ಸೋಮವಾರ, ಸೆಪ್ಟೆಂಬರ್ 27, 2021
22 °C
ಕಿಕ್ಕೇರಿ ಹೋಬಳಿಯ ಗ್ರಾಮದಲ್ಲಿ ಕೊಳವೆಬಾವಿ ನೀರೇ ಗತಿ; ಕೆಲವೆಡೆ ಟ್ಯಾಂಕರ್‌ ಮೂಲಕ ಸರಬರಾಜು

ಒಣಗಿದ ಕೆರೆಗಳು: ಕೃಷಿ ಬಿಟ್ಟು ಗುಳೆ ಹೊರಟ ರೈತರು

ಕಿಕ್ಕೇರಿ ಗೋವಿಂದರಾಜು Updated:

ಅಕ್ಷರ ಗಾತ್ರ : | |

Prajavani

ಕಿಕ್ಕೇರಿ: ಹೋಬಳಿಯ ಬಹುತೇಕ ಕೆರೆ ಕಟ್ಟೆಗಳು ಒಣಗಿ ಹೋಗಿದ್ದು, ಅಂತರ್ಜಲ ತೀವ್ರವಾಗಿ ಕುಸಿತವಾಗಿದೆ. ರೈತರು ಬೆಳೆದ ಬೆಳೆ ಒಣಗುತ್ತಿದ್ದು, ಜೀವನಾಧಾರಕ್ಕಾಗಿ ನಗರ ಪ್ರದೇಶಕ್ಕೆ ರೈತರು ಗುಳೆ ಹೊರಟಿದ್ದಾರೆ.

ತಾಲ್ಲೂಕಿನ ದೊಡ್ಡ ಕೆರೆಯಾಗಿರುವ ಅಮಾನಿಕೆರೆ ನೀರು ಬೇಸಿಗೆ ಆರಂಭದಲ್ಲಿಯೇ ಬರಿದಾಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಅಮಾನಿಕೆರೆ 365 ಎಕರೆಯಷ್ಟು ವಿಸ್ತಾರವಾಗಿದೆ. ಇದರಲ್ಲಿ ಈಚೆಗೆ ಹೂಳು ಹೆಚ್ಚಾಗಿ ತುಂಬಿಕೊಂಡು ಬೇಗನೆ ನೀರು ಖಾಲಿಯಾಗಿ ಭಣಗುಡುತ್ತಿದೆ. ಕೆರೆ ವ್ಯಾಪ್ತಿಯಲ್ಲಿ ನೀರನ್ನು ನಂಬಿಕೊಂಡು 850 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ರೈತರು ಕಂಗಾಲಾಗಿದ್ದಾರೆ. ಅಂತರ್ಜಲ ಕೊಳವೆಬಾವಿಗಳು ಕೂಡ ಬರಿದಾಗುವ ಆತಂಕ ಜನರಲ್ಲಿ ಮೂಡಿದೆ.

ಅಮಾನಿಕೆರೆ ಬತ್ತಿದ ಕಾರಣದಿಂದ ಸುತ್ತಲಿನ ಕಳ್ಳನಕೆರೆ, ಸೊಳ್ಳೇಪುರ, ಲಕ್ಷ್ಮೀಪುರ, ಮಂಗನಹೊಸಹಳ್ಳಿ, ಕೋಡಿಮಾರನಹಳ್ಳಿ, ಮಾದಿಹಳ್ಳಿ, ಡಿಂಕ, ಐನೋರಹಳ್ಳಿ, ವಡಕಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಕೇವಲ 150 ಅಡಿಗೆ ಸಿಗುತ್ತಿದ್ದ ನೀರು 450 ಆಳಕ್ಕೆ ಕುಸಿತವಾಗಿದೆ. ಕೊಳವೆಬಾವಿ ಮೂಲಕ ಬೆಳೆಯಲಾಗಿದ್ದ ಬೆಳೆಗಳು ಒಣಗಿ ಹೋಗುತ್ತಿವೆ. ಕಬ್ಬು, ಭತ್ತ ಮತ್ತಿತರ ಬೆಳೆ ಬೆಳೆಯುತ್ತಿದ್ದು, ಸಂಪೂರ್ಣ ನಾಶವಾಗುವ ಸೂಚನೆ ಕಂಡುಬರುತ್ತಿದೆ. ಜೋಳ, ರಾಗಿ, ಅವರೆ, ಟೊಮೆಟೊ, ಕುಂಬಳ, ಬದನೆ, ಸೊಪ್ಪು ಹಾಗೂ ಬಾಳೆ, ಪಪ್ಪಾಯಿ ತೋಟಗಾರಿಕೆ ಬೆಳೆಗಳು ನೀರಿಲ್ಲದೆ ಒಣಗಿವೆ. ಹುಲುಸಾಗಿ ಎಳನೀರು ಕೊಡುತ್ತಿದ್ದ ತೆಂಗಿನಮರದ ಸುಳಿ ಸಣ್ಣದಾಗಿ ಒಣಗಲು ಆರಂಭವಾಗಿದೆ.

ಕೆರೆ ಸುತ್ತಲೂ 285 ಕೊಳವೆಬಾವಿಗಳಿದ್ದು, ಅದರಲ್ಲಿ 100 ಕೊಳವೆಬಾವಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ತರಕಾರಿ ಬೆಳೆಗೆ ಹೆಸರು ಪಡೆದಿದ್ದ ಗೋವಿಂದನಹಳ್ಳಿ, ತೆಂಗಿನಘಟ್ಟ, ಕೆಂಪಿಕೊಪ್ಪಲು ತರಕಾರಿ ಬೆಳೆಯದಂತಾಗಿವೆ. ಸಾಲ ಮಾಡಿದ ರೈತ ಜೀವನಾಧಾರಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ತಿನ್ನಲು ಮೇವಿಲ್ಲದೆ ಸೊರಗುತ್ತಿವೆ. ರಾಸುಗಳಲ್ಲಿನ ಹಾಲಿನ ಇಳುವರಿ ಕಡಿಮೆಯಾಗಿ ಹೈನುಗಾರಿಕೆಗೆ ಹೊಡೆತ ಬಿದ್ದಿದೆ. ಕೆಲವರು ರಾಸುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಸಾಸಲು ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ತೀವ್ರವಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ಬಹುತೇಕ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಅಮಾನಿಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಪಘಾತದ ಮುನ್ಸೂಚನೆಯಿಂದ ಕೆರೆ ಕೋಡಿ ಹೊಡೆದು ಹಾಕಲಾಗಿತ್ತು. ಅದನ್ನು ಕೂಡಲೇ ದುರಸ್ತಿ ಮಾಡಲಾಗುವುದು. ಹೇಮಾವತಿ ನದಿಯಿಂದ ನೀರು ಹರಿಸಿದರೆ ರೈತರಿಗೆ ಬೇಸಾಯಕ್ಕೆ ನೀರು ಒದಗಿಸಲು ಕ್ರಮವಹಿಸಲಾಗುವುದು ಎಂದು ಕಾವೇರಿ ನೀರಾವರಿ
ನಿಗಮದ ಎಂಜಿನಿಯರ್ ಅಶೋಕ್ ತಿಳಿಸಿದರು.

ಹೋಬಳಿಯಲ್ಲಿ 8 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಮೇವಿನ ಬ್ಯಾಂಕ್, ಹೆಚ್ಚುವರಿ ಕೊಳವೆಬಾವಿ ಕೊರೆಸುವುದು, ಶಾಶ್ವತ ಕುಡಿಯುವ ನೀರಿಗಾಗಿ ಹೇಮಾವತಿ ನದಿಯಿಂದ ನೀರು ಸರಬರಾಜು ಮಾಡಲಾಗುವುದು. ಬರಗಾಲ ಎದುರಿಸಲು ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.