ನಾಗಮಂಗಲ: ‘ಕಚೇರಿ ಕೆಲಸ ಮಾಡಿಕೊಡಲು ಜನರ ಬಳಿ ಅಧಿಕಾರಿಗಳು ಲಂಚ ಕೇಳಿದರೆ ನನ್ನ ಗಮನಕ್ಕೆ ತನ್ನಿ, ನಿರ್ಲಕ್ಷ್ಯ ಮಾಡುವ ಅಧಿಕಾರಿ ಬಗ್ಗೆಯೂ ಮಾಹಿತಿ ನೀಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲ್ಲೂಕಿನ ಕಾಳಿಂಗನಹಳ್ಳಿ, ಚುಂಚನಹಳ್ಳಿ ಹಾಗೂ ನೆಲ್ಲಿಗೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶನಿವಾರ ಜನಸಂಪರ್ಕ ಸಭೆ ನಡೆಸಿ ಮಾತನಾಡಿದರು.
‘ನೀವು ಮತಹಾಕಿ ಗೆಲ್ಲಿಸಿ ಶಾಸಕನನ್ನಾಗಿ ಮಾತ್ರ ಮಾಡುವ ಜೊತೆಗೆ ಸರ್ಕಾರದ ಸಚಿವನಾಗಿ ಮಾಡಿದ್ದೀರಿ. ತಾಲ್ಲೂಕಿನಲ್ಲಿ ಯಾವುದೇ ಇಲಾಖೆಯ ಅಧಿಕಾರಿಗೂ ಲಂಚ ನೀಡದೆ ತಮ್ಮ ಕೆಲಸ ಮಾಡಿಸಿಕೊಳ್ಳಿ, ಯಾವ ಅಧಿಕಾರಿ ಕೆಲಸ ಮಾಡಿಕೊಡದೆ ನಿರ್ಲಕ್ಷ್ಯ ಮಾಡುತ್ತಾರೆ ಅವರ ವಿರುದ್ಧ ಮೇಲಾಧಿಕಾರಿ ಗಮನಕ್ಕೆ ತನ್ನಿ, ಆದರೂ ಸಮಸ್ಯೆ ಬಗೆಹರಿಯದಿದ್ದರೆ ನನ್ನ ಕಚೇರಿಗೆ ತಿಳಿಸಿ ಕೆಲಸ ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು.
‘ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದರೆ ಅದನ್ನು ನಿಲ್ಲಿಸಿ, ಜನರ ಕೆಲಸ ಮಾಡಿಕೊಡಿ, ಯಾವ ಅಧಿಕಾರಿಯ ಬಳಿಯು ವಿನಂತಿ ಮಾಡಬೇಡಿ. ನೇರವಾಗಿ ಮಧ್ಯವರ್ತಿಯಿಲ್ಲದೆ ಅಧಿಕಾರಿ ಬಳಿ ಕೆಲಸ ಮಾಡಿಸಿಕೊಳ್ಳಿ. ಕಳೆದ 4 ತಿಂಗಳ ಹಿಂದೆ ಬಹಳ ಅಪೇಕ್ಷೆಯಿಟ್ಟು ರಾಜ್ಯದಲ್ಲಿ ಬದಲಾವಣೆ ತೀರ್ಮಾನ ಮಾಡಿ ಕಾಂಗ್ರೆಸ್ ಸರ್ಕಾರ ತಂದಿದ್ದೀರಿ. ಹೆಚ್ಚು ಬಹುಮತ ಬಂದಿರುವ ಸರ್ಕಾರ ನಮ್ಮದಾಗಿದೆ. ರಾಜ್ಯದ ಸಚಿವನಾಗಿರುವ ಕಾರಣ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ’ ಎಂದರು.
‘123 ವರ್ಷದ ನಂತರ ಅತೀ ಕಡಿಮೆ ಮಳೆಯಾಗಿರುವುದು ಈ ವರ್ಷ. ಇಡೀ ರಾಷ್ಟ್ರದಲ್ಲಿ ಬರಗಾಲ ಆವರಿಸಿಕೊಂಡಿದೆ. 236 ತಾಲ್ಲೂಕಿನಲ್ಲಿ 195 ತಾಲ್ಲೂಕು ಒಂದೇ ಬಾರಿಗೆ ಬರಗಾಲವೆಂದು ಈ ಬಾರಿ ಘೋಷಣೆಯಾಗಿದೆ. ನಮ್ಮ ತಾಲ್ಲೂಕಿನ ಅಭಿವೃದ್ಧಿಗೂ ಶ್ರಮಿಸುವೆ, ಆ ಮೂಲಕ ನೀವು ನೀಡಿರುವ ಮತಕ್ಕೆ ಫಲಶೃತಿ ನೀಡುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಆನಂದ್, ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಯಿಂ ಉನ್ನಿಸಾ, ತಾ.ಪಂ.ಇಒ ಚಂದ್ರಮೌಳಿ, ಎಸಿಎಫ್ ಶಿವರಾಂ, ಪಶುಸಂಗೋಪನೆ ಇಲಾಖೆಯ ಡಾ.ಕುಮಾರ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.