ಗುರುವಾರ , ಫೆಬ್ರವರಿ 25, 2021
18 °C
ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ, ಮೇಲುಕೋಟೆ ಗ್ರಾ.ಪಂ.ಗೆ 2ನೇ ಬಾರಿ

ಅಗ್ರಹಾರಬಾಚಹಳ್ಳಿ: 5ನೇ ಬಾರಿ ಗಾಂಧಿಗ್ರಾಮ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿಗೆ ಸತತ 5ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಅಗ್ರಹಾರಬಾಚಹಳ್ಳಿ ಸೇರಿ ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳಿಗೆ ಈ ಬಾರಿಯ ಪುರಸ್ಕಾರ ಬಂದಿದೆ.

ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಗ್ರಾಮ ಪಂಚಾಯಿತಿಗೆ 2ನೇ ಬಾರಿಗೆ ಪುರಸ್ಕಾರ ಬಂದಿದೆ. ಮದ್ದೂರು ತಾಲ್ಲೂಕಿನ ಅಣ್ಣೂರು, ಮಳವಳ್ಳಿ ತಾಲ್ಲೂಕಿನ ಹಲಗೂರು, ನಾಗಮಂಗಲ ತಾಲ್ಲೂಕಿನ ಕಾಂತಪುರ, ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ, ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮ ಪಂಚಾಯಿತಿಗಳು ಈ ಬಾರಿಯ ಗಾಂಧಿಗ್ರಾಮ ಪುರಸ್ಕಾರ ಪಡೆಯುತ್ತಿವೆ.‌

ಅಗ್ರಹಾರಬಾಚಹಳ್ಳಿ ಗ್ರಾಮದ ಎಲ್ಲಾ 12 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತಗೊಂಡಿವೆ. ಹಳ್ಳಿಗಳ ಬೀದಿಯಲ್ಲಿ ಎಲ್‌ಇಡಿ ಬಲ್ಬ್‌, ಸೋಲಾರ್‌ ದೀಪ, ಕ್ರಾಂಕ್ರೀಟ್‌ ರಸ್ತೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಜೈವಿಕ ಎರೆಹುಳು ಘಟಕ, ಶುದ್ಧ ಕುಡಿಯುವ ನೀರಿನ ಘಟಕಗಳು, ಜಾನುವಾರು ಕೊಟ್ಟಿಗೆ, ತೊಟ್ಟಿ ನಿರ್ಮಾಣದದಲ್ಲಿ ಗ್ರಾಮ ಪಂಚಾಯಿತಿ ಮುಂಚೂಣಿಯಲ್ಲಿದೆ.

ಹೀಗಾಗಿ ಕಳೆದ 5 ವರ್ಷಗಳಿಂದಲೂ ಸತತವಾಗಿ ಗಾಂಧಿ ಗ್ರಾಮ ಪುರಸ್ಕಾರ ಪಡೆಯುತ್ತಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ನಿಗದಿಪಡಿಸಿದ ಒಟ್ಟು 150 ಅಂಕಗಳಲ್ಲಿ 138 ಅಂಕ ಗಳಿಸಿದೆ. 2014-15ನೇ ಸಾಲಿನಿಂದ ಸತತವಾಗಿ ಪ್ರಶಸ್ತಿ ಪಡೆಯುತ್ತಿದೆ. ಗಾಂಧಿ ಜಯಂತಿ ಕಾರ್ಯಕ್ರಮದಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಶಸ್ತಿ ಫಲಕ ಹಾಗೂ ₹ 5 ಲಕ್ಷ ನಗದು ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುವಾಗ ವಿವಿಧ ಮಾನದಂಡ ಅನುಸರಿಸಲಾಗುತ್ತದೆ. ನೈರ್ಮಲ್ಯ, ತೆರಿಗೆ ಸಂಗ್ರಹ, ಒತ್ತವರಿ ತೆರವು, ವೈಯಕ್ತಿಕ ಶೌಚಾಲಯ ಮುಂತಾದ ವಿವಿಧ ಹಂತಗಳಲ್ಲಿ ಅಂಕಗಳನ್ನು ನಿಗದಿ ಮಾಡಲಾಗಿರುತ್ತದೆ. ಎಲ್ಲಾ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಗ್ರಾಮ ಪಂಚಾಯಿತಿಗಳು ಪಡೆಯುವ ಅಂಕಗಳ ಆಧಾರದ ಮೇಲೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹದಲ್ಲಿ ಮುಂದಿದೆ. ಗ್ರಾಮದಲ್ಲಿ 1,600 ಕುಟುಂಬಗಳಿದ್ದು ಪ್ರತಿ ಕುಟುಂಬವೂ ಶೌಚಾಲಯ ಹೊಂದಿವೆ.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 80 ಹೆಚ್ಚು ಸೋಲಾರ್‌ ದೀಪ ಅಳವಡಿಸಲಾಗಿದೆ. ಸ್ವಯಂ ಚಾಲಿತ ಬೀದಿ ದೀಪಗಳಿವೆ. ಸರ್ಕಾರದಿಂದ ಸವಲತ್ತುಗಳನ್ನು ಸಮಾನವಾಗಿ ಹಂಚಿದ್ದೇವೆ’ ಎಂದು ಪಿಡಿಒ ದೇವೇಗೌಡ ಹೇಳಿದರು.

ರಾಜ್ಯ ಮಟ್ಟದಲ್ಲಿ ದಾಖಲೆ‌
ರಾಜ್ಯದಲ್ಲಿ ಉನ್ನತ ಸಾಧನೆ ಮಾಡಿರುವ ಕೆಲವೇ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅಗ್ರಹಾರ ಬಾಚಹಳ್ಳಿ ಕೂಡ ಸ್ಥಾನ ಪಡೆದಿದೆ. ಆ ಮೂಲಕ ರಾಜ್ಯ ಮಟ್ಟದಲ್ಲಿ ದಾಖಲೆ ನಿರ್ಮಿಸಿದೆ. ಜನರ ವಿಶ್ವಾಸಕ್ಕೆ ಮೇರೆಗೆ ಅನುದಾನ ಬಳಕೆ, ಸಾರ್ವಜನಿಕರ ಸಮಸ್ಯೆಗಳ ಸ್ಪಂದನೆಯಲ್ಲಿ ಅಗ್ರ ಸ್ಥಾನ ಪಡೆದಿದೆ.

‘5ನೇ ಬಾರಿಗೆ ಪುರಸ್ಕಾರ ಬಂದಿರುವುದಕ್ಕೆ ಬಹಳ ಸಂತೋಷವಿದೆ. ಈ ಪುರಸ್ಕಾರವನ್ನು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಅರ್ಪಿಸುತ್ತೇನೆ’ ಎಂದು ಅಗ್ರಹಾರ ಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಪಿ.ಶ್ರೀಧರ್‌ ಹೇಳಿದರು.

ಪುರಸ್ಕಾರ ಪಡೆದ ಗ್ರಾಮಗಳ ವಿವರ (ಪಟ್ಟಿ)
ತಾಲ್ಲೂಕು ಗ್ರಾ.ಪಂ
ಕೆ.ಆರ್‌.ಪೇಟೆ ಅಗ್ರಹಾರ ಬಾಚಹಳ್ಳಿ
ಮದ್ದೂರು ಅಣ್ಣೂರು
ಮಳವಳ್ಳಿ ಹಲಗೂರು
ನಾಗಮಂಗಲ ಕಾಂತಪುರ
ಮಂಡ್ಯ ಸಾತನೂರು
ಪಾಂಡವಪುರ ಮೇಲುಕೋಟೆ
ಶ್ರೀರಂಗಪಟ್ಟಣ ಬೆಳಗೊಳ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು