ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕಾನ್ಸರ್‌ ಕಳೆಯಿತು, ಕನಸು ಉಳಿಯಿತು!

ಅಂಡಾಷಯ ಕಾನ್ಸರ್‌ ವಿರುದ್ಧ ಹೋರಾಡಿ ಗೆದ್ದ ಮಂಡ್ಯದ ಬಿ.ಎಸ್‌.ಸತ್ಯಾನಿಸರ್ಗಾ
Last Updated 3 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮಂಡ್ಯ: 2018, ಹೊಸ ವರ್ಷಾರಂಭಕ್ಕೆ ಹೊಸ ಕನಸುಗಳೊಂದಿಗೆ ಹೆಜ್ಜೆ ಇಟ್ಟಿದ್ದೆ. ಆದರೆ ಜ.2ರಂದು ನನ್ನ ಕನಸುಗಳ ಗೋಪುರ ಕುಸಿದು ಬಿತ್ತು. ಅಂದು ನನ್ನ ಗರ್ಭಕೋಶದಲ್ಲಿ ಅಂಡಾಷಯ ಕ್ಯಾನ್ಸರ್‌ (ಓವರಿ ಇನ್‌ ಕಾರ್ಸನೋಮಾ) ಪತ್ತೆಯಾಯಿತು, ಅದೂ 4ನೇ ಅಂತಿಮ ಅಂತ, 3ನೇ ಗ್ರೇಡ್‌ನಲ್ಲಿದ್ದಾಗ. ಬದುಕಲು ಸಾಧ್ಯವೇ ಇಲ್ಲ ಎಂಬ ಮಾತುಗಳು ನನ್ನೊಳಗಿನ ಭರವಸೆಯನ್ನು ಕೊಂದು ಹಾಕಿತು.

44 ವರ್ಷ ವಯಸ್ಸಿಗೇ ಯಮರಾಯ ಬಂದನೇ ಎಂಬ ಪ್ರಶ್ನೆ ಮೂಡಿತು. ಕುಟುಂಬದವರು ಬದುಕುವ ಭರವಸೆ ಮೂಡಿಸಿದರೂ ವೈದ್ಯಲೋಕ ಭರವಸೆ ನೀಡಲಿಲ್ಲ. ‘ಶೇ 4ರಷ್ಟು ಮಾತ್ರ ಉಳಿಯಬಹುದು, ಶೇ 96ರಷ್ಟು ಉಳಿಯುವ ಸಾಧ್ಯತೆ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಬೇಡ, ಇದ್ದಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ’ ಎಂದರು.

ನನ್ನ ಕುಟುಂಬ ಸದಸ್ಯರಿಗೆ ಆ ಶೇ 4ರಷ್ಟು ಭರವಸೆ ಶಕ್ತಿ ತುಂಬಿತು. ವೈದ್ಯರು ಶಸ್ತ್ರಚಿಕಿತ್ಸೆ ನಿರಾಕರಿಸಿದ್ದರೂ ನನ್ನ ತಾಯಿಯ ಅಕ್ಕನ ಮಗ, ಹಿರಿಯ ಅಧಿಕಾರಿ ಡಾ.ಟಿ.ಎಸ್‌.ಹನುಮಂತೇಗೌಡ ಅವರ ಒತ್ತಾಯದ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಲೊಪ್ಪಿದರು. ಖಿನ್ನತೆಯ ಬೆಂಕಿಯೊಳಗೆ ಬೇಯುತ್ತಿದ್ದ ನಾನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ದಾಖಲಾದೆ.

ಆಸ್ಪತ್ರೆಯ ಕಾರಿಡಾರ್‌ನಲ್ಲಿ ಓಡಾಡಿದೆ, ಮಕ್ಕಳ ವಾರ್ಡ್‌ಗೆ ಹೋದೆ. ಕ್ಯಾನ್ಸರ್‌ ವಿರುದ್ಧ ಪುಟಾಣಿ ಮಕ್ಕಳು ನಡೆಸುತ್ತಿದ್ದ ಹೋರಾಟವನ್ನು ಕಣ್ಣಾರೆ ಕಂಡೆ. ಅದೇನೋ ಒಂದು ರೀತಿ ಶಕ್ತಿಯ ಸಂಚಾರ ನನ್ನ ದೇಹವನ್ನು ತುಂಬಿಕೊಂಡಿತು. ಖಿನ್ನತೆಗೊಳಗಾಗಿದ್ದ ನಾನು ಆ ಕ್ಷಣದಲ್ಲಿ ಬದುಕುವ ನಿರ್ಧಾರ ಮಾಡಿದೆ, ಕ್ಯಾನ್ಸರ್‌ ವಿರುದ್ಧ ನನ್ನ ಹೋರಾಟ ಆರಂಭವಾಯಿತು.

ಡಾ.ಬಾಫ್ನಾ, ಡಾ.ಪಲ್ಲವಿ ಶಸ್ತ್ರಚಿಕಿತ್ಸೆ ಆರಂಭಿಸಿದರು, ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಶೇ 4 ಎನ್ನುತ್ತಿದ್ದ ವೈದ್ಯರು ಶೇ 40ರಷ್ಟು ಭರವಸೆಕೊಟ್ಟರು. ಆದರೆ, ಕಿಮೊ ತೆಗೆದುಕೊಂಡು ತಡೆದುಕೊಳ್ಳುವ ಶಕ್ತಿ ಬೇಕಿತ್ತು. ಕಿಮೊಗೆ ಸ್ಪಂದಿಸಿದರೆ ಶೇ 100ರಷ್ಟು ಬದುಕುತ್ತಾರೆ ಎಂಬ ವೈದ್ಯರ ಮಾತುಗಳು ಕಿವಿಗೆ ಬಿದ್ದವು. ನೋವು ಸಾಗರದಷ್ಟಿರಲಿ, ತಡೆದುಕೊಳ್ಳುತ್ತೇನೆ ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿದೆ.

ಫೆ.10ರಂದು ಕಿಮೊ ಆರಂಭವಾಯಿತು. ಮೊದಲ ಕಿಮೊದಲ್ಲೇ ನನ್ನ ದೇಹದೆಲ್ಲೆಡೆ ಕೂದಲು ಉದುರಿತು, ನಾಲಗೆ ತನ್ನ ಶಕ್ತಿ ಕಳೆದುಕೊಂಡಿತು. ಊಟ ನಿಂತು ಹೋಯಿತು, ಅಸಾಧ್ಯ ನೋವು ಕಾಡಿತು. ಆ ನೋವಿನ ನಡುವೆ ನಾನು ಧ್ಯಾನದತ್ತ ಹೆಜ್ಜೆ ಇಟ್ಟೆ. ಕಿದ್ವಾಯಿ ಆಸ್ಪತ್ರೆಯಲ್ಲಿದ್ದ ಧರ್ಮಶಾಲೆಯೊಳಗೆ ನಡೆದು ಧ್ಯಾನಸ್ಥಳಾಗಿ ಕುಳಿತು ನೋವು ತಡೆದುಕೊಳ್ಳುತ್ತಿದ್ದೆ.

ನಂತರ 22 ದಿನಕ್ಕೆ ಒಂದರಂತೆ ಸತತ 6 ಕಿಮೊ ತೆಗೆದುಕೊಂಡೆ. 3 ಕಿಮೊ ಮುಗಿಯುವ ಹೊತ್ತಿಗೆ ಅಂಡಾಷಯ ಕ್ಯಾನ್ಸರ್‌ ಗೆದ್ದೆ ಎಂಬ ಭಾವ ನನ್ನೊಳಗೆ ಮೂಡಿತು. ರೋಗದ ಸಿಎ ಮೌಲ್ಯ (ಕ್ಯಾನ್ಸರ್‌ ಮಾರ್ಕರ್‌ ಟೆಸ್ಟ್‌) ಸಹಜ ಸ್ಥಿತಿಗೆ ಬಂದೊಡನೆ ಡಾ.ಬಾಫ್ನಾ, ಡಾ. ಪಲ್ಲವಿ ಸಂತಸದಿಂದ ಕುಣಿದಾಡಿದರು, ಅವರೇ ಕ್ಯಾನ್ಸರ್‌ ಗೆದ್ದಷ್ಟು ಆನಂದ ಅನುಭವಿಸಿದರು.

2020, ಜೂನ್‌ 20ರಂದು 2ನೇ ಆಪರೇಷನ್‌, 2021 ಜ.20ರಂದು 3ನೇ ಆಪರೇಷನ್‌ ಆದವು. ಇಲ್ಲಿಯವರೆಗೆ ಒಟ್ಟು 20 ಕಿಮೊ ತೆಗೆದುಕೊಂಡು ಜೀವಂತವಿದ್ದೇನೆ. ಧ್ಯಾನ ನನ್ನ ಭರವಸೆಯ ಶಕ್ತಿಯಾಗಿದೆ. ಅಲೊಪತಿ ಔಷಧಿ ಜೊತೆಗೆ ಆಯುರ್ವೇದವನ್ನೂ ತೆಗೆದುಕೊಳ್ಳುತ್ತಿದ್ದೇನೆ. 2018ರ ಹೊಸ ವರ್ಷದಲ್ಲಿ ಕಳೆದುಕೊಂಡಿದ್ದ ಕನಸುಗಳನ್ನು ಮತ್ತೆ ಕಟ್ಟಿಕೊಂಡಿದ್ದೇನೆ. ಅಂಡಾಷಯ ಕ್ಯಾನ್ಸರ್‌ ವಿರುದ್ಧದ ನನ್ನ ಹೋರಾಟಗಳನ್ನು ಒಂದುಗೂಡಿಸಿ ‘ಗೆದ್ದೇ ಗೆಲ್ಲುವೆನು ಒಂದು ದಿನ’ ಪುಸ್ತಕ ಬರೆದಿದ್ದೇನೆ.

ನನ್ನ ಹೋರಾಟ ಇಷ್ಟಕ್ಕೇ ಮುಗಿಯಲಿಲ್ಲ, ‘ನನ್ನ ಹೋರಾಟವೇನಿದ್ದರೂ ಕಾನ್ಸರ್‌ ವಿರುದ್ಧ, ಸಾವಿನ ವಿರುದ್ಧ ಅಲ್ಲ’ ಎಂಬ ಘೋಷಣೆಯೊಂದಿಗೆ ಪ್ರತಿದಿನದ ಬೆಳಗು ಕಾಣುತ್ತಿದ್ದೇನೆ. ‘ನನ್ನೊಳಗಿನ ನಾನು’ ಇನ್ನೊಂದು ಪುಸ್ತಕ ಸಿದ್ಧಗೊಳ್ಳುತ್ತಿದೆ.ನನ್ನ ಸಂಪರ್ಕ ಸಂಖ್ಯೆ: 9916599956.
–ಬಿ.ಎಸ್‌.ಸತ್ಯನಿಸರ್ಗ, ಮಂಡ್ಯ

___
ನಿರೂಪಣೆ: ಎಂ.ಎನ್‌.ಯೋಗೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT