ಭಾನುವಾರ, ಜನವರಿ 17, 2021
20 °C
ಪಾಂಡವಪುರದಲ್ಲಿ ನಡೆದ ಗ್ರಾ.ಪಂ. ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ನಂದಿನಿ ಜಯರಾಮ್ ಹೇಳಿಕೆ

ಆಮಿಷದ ರಾಜಕಾರಣ ಧಿಕ್ಕರಿಸಿದ ಮತದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಹಣ, ಹೆಂಡ ಆಮಿಷದ ರಾಜಕಾರಣದ ವಿರುದ್ಧ ಹೋರಾಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಗಳು ಗೆದ್ದಿರುವುದು ಸಂಭ್ರಮದ ವಿಷಯ ಎಂದು ರೈತ ಸಂಘದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ನಂದಿನಿ ಜಯರಾಮ್ ಹೇಳಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಣದಲ್ಲಿ ಶುಕ್ತವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಮತ್ತು ಸೋತ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಸಮಾವೇಶದಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಭಾಗದ ರೈತ ಸಂಘದ ಮಹಿಳೆಯರೂ ಈ ಚುನಾವಣೆಯಲ್ಲಿ ಯಶಸ್ವಿಕಂಡಿದ್ದಾರೆ. ನಮ್ಮ ನಡವಳಿಕೆಗಳೇ ಇವರು ರೈತ ಸಂಘದ ಕಾರ್ಯಕರ್ತರು ಎಂದು ಗುರುತಿಸುವಂತಾಗಿದೆ ಎಂದರು.

ಮಂಡ್ಯ ಅರ್ಗ್ಯಾನಿಕ್ ಸಂಸ್ಥೆಯ ಪ್ರಸನ್ನ ಎಲ್‌.ಗೌಡ, ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಬಿತ್ತಿದ ಬೀಜ ಇಂದು ಫಲಕೊಡಲು ಆರಂಭಿಸಿರುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ಗೆದ್ದಿರುವ ರೈತ ಸಂಘದ ಅಭ್ಯರ್ಥಿಗಳು ತಮ್ಮ ಗ್ರಾಮಗಳನ್ನು ಮಾದರಿಯಾಗಿ ಮಾಡುವ ಸಂಕಲ್ಪ ತೊಡಬೇಕಿದೆ ಎಂದು ಹೇಳಿದರು.

ರೈತ ರಾಜಕಾರಣದ ದಿಕ್ಸೂಚಿ: ಗ್ರಾ.ಪಂ.ಚುನಾವಣೆಯಲ್ಲಿ ರಾಜ್ಯದಾದ್ಯಂತ ಸುಮಾರು 2ಸಾವಿರಕ್ಕೂ ಹೆಚ್ಚು ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಲಯುತವಾಗಿ ಬೆಳೆಯುತ್ತಿರುವ ರೈತ ಶಕ್ತಿ ಮುಂದಿನ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಕಣ್ಣೀರು ಹಾಕಿದ ಸುನೀತಾ ಪುಟ್ಟಣ್ಣಯ್ಯ: ರೈತ ಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು. ಈ ವೇಳೆ ರೈತ ಸಂಘದ ವರಿಷ್ಠರಾದ ಸುನೀತಾ ಪುಟ್ಟಣ್ಣಯ್ಯ, ಪತಿ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನೆದು ಕಣ್ಣೀರಿಟ್ಟರು. ಸ್ವಲ್ಪ ಹೊತ್ತು ಸಭೆಯಲ್ಲಿ ಮೌನ ಆವರಿಸಿತ್ತು. ಪುಟ್ಟಣ್ಣಯ್ಯ ಇಲ್ಲದಿದ್ದರೂ ನೀವೆಲ್ಲ ಧೃತಿಗೆಡದೆ ಚುನಾವಣೆ ಎದುರಿಸಿ ಜಯಗಳಿಸಿದ್ದೀರಿ. ದರ್ಶನ್‌ ಪುಟ್ಟಣ್ಣಯ್ಯ ಕೆಲವು ದಿನಗಳಲ್ಲಿ ನಿ‌ಮ್ಮೊಂದಿಗೆ ಸೇರಿಕೊಳ್ಳುವರು ಎಂದರು.

ಶುಭ ಕೋರಿದ ದರ್ಶನ್‌: ಸಭೆಯ ಪ್ರಾರಂಭದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅಮೆರಿಕದಿಂದ ವಿಡಿಯೋ ಕಾಲ್‌ ಮೂಲಕ ಗೆಲವು ಸಾಧಿಸಿದ ಅಭ್ಯರ್ಥಿಗಳಿಗೆ ಶುಭ ಕೋರಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಾಡೆ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಮರುವನಹ ಳ್ಳಿಶಂಕರ್, ಕೆನ್ನಾಳು ವಿಜಯಕುಮಾರ್, ನಿಂಗಾಪ್ಪಾಜಿ, ರವಿಕುಮಾರ್, ಪ್ರಗತಿಪರ ಸಂಘಟನೆಯ ಉಗ್ರ ನರಸಿಂಹೇಗೌಡ, ಅಭಿರುಚಿ ಗಣೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು