ಭಾನುವಾರ, ಆಗಸ್ಟ್ 14, 2022
28 °C
ಮಂಡ್ಯದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಸರ್ಕಾರದ ನೀತಿ ಖಂಡಿಸಿ ಹೆದ್ದಾರಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ದೆಹಲಿ ಪ್ರವೇಶ ನಿರಾಕರಿಸಿ  ಅವರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ಖಂಡಿಸಿ ಮತ್ತು ಹೋರಾಟ ಬೆಂಬಲಿಸಿ ರೈತ, ದಲಿತ, ಕಾರ್ಮಿಕ, ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕಪ್ಪುಪಟ್ಟಿ ಧರಿಸಿ ಮಂಗಳವಾರ ಬೆಂಗಳೂರು– ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಹೆದ್ದಾರಿ ತಡೆದು ಅಸಮಾಧಾನ ವ್ಯಕ್ತಪಡಿಸಿದರು.

ರೈತ, ಕಾರ್ಮಿಕ, ದಲಿತ ವಿರೋಧಿ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು. ದೆಹಲಿ ಗಡಿಯಲ್ಲಿ ರೈತರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು. ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಅವರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

‘ರೈತರ ಹಿತ ಕಾಪಾಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಮಾರಕವಾಗಿರುವ ಮೂರು ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ಸರಿಯಲ್ಲ. ಕೃಷಿ ಮತ್ತು ಭೂಸುಧಾರಣೆ ಕಾಯ್ದೆ, ವಿದ್ಯುತ್ ಖಾಸಗೀಕರಣ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರು ಹಾಗೂ ಕಾರ್ಮಿಕರನ್ನು ಬಲಹೀನರನ್ನಾಗಿ ಮಾಡಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ವಿರೋಧ ವ್ಯಕ್ತವಾದ ಮೇಲೂ ವಾಪಸ್‌ ಪಡೆಯದ ಕಾರಣ ರೈತರು ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಗೆ ಅವಕಾಶ ನೀಡಿ ಸರಿಯಾದ ರೀತಿಯಲ್ಲಿ ನಿಭಾಯಿಸದೆ, ರೈತರ ಮೇಲೆ ದಮನಕಾರಿ, ಅಮಾನವೀಯ ದಾಳಿ ನಡೆಸುತ್ತಿದ್ದಾರೆ. ಅಶ್ರುವಾಯು ಸಿಡಿಸಿ, ಕೊರೆಯುವ ಚಳಿಯಲ್ಲಿ ಜಲಫಿರಂಗಿ ಪ್ರಯೋಗಿಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಹೆದ್ದಾರಿ ಅಗೆಸಿ, ದೆಹಲಿ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿದೆ ಎಂದು ದೂರಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ದಸಂಸ ರಾಜ್ಯ ಘಟಕದ ಸಂಚಾಲಕ ಎಂ.ಬಿ.ಶ್ರೀನಿವಾಸ್, ರೈತ ನಾಯಕಿ ಸುನಂದಾ ಜಯರಾಂ, ಮುಖಂಡರಾದ ಬೋರಾಪುರ ಶಂಕರೇಗೌಡ, ಸುಧೀರ್‌ಕುಮಾರ್‌, ಇಂಡುವಾಳು ಚಂದ್ರಶೇಖರ್, ಪ್ರೊ.ಹುಲ್ಕೆರೆ ಮಹದೇವು, ಟಿ.ಎಲ್.ಕೃಷ್ಣೇಗೌಡ, ರಮಾನಂದ, ಶೆಟ್ಟಹಳ್ಳಿ ರವಿಕುಮಾರ್, ಪ್ರಸನ್ನ ತೂಬಿನಕೆರೆ, ಕರ್ನಾಟಕ ಜನಶಕ್ತಿ ಪೂರ್ಣಿಮಾ, ಮುದ್ದೇಗೌಡ, ಜನಾರ್ಧನ್, ಹರವು ಪ್ರಕಾಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.