ಸೋಮವಾರ, ಆಗಸ್ಟ್ 15, 2022
21 °C
ಗ್ರಾ‌ಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಬಹಿರಂಗ ಹರಾಜು

ನಾಗಮಂಗಲ: 10 ಮಂದಿ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ಕೆಲ ದಿನಗಳ ಹಿಂದೆ ತಾಲ್ಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಿಕೆರೆ ಗ್ರಾಮದಲ್ಲಿ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಬಹಿರಂಗವಾಗಿ ಹರಾಜು ಪ್ರಕ್ರಿಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ ನೀತಿ ಸಂಹಿತೆ
ಉಲ್ಲಂಘನೆ ಆಧಾರದಲ್ಲಿ ಗ್ರಾಮದ ಸುಮಾರು 10 ಮಂದಿಯ ವಿರುದ್ಧ ಬಿಂಡಿಗನವಿಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿಯ ಬಿದರಿಕೆರೆ ಗ್ರಾಮಕ್ಕೆ ತಹಶೀಲ್ದಾರ್ ಕುಂಞಿ ಅಹಮದ್ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು. ಅಲ್ಲದೆ, ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಘಟನೆಯ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಗ್ರಾಮದ ಜನರಿಗೆ ಚುನಾವಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಸದಸ್ಯ ಸ್ಥಾನದ ಬಹಿರಂಗ ಹರಾಜು ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದು, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಕ್ರಮ ಸರಿಯಲ್ಲ ಎಂದರು.

ಗ್ರಾಮಸ್ಥರು ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಸಹಕರಿಸಬೇಕು. ಗ್ರಾಮದಲ್ಲಿರುವ ವಿದ್ಯಾವಂತರು ಗ್ರಾಮದ ಜನರಿಗೆ ಚುನಾವಣೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ
ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ಗ್ರಾಮಸ್ಥ ಸಂತೋಷ್, ‘ಸಂವಿಧಾನಾತ್ಮಕ ಹಕ್ಕನ್ನು ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ರಾಜಕೀಯ ತಂತ್ರಗಳೂ ಕಾರ್ಯನಿರ್ವಹಿಸುತ್ತಿದ್ದು, ಆಣೆ ಪ್ರಮಾಣ ಮಾಡಿಸುವ ಮಟ್ಟಕ್ಕೂ ತಲುಪುವ ಅಪಾಯ ಎದುರಾಗಿದೆ. ಅದನ್ನು ವಿರೋಧಿಸುವ ಮೂಲಕ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಅವರು ಹೇಳಿದರು.

‘ಪ್ರಜಾವಾಣಿ’ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮಸ್ಥರೊಬ್ಬರು ದೇವಾಲಯದ ಅಭಿವೃದ್ಧಿಗಾಗಿ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಈ ಕ್ರಮ ಕೈಗೊಂಡಿದ್ದು, ಇದು ಕಾನೂನು ಬಾಹಿರ ಎಂದು ತಿಳಿದ ಮೇಲೆ ಕೈಬಿಟ್ಟು ಚುನಾವಣೆಗೆ ಹೋಗುತ್ತಿದ್ದೇವೆ ಎಂದರು.

ಚುನಾವಣಾಧಿಕಾರಿ ಶಿವರಾಜು, ಸಹಾಯಕ ಚುನಾವಣಾಧಿಕಾರಿ ರಮೇಶ್, ಪಿಡಿಒ ಸುರೇಶ್, ಆರ್‌ಐ ಮುರಳೀಧರ್, ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರ ಮತ್ತು ಗ್ರಾಮಸ್ಥರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು