ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ವೈದ್ಯರೇ ಶಂಕಿತರಾದರೆ ಚಿಕಿತ್ಸೆ ನೀಡುವವರು ಯಾರು?

ಸರ್ಕಾರಿ– ಖಾಸಗಿ ಆಸ್ಪತ್ರೆ ವೈದ್ಯರಿಗೆ ಜಾಗೃತಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಪ್ರಶ್ನೆ
Last Updated 18 ಮಾರ್ಚ್ 2020, 14:03 IST
ಅಕ್ಷರ ಗಾತ್ರ

ಮಂಡ್ಯ: ‘ವೈದ್ಯರು ರೋಗಿಯನ್ನು ಪರೀಕ್ಷಿಸಿದ ನಂತರ ತಪ್ಪದೇ ಕೈತೊಳೆದುಕೊಳ್ಳಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ವೈದ್ಯರೇ ರೋಗಪೀಡಿತರಾದರೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುವರು ಯಾರು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಪ್ರಶ್ನಿಸಿದರು.

ಆರೋಗ್ಯ ಇಲಾಖೆಯ ವತಿಯಿಂದ ನಗರದ ಮಿಮ್ಸ್‌ ಇಎನ್‌ಟಿ ವಿಭಾಗದ ಸಭಾಂಗಣದಲ್ಲಿ ಬುಧವಾರ ಸರ್ಕಾರಿ– ಖಾಸಗಿ ಆಸ್ಪತ್ರೆ ವೈದ್ಯರಿಗೆ ನಡೆದ ಕೋವಿಡ್‌–19 ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ವೈದ್ಯರೂ ಮುಖಗವಸು ಧರಿಸುವ ಅವಶ್ಯಕತೆ ಇಲ್ಲ ಎಂದು ಡಿಎಚ್‌ಒ ಹೇಳಿದಾಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ವೈದ್ಯರಿಗೂ ಸುರಕ್ಷತಾ ಪರಿಕರಗಳನ್ನು ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು. ಅಗತ್ಯ ಬಿದ್ದಲ್ಲಿ ತರಿಸಿಕೊಡಲಾಗುವುದು ಎಂದು ಡಿಎಚ್ಒ ಭರವಸೆ ನೀಡಿದರು.

‘ವಿದೇಶಗಳಿಂದ ಜಿಲ್ಲೆಗೆ ಬಂದಿರುವವರು ಮನೆಯಲ್ಲೇ ಇರಬೇಕು. ಸ್ಥಳೀಯ ಸಂಪರ್ಕಕ್ಕೆ ಬಂದು ಆತಂಕ ಸೃಸ್ಟಿಸಬಾರದು. ಆರೋಗ್ಯ ಸಮಸ್ಯೆ ಇದ್ದರೂ ಖಾಸಗಿ ಕ್ಲಿನಿಕ್‌ಗಳಿಗೆ ತೆರಳಬಾರದು. ಮನೆಯಲ್ಲೇ ಇದ್ದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಹಕಾರ ನೀಡಬೇಕು’ ಎಂದರು.

‘ಇತ್ತೀಚೆಗೆ ಜಪಾನ್‌ನಿಂದ ಬಂದ ಮಹಿಳೆಯೊಬ್ಬರು ನಾಗಮಂಗಲದ ವಿವಿಧೆಡೆ ಓಡಾಡುತ್ತಿದ್ದರು. ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಸ್ಟಿಯಾಗಿತ್ತು. ಹೀಗಾಗಿ ವಿದೇಶದಿಂದ ಬಂದವರು ತಮ್ಮಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಸಹಾಯವಾಣಿ ಸಂಪರ್ಕಿಸಿ ಮಾಹಿತಿ ನೀಡಬಹುದು. ಅವರಿಗೆ 14 ದಿನ ಮನೆಯಲ್ಲೇ ಇರಬೇಕು. ನಂತರ ಅವರನ್ನು ಪ್ರತ್ಯೇಕ ವಾಹನದ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದು ಪರೀಕ್ಷೆ ನಡೆಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಕೋವಿಡ್‌–19 ದೃಢಪಟ್ಟಿಲ್ಲ. ಶಂಕಿತರು ಇದ್ದು, ಗುಣಮುಖರಾಗುತ್ತಿದ್ದಾರೆ. ರೋಗವಿಲ್ಲ ಎಂದು ನಿರ್ಲಕ್ಷ್ಯ ವಹಿಸುವಂತಿಲ್ಲ. ಜಿಲ್ಲೆಗೆ ವಿವಿಧ ದೇಶಗಳಿಂದ ಜನರು ಬರುತ್ತಿದ್ದು ಆಶಾ ಕಾರ್ಯಕರ್ತೆಯರ ಮೂಲಕ ಅವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ರೋಗ ಲಕ್ಷಣಗಳಿದ್ದಲ್ಲಿ 104, 100 ಸಹಾಯವಾಣಿ ಸಂಪರ್ಕಿಸಿ ಇತರರಿಗೆ ಹರಡದಂತೆ ಎಚ್ಚರ ವಹಿಸಬೇಕು’ ಎಂದರು.

ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ. ಸುಭಾಷ್‌ಬಾಬು ಮಾತನಾಡಿ, ‘ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆ ನೀಡಲಾಗಿದೆ. ಮಕ್ಕಳು ಮನೆಯಲ್ಲಿದ್ದು, ಹೆಚ್ಚು ಸುರಕ್ಷತೆಯಿಂದ ನೋಡಿಕೊಳ್ಳಬೇಕು. ಆಗಿಂದಾಗ್ಗೆ ನಲ್ಲಿ ನೀರಿನಲ್ಲಿ ಕೈ ತೊಳೆಯುವುದನ್ನು ಅಭ್ಯಾಸ ಮಾಡಿಸಬೇಕು. ಸಿಕ್ಕ ಸಿಕ್ಕ ವಸ್ತುಗಳನ್ನು ಮುಟ್ಟುವುದನ್ನು ತಪ್ಪಿಸಬೇಕು’ ಎಂದು ಹೇಳಿದರು.

‘ಮಾರ್ಚ್‌ 16ರವರೆಗೆ ಮಧ್ಯ ಪೂರ್ವ ದೇಶಗಳಲ್ಲಿ ಕೋವಿಡ್‌–19ನಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಚೀನಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ 147 ಸೋಂಕಿತರಿದ್ದು, ಕರ್ನಾಟಕ, ಮಹಾರಾಷ್ಟ್ರ, ದೆಹಲಿಯಲ್ಲಿ’ ಎಂದರು.

ಜನರಲ್‌ ಮೆಡಿಸಿನ್‌ ವಿಭಾಗದ ಪ್ರಾಧ್ಯಾಪಕ ಜಿ.ವಿ.ಅನಿಕೇತನ, ಪ್ರಾಧ್ಯಾಪಕಿ ಡಾ.ಸುಮಂಗಲಾ ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT