂಸದರು ಒಗ್ಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ತಡೆದು ರೈತರನ್ನು ಕಾಪಾಡಬೇಕು’ ಎಂದು ಒತ್ತಾಯಿಸಿದರು.

‘ಕಾವೇರಿ ನಿರ್ವಹಣಾ ಪ್ರಾಧಿಕಾರ ನೀರು ಬಿಡುಗಡೆಗೆ ಆದೇಶ ನೀಡಿದೆ. ಇದನ್ನು ಎಲ್ಲ ಸಂಸದರೂ ವಿರೋಧಿಸಬೇಕು. ನಾವು ಸಂಸದರಾಗಿದ್ದ ಸಮಯದಲ್ಲಿ ಕಾವೇರಿ ವಿಚಾರವಾಗಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಸಂಸದರು ಒಗ್ಗೂಡಿ ರಾಜ್ಯದ ಪರವಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದೆವು. ಈಗಿನ ಸಂಸದರು ಕೂಡ ಪ್ರಧಾನಿಯನ್ನು ಭೇಟಿಯಾಗಿ ಒತ್ತಡ ಹೇರಬೇಕು’ ಎಂದರು.

‘ರಾಜ್ಯ ಸರ್ಕಾರ ಕೆಆರ್‌ಎಸ್‌ನಿಂದ ನೀರು ಬಿಟ್ಟಿಲ್ಲ ಎಂಬ ಮಾತನ್ನು ಹೇಳುತ್ತಿದೆ. ಆದರೆ, 3,900 ಕ್ಯೂಸೆಕ್ ನೀರು ಜಲಾಶಯದಿಂದ ಹರಿದು ಹೋಗುತ್ತಿರುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳೇ ತಿಳಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಜಿಲ್ಲೆಯ ಸಂಸದರ ಜವಾಬ್ದಾರಿ ಹೆಚ್ಚಾಗಿದೆ. ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಪತ್ರ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಹೇಳಿದರು.

‘ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ. ಕುಡಿಯುವ ಉದ್ದೇಶಕ್ಕೆ ನೀರು ಉಳಿಸಿಕೊಂಡು ಜನರ ಹಿತ ಕಾಯಬೇಕು. ರೈತರಿಗೆ ಆಗಿರುವ ತೊಂದರೆ ಏನು ಎಂಬುದು ಸೇರಿದಂತೆ ಬೆಳೆ ಪರಿಹಾರ ಹಾಗೂ ಎಲ್ಲ ರೀತಿ ಹೊಣೆಯನ್ನೂ ರಾಜ್ಯ ಸರ್ಕಾರ ಹೊರಬೇಕು. ಕಾವೇರಿ ಜಲಾನಯನ ವ್ಯಾಪ್ತಿಯ ರೈತರ ಪರವಾಗಿ ಸರ್ಕಾರ ನಿಲ್ಲಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಕೆ.ಅನ್ನದಾನಿ, ಸುರೇಶಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಡಿ.ರಮೇಶ್‌ ಇದ್ದರು.

ರೈತ ಸಂಘದ ಮುಖಂಡರು ಜೆ.ಸಿ ವೃತ್ತದಲ್ಲಿ ಕತ್ತೆಗಳ ಮೆರವಣಿಗೆ ನಡೆಸಿದರು
ರೈತ ಸಂಘದ ಮುಖಂಡರು ಜೆ.ಸಿ ವೃತ್ತದಲ್ಲಿ ಕತ್ತೆಗಳ ಮೆರವಣಿಗೆ ನಡೆಸಿದರು
‘ಸರ್ಕಾರಕ್ಕಿಂತ ಕತ್ತೆಯೇ ವಾಸಿ’
‘ರೈತರನ್ನು ಕತ್ತಲೆಯಲ್ಲಿಟ್ಟು ರಾಜ್ಯ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು ಹರಿಸುತ್ತಿದೆ. ಸರ್ಕಾರಕ್ಕಿಂತ ಕತ್ತೆಯೇ ವಾಸಿ’ ಎಂದು ಘೋಷಣೆ ಕೂಗಿದ ರೈತ ಸಂಘದ ಸದಸ್ಯರು ನಗರದ ಜೆ.ಸಿ ವೃತ್ತದಲ್ಲಿ ಕತ್ತೆಗಳನ್ನು ಮೆರವಣಿಗೆ ಮಾಡಿದರು. ಅರೆಬೆತ್ತೆಲೆಯಾಗಿ ಪ್ರತಿಭಟಿಸಿದ ಮುಖಂಡರು ‘ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಮತ್ತೆ ನೀರು ಹರಿಸಿರುವುದು ಅನುಮಾನಾಸ್ಪದವಾಗಿದೆ. ನೀರು ನಿಲ್ಲಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ರೈತಸಂಘ ಮುಖಂಡರಾದ ಶಿವಳ್ಳಿ ಚಂದ್ರಶೇಖರ್‌ ಇಂಡುವಾಳು ಸಿದ್ದೇಗೌಡ ರಮೇಶ್‌ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT