ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರಗೊಂಡ ಕಾವೇರಿ ಹೋರಾಟ: ಮೇಕೆದಾಟು ಯೋಜನೆ ಜಾರಿಯೇ ಪರಿಹಾರ ಎಂದ ಚುಂಚಶ್ರೀ

ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯ
Published 22 ಸೆಪ್ಟೆಂಬರ್ 2023, 23:31 IST
Last Updated 22 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಮಂಡ್ಯ: ‘ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಯೋಜನೆ ಜಾರಿಯೇ ಪರಿಹಾರ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಶುಕ್ರವಾರ ಹೇಳಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ‘ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪಿನಲ್ಲಿ ತಮಿಳುನಾಡಿಗೆ 419 ಟಿಎಂಸಿ ಅಡಿ, ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಸಿಕ್ಕಿದೆ. ಆದರೆ ಮಳೆ ಕಡಿಮೆಯಾದಾಗ ಏನು ಮಾಡಬೇಕೆಂಬ ಸಂಕಷ್ಟ ಸೂತ್ರ ರಚನೆಯಾಗಿಲ್ಲ. ಮೇಕೆದಾಟು ಯೋಜನೆ ಜಾರಿಯಾದರೆ ಎರಡೂ ರಾಜ್ಯಗಳಿಗೆ ಸಹಕಾರಿಯಾಗಲಿದೆ’ ಎಂದರು.

‘ರೈತರು ಸುಮ್ಮನೇ ಬೀದಿಗೆ ಬರುವುದಿಲ್ಲ, ಬಂದಿದ್ದಾರೆಂದರೆ ಅವರಿಗೆ ಕಷ್ಟವಿದೆ ಎಂದೇ ಅರ್ಥ. ಈ ಭಾಗದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಒಂದೆಡೆ ಬೆಳೆ, ಮತ್ತೊಂದೆಡೆ ಮನುಷ್ಯನೂ ಒಣಗುವಂತಾಗಿದೆ’ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ನಮ್ಮ ಕಷ್ಟ ಆಲಿಸಬೇಕಾಗಿತ್ತು. ಈಗ ಆದೇಶ ಪಾಲನೆ ಮಾಡಿದರೆ ರೈತರ ಬದುಕು ಬೀದಿಗೆ ಬರುತ್ತದೆ. ಸದ್ಯ ಸಂಕಷ್ಟದ ಸ್ಥಿತಿ ಇದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮನ್ವಯತೆಯಿಂದ ನಿರ್ಧಾರ ಕೈಗೊಳ್ಳಬೇಕು. ಈ ಭಾಗದ ರೈತರ ಹಿತ ಕಾಯುವಂತೆ ನಾನೂ ಸಚಿವರ ಜೊತೆ ಮಾತನಾಡುತ್ತೇನೆ’ ಎಂದರು.

ಕಸಾಪ ಅಧ್ಯಕ್ಷರು ಭಾಗಿ: ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಹೋರಾಟದಲ್ಲಿ ಭಾಗಿಯಾಗಿ, ‘ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ ಚೆನ್ನಾಗಿದೆ. ಆದರೆ ಕರ್ನಾಟಕದದಲ್ಲಿ ನೀರಿನ ಕೊರತೆ ಎದುರಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನೀರು ಬಿಡಬೇಕೆನ್ನುವುದು ಸರಿಯಲ್ಲ’ ಎಂದು ಹೇಳಿದರು.

‘ಬರ ಪರಿಸ್ಥಿತಿಯಲ್ಲಿ ಮೈಸೂರು ದಸರಾ, ಹಂಪಿ ಉತ್ಸವಗಳನ್ನು ಸರಳವಾಗಿ ಆಚರಿಸಬೇಕು. ಮಂಡ್ಯದಲ್ಲಿ ನಿಗದಿಯಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಮಳೆಯಾಗಿ ರಾಜ್ಯದಲ್ಲಿ ಉತ್ತಮ ಪರಿಸ್ಥಿತಿ ನೆಲೆಯಾದರೆ ಸಮ್ಮೇಳನಕ್ಕೆ ಮುಂದಿನ ದಿನಾಂಕ ನಿಗದಿಗೊಳಿಸಲಾಗುವುದು’ ಎಂದರು.

ನಟ ಅಭಿಷೇಕ್‌ ಭಾಗಿ: ಜಿಲ್ಲಾ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ನಟ ಅಭಿಷೇಕ್‌ ಅಂಬರೀಷ್‌ ಭಾಗಿಯಾದರು. ‘ನಾನು ಸಣ್ಣ ವಯಸ್ಸಿನಿಂದಲೂ ಕಾವೇರಿ ಹೋರಾಟ ನೋಡಿದ್ದೇನೆ, ನಮ್ಮ ತಂದೆಯೂ ‌ಭಾಗಿಯಾಗಿದ್ದರು. ನಮ್ಮ ತಾಯಿ ಲೋಕಸಭೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಕುರಿತು ಮಾತನಾಡುತ್ತಾರೆ. ನಟ–ನಟಿಯರೂ ಹೋರಾಟಕ್ಕೆ ಬರಲಿದ್ದು ವೇದಿಕೆ ಸಿದ್ಧಗೊಳ್ಳುತ್ತಿದೆ’ ಎಂದು ತಿಳಿಸಿದರು.

ಅಂಚೆ ಕಚೇರಿಗೆ ಮುತ್ತಿಗೆ: ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ರೈತಸಂಘ ಸೇರಿ ವಿವಿಧ ಸಂಘಟನೆಗಳ ಮುಖಂಡರು ಅಂಚೆ ಕಚೇರಿಗೆ ಮತ್ತಿಗೆ ಹಾಕಲು ಯತ್ನಿಸಿದರು.

ಬೆಂಗಳೂರಿಗೆ ನೀರು ಪೂರೈಸುವ ಹಲಗೂರು ಬಳಿಯ ತೊರೆಕಾಡನಹಳ್ಳಿ ಪಂಪ್‌ಹೌಸ್‌ಗೆ ವಿವಿಧ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದರು
ಬೆಂಗಳೂರಿಗೆ ನೀರು ಪೂರೈಸುವ ಹಲಗೂರು ಬಳಿಯ ತೊರೆಕಾಡನಹಳ್ಳಿ ಪಂಪ್‌ಹೌಸ್‌ಗೆ ವಿವಿಧ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದರು
ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಬಂಧಿಸಲಾಯಿತು
ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಬಂಧಿಸಲಾಯಿತು

ಜಲಮಂಡಳಿ ಪಂಪ್‌ಹೌಸ್‌ಗೆ ಮುತ್ತಿಗೆ

ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಬೆಂಗಳೂರು ಜಲಮಂಡಳಿಯು ಮಳವಳ್ಳಿ ತಾಲ್ಲೂಕು ತೊರೆಕಾಡನಹಳ್ಳಿ ಬಳಿ ನಿರ್ಮಿಸಿರುವ ಪಂಪ್‌ಹೌಸ್‌ಗೆ ವಿವಿಧ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ‘ಕಾವೇರಿ ನೀರು ಬಳಸುವ ಬೆಂಗಳೂರಿಗರು ಗಂಭೀರವಾಗಿ ಪ್ರತಿಭಟಿಸಿಲ್ಲ. ಚಿತ್ರರಂಗದ ಗಣ್ಯರೂ ಹೋರಾಡದಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಎದುರು ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಪಂಪ್‌ಹೌಸ್‌ ಗೇಟ್‌ ತೆರೆದು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಎಳೆದು ವಾಹನಕ್ಕೆ ತುಂಬಿಕೊಂಡು ಹಲಗೂರು ಸಮೀಪದ ಕಲ್ಯಾಣಮಂಟಪವೊಂದಕ್ಕೆ ಕರೆದೊಯ್ದರು ನಂತರ ಬಿಡುಗಡೆ ಮಾಡಿದರು.

ಮಂಡ್ಯ ಮದ್ದೂರು ಬಂದ್‌

ಇಂದು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತಹಿತರಕ್ಷಣಾ ಸಮಿತಿ ಸೇರಿ ವಿವಿಧ ಸಂಘಟನೆಗಳು ಶನಿವಾರ ಮಂಡ್ಯ ನಗರ ಮದ್ದೂರು ಪಟ್ಟಣ ಬಂದ್‌ಗೆ ಕರೆ ನೀಡಿವೆ. ಬಸ್‌ ಆಟೊ ಲಾರಿ ಮಾಲೀಕರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಪೆಟ್ರೋಲ್‌ ಬಂಕ್‌ ಚಿತ್ರಮಂದಿರಗಳ ಮಾಲೀಕರು ವರ್ತಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ‘ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಹೋರಾಟ ನಡೆಯಲಿದ್ದು ಮಂಡ್ಯ ಮದ್ದೂರು ಸ್ತಬ್ಧವಾಗಲಿವೆ. ವಿವಿಧೆಡೆ ಮೆರವಣಿಗೆ ಬೈಕ್‌ ರ್‍ಯಾಲಿ ನಡೆಸಲಾಗುವುದು’ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು. ‘ಕೆಆರ್‌ಎಸ್‌ ಜಲಾಶಯ ಸೇರಿದಂತೆ ವಿವಿಧೆಡೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು (ಆರ್‌ಎಎಫ್‌) ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

ಬಿಎಸ್‌ಎನ್‌ಎಲ್‌ ಕಚೇರಿಗೆ ಮುತ್ತಿಗೆ

ಚಾಮರಾಜನಗರ: ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕಾವೇರಿ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಬಿಎಸ್‌ಎನ್‌ಎಲ್‌ ಕಚೇರಿಗೆ ಮುತ್ತಿ‌ಗೆ ಹಾಕಿದರು. ದೊಡ್ಡಂಗಡಿ ಬೀದಿ ಬಳಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಬಿಎಸ್‌ಎನ್‌ಎಲ್‌ ಕಚೇರಿವರೆಗೂ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಿದರು. ಸಚಿವರ ಸಭೆಗೆ ನುಗ್ಗಲು ಯತ್ನ ಮೈಸೂರು: ಕಾವೇರಿ ತೀರ್ಪಿನ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿಯಲ್ಲಿ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ಶುಕ್ರವಾರ ನಡೆಯುತ್ತಿದ್ದ ಸಭೆಗೆ ನುಗ್ಗಲು ಯತ್ನಿಸಿದ ರೈತ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT