ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಅಕ್ಕಿ ಗಿರಣಿಯಲ್ಲಿ ಮಾತ್ರ ಹಲ್ಲಿಂಗ್‌

87 ರೈಸ್‌ಮಿಲ್‌ಗಳಲ್ಲಿ ಭತ್ತ ಸಂಗ್ರಹ; ಸೂಚನೆ ನೀಡಿದ ಜಿಲ್ಲಾಧಿಕಾರಿ ಎಸ್‌.ಅಶ್ವಥಿ
Last Updated 17 ಏಪ್ರಿಲ್ 2021, 9:20 IST
ಅಕ್ಷರ ಗಾತ್ರ

ಮಂಡ್ಯ: ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 87 ಅಕ್ಕಿ ಗಿರಣಿ ಮಾಲೀಕರು ಭತ್ತ ಸಂಗ್ರಹಿಸಿದ್ದು, ಕೇವಲ 32 ಗಿರಣಿಗಳಲ್ಲಿ ಮಾತ್ರ ಹಲ್ಲಿಂಗ್‌ ಪ್ರಕ್ರಿಯೆ ನಡೆಯುತ್ತಿದೆ. ಕೂಡಲೇ ಎಲ್ಲಾ ಗಿರಣಿಗಳಲ್ಲಿ ಹಲ್ಲಿಂಗ್‌ ಆರಂಭಿಸಿ ಪರಿವರ್ತಿತ ಅಕ್ಕಿ ಸಂಗ್ರಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರಿಂದ ಖರೀದಿಸಿ, ಸಂಗ್ರಹಿಸಲಾಗಿರುವ ಭತ್ತದ ಹಲ್ಲಿಂಗ್ ಪ್ರಕ್ರಿಯೆ ಶೀಘ್ರವೇ ನಡೆಯಬೇಕು. ಈಗ ಇನ್ನೊಂದು ಭತ್ತದ ಹಂಗಾಮು ಬರುತ್ತಿದ್ದು ರೈತರು ಶೀಘ್ರ ಕಟಾವು ಮಾಡುವ ಸಾಧ್ಯತೆ ಇದೆ. ಈಗ ಸಂಗ್ರಹಿಸಲಾಗಿರುವ ಭತ್ತದ ಹಲ್ಲಿಂಗ್‌ ನಡೆಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಈ ಕುರಿತು ಅಕ್ಕಿ ಗಿರಣಿ ಮಾಲೀಕರಿಗೆ ಶೀಘ್ರ ಸೂಚನೆ ನೀಡಬೇಕು. ಗಿರಣಿಗಳಲ್ಲಿ ಸಂಗ್ರಹವಾ ಗಿರುವ ಭತ್ತದ ಪ್ರಮಾಣವನ್ನು ಪರಿಶೀ ಲನೆ ನಡೆಸಬೇಕು’ ಎಂದು ಹೇಳಿದರು.

‘2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅಕ್ಕಿ ಸಂಗ್ರಹಿಸಿರುವ ಎಲ್ಲಾ ಗಿರಣಿಗಳು ಹಲ್ಲಿಂಗ್‌ ಪ್ರಕ್ರಿಯೆ ಕುರಿತ ಮಾಹಿತಿ ನೀಡಬೇಕು. ಪ್ರಕ್ರಿಯೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕುರಿತು ದೂರುಗಳು ಬಂದಿವೆ. ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಶೀಘ್ರ ವಿದ್ಯುತ್‌ ಸಮಸ್ಯೆ ಪರಿಹರಿಸಲಾಗುವುದು’ ಎಂದರು.

‘ಸಂಗ್ರಹಿಸಿದ ಭತ್ತ ಹಲ್ಲಿಂಗ್ ಮಾಡಿ ಪರಿವರ್ತಿತ ಅಕ್ಕಿ ಪಡೆಯಲು ಏಪ್ರಿಲ್, ಮೇ, ಜೂನ್ ತಿಂಗಳವರೆಗೆ ಗುರಿ ನಿಗದಿಪಡಿಸಿದ್ದು, ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗಲು ಗಿರಣಿ ಮಾಲೀಕರು ಸಹಕಾರ ನೀಡಬೇಕು. ಒಳ್ಳೆಯ ಗುಣಮಟ್ಟದ ಅಕ್ಕಿ ನೀಡುವಲ್ಲಿ ಗಿರಣಿ ಮಾಲೀಕರು ಕ್ರಮವಹಿಸಬೇಕು. ಕಳಪೆ ಗುಣಮಟ್ಟದ ಅಕ್ಕಿ ನೀಡಿದರೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಭತ್ತ, ರಾಗಿ ಖರೀದಿ ಮಾಡಿರುವ ರೈತರಿಗೆ ಹಣ ಸಂದಾಯ ಮಾಡಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಮಾರ್ಕೆಟಿಂಗ್‌ ಫೆಡರೇಷನ್ ಅಧಿಕಾರಿಗಳು ಕ್ರಮ ವಹಿಸಬೇಕು. ರೈತರಿಗೆ ಹಣ ವಿತರಿಸುವ ಪ್ರಕ್ರಿಯೆ ಯಾವುದೇ ಕಾರಣಕ್ಕೂ ತಡವಾಗಬಾರದು. ನಿಗದಿತ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡರೆ ಮುಂದಿನ ಹಂಗಾಮಿನ ವೇಳೆಗೆ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾ ರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ, ಜಂಟಿ ಕೃಷಿ ನಿರ್ದೇಶಕರಾದ ಬಿ.ಎಸ್.ಚಂದ್ರಶೇಖರ್, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಕಾರ್ಯದರ್ಶಿ ಎಚ್.ಸಿ.ಮಹೇಶ್ ಇದ್ದರು.

ನೋಂದಣಿ, ಖರೀದಿ ಅವಧಿ ವಿಸ್ತರಣೆ

2021-22ನೇ ಸಾಲಿನ ರಬಿ, ಮುಂಗಾರು ಅವಧಿಯ ಋತುವಿನ ಭತ್ತ ಖರೀದಿ ಸಂಬಂಧ ನೋಂದಣಿ ದಿನಾಂಕವನ್ನು ಮೇ 5ರ ವರೆಗೆ, ಖರೀದಿ ದಿನಾಂಕವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.

ಪ್ರತಿ ಕ್ವಿಂಟಲ್ ಸಾಮಾನ್ಯ ಮತ್ತು ಜ್ಯೋತಿ ಭತ್ತವನ್ನು ₹ 1868ರ ದರದಲ್ಲಿ ಖರೀದಿಸಲಾಗುವುದು. ಕೋವಿಡ್-19 ಹರಡುವಿಕೆ ಹಿನ್ನೆಲೆಯಲ್ಲಿ ಅಂತರ ಹಾಗೂ ನೈರ್ಮಲ್ಯ ಕಾಪಾಡಲು ಸಂಗ್ರಹಣಾ ಕೇಂದ್ರದಲ್ಲಿ ಜನಜಂಗುಳಿ ಉಂಟಾಗದಂತೆ ನೋಡಿಕೊಳ್ಳಲು ನಿರ್ದಿಷ್ಟ ಸಂಖ್ಯೆಯ ರೈತರಿಗೆ ಮಾತ್ರ ಅವಕಾಶ ನೀಡಲಾಗುವುದು.

ಕೋವಿಡ್‌ ಬಗ್ಗೆ ಜಿಲ್ಲಾಡಳಿತ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಗ್ರಹಣಾ ಕೇಂದ್ರಕ್ಕೆ ಬರುವ ರೈತರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT