ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ಜೆಜೆಎಂ ನೀರು: ಫಲಕದಲ್ಲಷ್ಟೇ ಇದೆ ಮನೆಗಳಿಗಿಲ್ಲ!

ಶ್ರೀರಂಗಪಟ್ಟಣ ತಾಲ್ಲೂಕಿನ ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಫಲಕ ಅಳವಡಿಕೆ
Published 10 ಜುಲೈ 2024, 6:57 IST
Last Updated 10 ಜುಲೈ 2024, 6:57 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಕೇಂದ್ರ ಪುರಸ್ಕೃತ ಜಲ ಜೀವನ ಮಿಷನ್‌ (ಜೆಜೆಎಂ) ಯೋಜನೆಯಡಿ ಮನೆ ಮನೆಗೆ ಶುದ್ಧ ನೀರು ತಲುಪುತ್ತಿದೆ ಎಂದು ಫಲಕಗಳನ್ನು ಹಾಕಲಾಗಿದೆ. ಆದರೆ ಈ ಯೋಜನೆಯಡಿ ಇದುವರೆಗೆ ಒಂದು ಮನೆಗೂ ನೀರು ಕೊಟ್ಟಿಲ್ಲ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಗ್ರಾಮದ ಪ್ರವೇಶ ದ್ವಾರ ಮತ್ತು ಸರ್ಕಾರಿ ಶಾಲೆಯ ಕಾಂಪೌಂಡ್‌ಗಳ ಮೇಲೆ ಜಲ ಜೀವನ ಮಿಷನ್‌ ಯೋಜನೆಯಡಿ, 2021–22ನೇ ಸಾಲಿನಲ್ಲಿ, ₹45 ಲಕ್ಷ ವೆಚ್ಚದಲ್ಲಿ ಜೆಜೆಎಂ ಯೋಜನೆ ಕಾರ್ಯಗತವಾಗಿದೆ ಎಂದು ಫಲಕಗಳು ಹೇಳುತ್ತವೆ.

‘ಈ ಬಡಾವಣೆಯಲ್ಲಿ 112 ಮನೆಗಳಿದ್ದು, ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂದು ಅವುಗಳಲ್ಲಿ ನಮೂದಿಸಲಾಗಿದೆ. ವಿಪರ್ಯಾಸವೆಂದರೆ ಈ ಯೋಜನೆಯಡಿ ಯಾವೊಂದು ಮನೆಗೂ ನಲ್ಲಿಗಳನ್ನು ಅಳವಡಿಸಿಲ್ಲ. ಇನ್ನು ಮನೆ ಮನೆಗೆ ನೀರು ಬರಲು ಹೇಗೆ ಸಾಧ್ಯ. ನೀವೇ ನೋಡಿ’ ಎಂದು ಗ್ರಾಮದ ಮುಖಂಡ ಆಟೋ ಶಿವರಾಮು ಮನೆ ಮನೆಗೆ ಕರೆದೊಯ್ದು ತೋರಿಸಿದರು.

‘ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಗ್ರಾಮ ಪಂಚಾಯಿತಿ ದಾಖಲೆಗಳ ಪ್ರಕಾರ 44 ಮನೆಗಳಿವೆ. ಇತರ 70ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ. ನಾವು ಹಕ್ಕುಪತ್ರ ಕೇಳಿದರೆ ಮನೆ ಮನೆಗೆ ನೀರು ಕೊಟ್ಟಿದ್ದೇವೆ ಎಂದು ಬೋರ್ಡ್‌ ಹಾಕಿದ್ದಾರೆ. ಸರ್ಕಾರದ ಹತ್ತಾರು ಲಕ್ಷ ರೂಪಾಯಿ ಹಣ ಅಪವ್ಯಯವಾಗಿದೆ. ಈ ಬಡಾವಣೆಯಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಕೂಡ ಇಲ್ಲ. ಹೀಗಿರುವಾಗ ಮನೆ ಮನೆಗೆ ನೀರು ಹರಿಯಲು ಹೇಗೆ ಸಾಧ್ಯ’ ಎಂದು ಶಿವರಾಮು ಪ್ರಶ್ನಿಸಿದರು.

‘ನಮ್ಮ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಮನೆ ಮನೆಗೆ ಶುದ್ಧ ನೀರು ಕೊಡುವುದಾಗಿ ಹೇಳಿ ಪೈಪ್‌ಲೈನ್‌ ಮಾಡಿದ್ದಾರೆ. ಅದೂ ಅರ್ಧ ಬೀದಿಗೆ ಮಾತ್ರ ಪೈಪ್‌ಗಳನ್ನು ಹಾಕಿ ನಿಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವ ಮನೆಗೂ ನಲ್ಲಿಗಳನ್ನು ಹಾಕಿಲ್ಲ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಲವು ಬಾರಿ ಕೇಳಿದ್ದು, ಸಬೂಬು ಹೇಳುತ್ತಲೇ ಇದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಬೇಸರ ವ್ಯಕ್ತಪಡಿಸಿದರು.

‘ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನ ಸಂಬಂಧ ಪೈಪ್‌ಲೈನ್‌ ಕಾಮಗಾರಿ ನಡೆದಿದೆ. ಆದರೆ ಅರಣ್ಯ ಇಲಾಖೆಯ ಆಕ್ಷೇಪದಿಂದಾಗಿ ನಲ್ಲಿಗಳನ್ನು ಅಳವಡಿಸಿ ನೀರು ಕೊಡಲು ಆಗಿಲ್ಲ. ಈ ಯೋಜನೆಯ ಗುತ್ತಿಗೆದಾರ ಹಣ ಪಡೆಯುವ ಉದ್ದೇಶದಿಂದ ಮನೆ ಮನೆಗೆ ನೀರು ಕೊಟ್ಟಿದ್ದೇವೆ ಎಂಬ ತಪ್ಪು ಫಲಕಗಳನ್ನು ಹಾಕಿಸಿದ್ದಾನೆ. ಆ ಫಲಕಗಳನ್ನು ತೆಗೆಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT