ಶುಕ್ರವಾರ, ಮೇ 14, 2021
27 °C
ಹೆಬ್ಬಾಡಿಹುಂಡಿಯ ಬೀರೇಶ್ವರ ಕಲಾ ಸಂಘದ ಸದಸ್ಯರಿಂದ ರಂಗ ಕುಣಿತ

ಆಲಗೂಡು: 9 ದೇವರ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ 9 ದೇವರ ಕೂಟಗಳ ಉತ್ಸವ ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆ ವರೆಗೆ ಸಡಗರ, ಸಂಭ್ರಮದಿಂದ ನಡೆಯಿತು.

ಗ್ರಾಮದ ಸಿದ್ದೇಶ್ವರ ದೇವಾಲಯ ಆವರಣದಲ್ಲಿ ಆಲಗೂಡು ಗ್ರಾಮದ ಸಿದ್ದೇಶ್ವರ, ಬೀರೇಶ್ವರ, ಹುಂಜನ‌‌ಕೆರೆ ಗ್ರಾಮದ ಚನ್ನಕೇಶ್ವರ, ಬಳ್ಳೇಕೆರೆಯ ಹುಚ್ಚೂರಾಯ, ಹೆಬ್ಬಾಡಿಹುಂಡಿ ಗ್ರಾಮದ ಬೀರೇಶ್ವರ, ಮಂಡ್ಯ ತಾಲ್ಲೂಕು ಉರಮಾರ ಕಸಲಗೆರೆ ಗ್ರಾಮದ ಬೀರೇಶ್ವರ, ಮೈಸೂರು ತಾಲ್ಲೂಕು ಕಾಳಿಸಿದ್ದನಹುಂಡಿ ಬೀರೇಶ್ವರ, ಬಳ್ಳೇಕೆರೆ ಗ್ರಾಮದ ಬಸವ ಸೇರಿದಂತೆ 9 ದೇವರ ಕೂಟಗಳು ನೆರೆದಿದವು.

ದೇವರ ಉತ್ಸವ ಮೂರ್ತಿಗಳನ್ನು ಹೂ, ಹೊಂಬಾಳೆಗಳಿಂದ ಸಿಂಗರಿಸಲಾ ಗಿತ್ತು. ವೀರ ಮಕ್ಕಳು ತಮಟೆಯ ಸದ್ದಿಗೆ ಹೆಜ್ಜೆ ಹಾಕಿದರು. ಪಟದ ಕುಣಿತ ಪ್ರೇಕ್ಷ ಕರನ್ನು ರಂಜಿಸಿತು. ಉತ್ಸವದ ಜತೆ ಜತೆಗೆ ಕೊಂಬು ಕಹಳೆಗಳು ಮೊಳಗಿದವು.

ರಾತ್ರಿ 10 ಗಂಟೆಗೆ ಶುರುವಾದ ಉತ್ಸವ ಶುಕ್ರವಾರ ಮುಂಜಾನೆ ವರೆಗೂ ನಡೆಯಿತು. ಭಕ್ತರು ಸರದಿಯಂತೆ ಒಂಭತ್ತು ದೇವರಿಗೂ ಪೂಜೆ ಸಲ್ಲಿಸಿದರು. ಈಡುಗಾಯಿ ಸೇವೆ ಹಾಗೂ ಧೂಪ, ದೀಪ, ಪಂಜಿನ ಸೇವೆಗಳು ಅನೂಚಾನವಾಗಿ ಜರುಗಿದವು.

ಉತ್ಸವದಲ್ಲಿ ವಿವಿಧೆಡೆಯ ಭಕ್ತರು ಭಾಗವಹಿಸಿದ್ದರು. ಹೆಬ್ಬಾಡಿಹುಂಡಿ ಗ್ರಾಮದ ಬೀರೇಶ್ವರ ಕಲಾ ಸಂಘದ ಸದಸ್ಯರ ರಂಗ ಕುಣಿತ ಗಮನ ಸೆಳೆಯಿತು.

ಕೋವಿಡ್‌ ಎರಡನೇ ಅಲೆ ಹರಡುತ್ತಿರುವ ಸಂದರ್ಭದಲ್ಲಿ ಆಲಗೂಡು ಗ್ರಾಮದಲ್ಲಿ ದೇವರ ಉತ್ಸವಕ್ಕೆ ಅವಕಾಶ ನೀಡಿರುವ ಕ್ರಮವನ್ನು ಕೆಲವು ಪ್ರಶ್ನಿಸಿದ್ದಾರೆ. ಅರಕೆರೆ ಠಾಣೆ ಪೊಲೀಸರಿಗೆ ವಿಷಯ ಗೊತ್ತಿದ್ದರೂ ಉತ್ಸವ ನಡೆಯಲು, ನೂರಾರು ಜನರು ಸೇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಕೊರೋನಾ ಸೋಂಕು ಹಬ್ಬಿದರೆ ಯಾರು ಹೊಣೆ ಎಂದು ಸ್ಥಳೀಯ ಮುಖಂಡರು ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.