ಮಂಡ್ಯ: ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಪಾಂಡವಪುರ ತಾಲ್ಲೂಕಿನ ಎಂ.ಶೆಟ್ಟಹಳ್ಳಿಯ ಅಭಿಷೇಕ್ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ವೀರೇಶ್ ಸೇರಿದಂತೆ ಒಟ್ಟು 12 ಆರೋಪಿಗಳನ್ನು ಜಿಲ್ಲಾ ಪೊಲೀಸರು ಬುಧವಾರ ಬಂಧಿಸಿದರು.
ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುಣ್ಣನದೊಡ್ಡಿಯ ಕುಮಾರ್, ಪಾಂಡವಪುರದ ಮೀನಾ, ಚಿನಕುರಳಿ ಗ್ರಾಮದ ರತ್ನಮ್ಮ, ಕಾಳೇನಹಳ್ಳಿಯ ಮಲ್ಲಿಕಾರ್ಜುನ, ಮೈಸೂರು ಜಿಲ್ಲೆಯ ಬೆಟ್ಟದಪುರದ ಪುಟ್ಟರಾಜು ಮತ್ತು ಸೋಮಶೇಖರ್, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದ ಶಾರದಮ್ಮ ಮತ್ತು ದಾಸೇಗೌಡ, ಕಾಳೇನಹಳ್ಳಿಯ ಲ್ಯಾಬ್ ಸತ್ಯ, ಬೆಂಗಳೂರು ನಗರ ರಾಜಾಜಿನಗರದ ಪ್ರೇಮಾ ಬಂಧಿತರು.
‘ಆರೋಪಿಗಳಿಂದ ಎರಡು ಸ್ಕ್ಯಾನಿಂಗ್ ಉಪಕರಣಗಳು, ಮೂರು ಕಾರು, ಮೂರು ಮೊಬೈಲ್ ಫೋನ್ ಸೇರಿ ಒಟ್ಟು ₹23 ಲಕ್ಷ ಮೌಲ್ಯದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
‘ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯ ಐದು ಪ್ರಕರಣಗಳಿಗೆ ಸಂಬಂಧಿಸಿ ಇದುವರೆಗೆ ಒಟ್ಟು 30 ಆರೋಪಿಗಳನ್ನು ಬಂಧಿಸಲಾಗಿದೆ. 3–4 ವರ್ಷಗಳಿಂದ ಸಕ್ರಿಯವಾಗಿದ್ದ ಜಾಲದಲ್ಲಿ ಇನ್ನೂ 10ರಿಂದ 15 ಆರೋಪಿಗಳಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದರು.
ತಲೆಮರೆಸಿಕೊಂಡ ಆರೋಪಿಗಳು
‘ಪಾಂಡವಪುರದ ವಸತಿ ಗೃಹದಲ್ಲಿ ನಡೆದಿದ್ದ ಹೆಣ್ಣುಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, 19 ಆರೋಪಿಗಳಲ್ಲಿ 12 ಮಂದಿಯನ್ನು ಬಂಧಿಸಿದ್ದು, ಮೇಲುಕೋಟೆ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಉಳಿದ 11 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದರು.
‘ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನಲ್ಲಿ ಈಚೆಗೆ ನಡೆದ ‘ಡೆಕಾಯ್’ ಕಾರ್ಯಾಚರಣೆಗೆ (ಆರೋಗ್ಯ ಇಲಾಖೆಯಿಂದ ಕಾರ್ಯಾಚರಣೆಗಾಗಿ ಗರ್ಭಿಣಿಯನ್ನು ಕಳುಹಿಸಲಾಗಿತ್ತು) ಸಂಬಂಧಿಸಿದ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. ಇದೇ ರೀತಿ, ಮೈಸೂರಿನ ಉದಯಗಿರಿ ಮತ್ತು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ’ ಎಂದು ಮಾಹಿತಿ ನೀಡಿದರು.
7 ತಂಡಗಳ ರಚನೆ
‘ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಹೆಣ್ಣುಭ್ರೂಣ ಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡುತ್ತಿದ್ದರು. ಏಜೆಂಟ್‌ಗಳಾದ ಆಶಾ ಕಾರ್ಯಕರ್ತೆಯರು, ಖಾಸಗಿ ಲ್ಯಾಬ್ ಟೆಕ್ನೀಷಿಯನ್‌ಗಳ ಮೂಲಕ ದಂಧೆ ನಡೆಸುತ್ತಿದ್ದರು. ಅವರನ್ನು ಬಂಧಿಸಲು 7 ವಿಶೇಷ ತಂಡಗಳನ್ನು ರಚಿಸಿದ್ದೆವು’ ಎಂದರು.
‘ಆರೋಪಿಗಳು ಮೊಬೈಲ್ ಫೋನ್ ಬಳಸದೆ ಇಂಟರ್‌ನೆಟ್ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದುದರಿಂದ ಅವರನ್ನು ಪತ್ತೆ ಹಚ್ಚುವುದು ಸವಾಲಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.
ಎಎಸ್‌ಪಿಗಳಾದ ತಿಮ್ಮಯ್ಯ ಸಿ.ಇ., ಗಂಗಾಧರಸ್ವಾಮಿ, ಡಿಎಚ್‌ಒ ಡಾ.ಕೆ.ಮೋಹನ್ ಇದ್ದರು.
₹1 ಲಕ್ಷದವರೆಗೆ ವಸೂಲಿ
‘ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿದ ನಂತರ ಗರ್ಭಿಣಿಗೆ ಮಾತ್ರೆಗಳನ್ನು ಕೊಟ್ಟು ಗರ್ಭಪಾತ ಮಾಡಿಸುತ್ತಿದ್ದರು. ಬಡವರಿಂದ ₹25ರಿಂದ ₹30 ಸಾವಿರ ಶ್ರೀಮಂತರಿಂದ ₹1 ಲಕ್ಷದವರೆಗೆ ಹಣ ವಸೂಲಿ ಮಾಡಿದ್ದಾರೆ. ಆಸ್ಪತ್ರೆಯ ಕ್ವಾಟ್ರಸ್ ತೋಟದಮನೆ ಕಾರುಗಳಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿದ್ದಾರೆ. 200ಕ್ಕೂ ಹೆಚ್ಚು ಕೃತ್ಯಗಳನ್ನು ನಡೆಸಿದ್ದಾರೆ. ಮೈಸೂರು ಬೆಂಗಳೂರು ತುಮಕೂರು ಹಾಸನ ಚಿಕ್ಕಮಗಳೂರು ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಾಲ ಕಾರ್ಯಾಚರಣೆ ನಡೆಸಿದೆ’ ಎಂದು ಎಸ್‌ಪಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.