ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ ಸಮಾಜದ ಕನಸು ಕಟ್ಟಿದ್ದ ಕನಕದಾಸ

ಜಿಲ್ಲಾಡಳಿತದ ವತಿಯಿಂದ ಕನಕ ಜಯಂತಿ; ಕನ್ನಡ ಉಪನ್ಯಾಸಕ ಶಿವರಾಜು ಅಭಿಮತ
Last Updated 3 ಡಿಸೆಂಬರ್ 2020, 14:32 IST
ಅಕ್ಷರ ಗಾತ್ರ

ಮಂಡ್ಯ: ‘ಐದು ನೂರು ವರ್ಷಗಳ ಹಿಂದೆ ಸಾಮಾಜಿಕ ತಾರತಮ್ಯ, ಅಸಮಾನತೆ ಹೋಗಲಾಡಿಸಲು ಹೋರಾಡಿದ ಕನಕದಾಸರು ಮಹಾನ್‌ ಮಾನವತಾವಾದಿಯಾಗಿದ್ದಾರೆ’ ಎಂದು ಕನ್ನಡ ಉಪನ್ಯಾಸಕ ಶಿವರಾಜು ತಿಳಿಸಿದರು.

ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸರ 533 ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಕನಕದಾಸರು ಕೀರ್ತನೆಗಳ ಜೊತೆಗೆ ಕಾವ್ಯಗಳನ್ನು ರಚಿಸಿ ಮಹಾ ಕವಿಯಾಗಿದ್ದಾರೆ. ತಮ್ಮ ಚಿಂತನೆಗಳ ಮೂಲಕ ಸಮ–ಸಮಾಜ ಕಟ್ಟಲು ಮುಂದಾಗುತ್ತಾರೆ. ಕನಕದಾಸರು ನಾಡಿನಾದ್ಯಂತ ಸಂಚರಿಸಿದ ಮಹಾನ್‌ ಚೇತನರಾಗಿದ್ದಾರೆ. ಅವರ ಕೀರ್ತನೆ, ಕಾವ್ಯ, ಆದರ್ಶ ತತ್ವಗಳು ನಮ್ಮ ಕಣ್ಣ ಮುಂದೆ ಇದೆ. ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ... ಈ ಸಾಲು ಸಾರ್ವಕಾಲಿಕ ಸತ್ಯವಾಗಿದೆ’ ಎಂದು ಬಣ್ಣಿಸಿದರು.

‌‘ಯುದ್ಧವೊಂದು ಮನುಷ್ಯನನ್ನು ಎಷ್ಟು ಬಾಧಿಸುತ್ತದೆ ಎಂಬುದಕ್ಕೆ ಕನಕದಾಸರು ಉತ್ತಮ ನಿದರ್ಶನರಾಗಿದ್ದಾರೆ. ಯುದ್ಧದ ಸಂದರ್ಭದಲ್ಲಿನ ಹಲ್ಲೆ, ಅಕ್ರಮಣಗಳಿಂದ ಬೇಸರ ನೋವುಂಟಾಗಿ ಅಧಿಕಾರವನ್ನು ತ್ಯಜಿಸಿದರು. ನಂತರ ಸಂತರಾಗಿ ಊರೂರು ಅಲೆದು ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಮ್ಮ ಕವಿತೆಗಳ ಮೂಲಕ ತಿದ್ದಿ ಸಾಮಾಜಿಕ ರೋಗಕ್ಕೆ ಚಿಕಿತ್ಸಕರಾಗಿದ್ದರು. ಅಂತಹ ಮಹಾನ್‌ ಚೇತನ ಶ್ರೀರಂಗಪಟ್ಟಣ, ಮೇಲುಕೋಟೆ, ಮೈಸೂರಿನಲ್ಲಿ ಸಂಚರಿಸಿದ್ದರು ಎಂಬುದೇ ನಮ್ಮ ಭಾಗದ ಜನರ ಪುಣ್ಯ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ ‘ಇಂದಿಗೂ ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಇದೆ. ಮಹಿಳೆಯರ ಮೇಲೆ, ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕನಕದಾಸರ ಕಾವ್ಯಗಳನ್ನು ಸಮಾಜ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ಇದೆ. ವ್ಯಾಸರಾಯರ ಶಿಷ್ಯರಾದ ಕನಕದಾಸರು ಕನ್ನಡ ಸಾರಸ್ವತ ಲೋಕವನ್ನು ತಮ್ಮ ಚಿಂತನೆಗಳ ಮೂಲಕ ಶ್ರೀಮಂತಗೊಳಿಸಿದ್ದಾರೆ. ಇಂದಿನ ಯುವಪೀಳಿಗೆ ಅವರು ರಚಿಸಿದಂತಹ ಮಹಾಕಾವ್ಯಗಳನ್ನು ಅಧ್ಯಯನ ಮಾಡಿ ಅದರ ವಿಚಾರ ಅರಿಯಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‌ಕುಮಾರ್‌, ಕುರುಬರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪುಟ್ಟಬಸವಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜು, ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಸಂದೇಶ್‌, ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮುಖಂಡರಾದ ದೊಡ್ಡಯ್ಯ, ಸಾತನೂರು ಕೃಷ್ಣ, ಅಮ್ಜದ್‌ ಪಾಷಾ ಇದ್ದರು.

ಬಿಎಸ್‌ಪಿ ಕಚೇರಿ: ನಗರದ ಬಿಎಸ್‌ಪಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಘಟಕದ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರ ನಡೆಯಿತು.

ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷೆ ಲಿಂಗರಾಜಮ್ಮ, ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್‌, ಕಾರ್ಯದರ್ಶಿ ಎಚ್.ವೈ. ಅನಿಲ್‍ಕುಮಾರ್, ಗೋವಿಂದ್‍ರಾಜ್, ಪ್ರದೀಪ್ ಒಡೆಯರ್, ಯೋಗೇಶ್‍ಮೌರ್ಯ, ರೇವಂತ್‍ಮೌರ್ಯ, ವಿಚಾರವಾದಿ ವಜ್ರಮುನಿ ಇದ್ದರು.

*****

ಕನಕಧಾಮಕ್ಕೆ ಭೂಮಿ ಪೂಜೆ
ಕನಕ ಸೇವಾ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಕನಕ ಧಾಮದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆಯನ್ನು ಟ್ರಸ್ಟ್ ಅಧ್ಯಕ್ಷ ಚನ್ನಪ್ಪ ಗುರುವಾರ ನೆರವೇರಿಸಿದರು.

ನಂತರ ಮಾತನಾಡಿದ ಅವರು ‘ಕನಕದಾಸರ 533ನೇ ಜಯಂತ್ಯುತ್ಸವದ ಹಿನ್ನಲೆಯಲ್ಲಿ ಸಾತನೂರು ಗ್ರಾಮದಲ್ಲಿ ಸಮುದಾಯ ಹಾಗೂ ಗ್ರಾಮಸ್ಥರ ಸಹಕಾರದಿಂದ ₹1.40 ಕೋಟಿ ವೆಚ್ಚದಲ್ಲಿ ಕನಕಧಾಮ ನಿರ್ಮಿಸುತ್ತಿದ್ದು, ಕನಕದಾಸರ ಪ್ರತಿಮೆ, ಗ್ರಂಥಾಲಯ, ಸಂಜೆ ಪಾಠ ಶಾಲೆ, ಕೊಳ, ಗಣಪತಿ ದೇವಾಲಯ, ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

ಕುರುಬರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಉಪಾಧ್ಯಕ್ಷ ಬಿ. ಪುಟ್ಟಬಸವಯ್ಯ, ಗೌರವಾಧ್ಯಕ್ಷ ಹುಚ್ಚಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜು, ಕನಕ ಸೇವಾ ಟ್ರಸ್ಟ್ ಉಪಾಧ್ಯಕ್ಷೆ ಪ್ರೇಮಾ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT