ಭಾನುವಾರ, ಜನವರಿ 19, 2020
26 °C
ಕೆ.ಆರ್.ಪೇಟೆ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮತಯಂತ್ರಗಳಿಗೆ ಬಿಗಿ ಪೊಲೀಸ್‌ ಬಂದೋಬಸ್ತ್‌

ಅಭ್ಯರ್ಥಿಗಳ ‘ಭವಿಷ್ಯ’ ಮತಯಂತ್ರದಲ್ಲಿ ಭದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಧಾನಸಭಾ ಉಪಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಇಡಲಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಗುರುವಾರ ರಾತ್ರಿ ಪಾಲಿಟೆಕ್ನಿಕ್ ಕಾಲೇಜಿಗೆ ತಂದ 258 ಇವಿಎಂ ಗಳನ್ನು ಸುರಕ್ಷಿತವಾಗಿ ಇಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ತಹಶೀಲ್ದಾರ್ ಶಿವಮೂರ್ತಿ ನೇತೃತ್ವದಲ್ಲಿ ಮತಯಂತ್ರಗಳನ್ನು ಹಾಗೂ ಸಂಬಂಧಿತ ದಾಖಲೆಗಳನ್ನು ಸ್ಟ್ರಾಂಗ್‌ರೂಮ್‌ನಲ್ಲಿ ಇಡಲಾಯಿತು. ಬಾಗಿಲಿಗೆ ಮೊಹರು ಹಾಕಿ ಭದ್ರಗೊಳಿಸಲಾಯಿತು. ಮತಯಂತ್ರಗಳನ್ನಿಟ್ಟಿರುವ ಪಾಲಿಟೆಕ್ನಿಕ್ ಕಾಲೇಜಿನ ಸುತ್ತ ಬಾರಿ ಸಂಖ್ಯೆಯ ಪೊಲೀಸರನ್ನ ನಿಯೋಜಿಸಲಾಗಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸೋಮವಾರ (ಡಿ.9) ಬೆಳಿಗ್ಗೆ 8ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನ 11 ಗಂಟೆ ವೇಳೆಗೆ ಕ್ಷೇತ್ರದ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ತೀವ್ರ ಕುತೂಹಲ ಕೆರಳಿಸಿರುವ ಕೆ.ಆರ್.ಪೇಟೆ ಉಪ ಚುನಾವಣೆಯ ಫಲಿತಾಂಶಕ್ಕಾಗಿ ತಾಲ್ಲೂಕಿನ ಜನ ಕಾದು ಕುಳಿತಿದ್ದಾರೆ. 1996ರಲ್ಲಿ ನಡೆದ ಉಪಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಕೆ.ಆರ್.ಪೇಟೆಯಲ್ಲಿ ಉಪಚುನಾವಣೆ ನಡೆದಿದೆ. ಆಗ ಜನತಾದಳ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ಸ್ಪರ್ಧೆ ಏರ್ಪಟ್ಟು, ಜನತಾದಳದ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿ.ಪ್ರಕಾಶ್ ಜಯಗಳಿಸಿದ್ದರು. ಮಾಜಿ ಸ್ಪೀಕರ್ ಕೃಷ್ಣ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸೋಲು–ಗೆಲುವು ಲೆಕ್ಕಾಚಾರ: ಪಕ್ಷಗಳ ಅಭಿಮಾನಿಗಳು ತಮ್ಮ ನಾಯಕರೇ ಗೆಲ್ಲುತ್ತಾರೆ ಎಂದು ಪರಸ್ಪರ ಬಾಜಿ, ಪಂಥ ಕಟ್ಟುತ್ತಿದ್ದಾರೆ ಎನ್ನಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 2 ಲಕ್ಷ ಮತದಾರರಿದ್ದು, 1.66.612 ಮಂದಿ ಮತ ಚಲಾಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು