ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಆರ್‌ಟಿಇ ಸೀಟು; ಆಸಕ್ತಿಯೇ ಇಲ್ಲ!

ಈಡೇರದ ಕಾಯ್ದೆಯ ಮೂಲ ಉದ್ದೇಶ, ಅರ್ಜಿ ಸಲ್ಲಿಸಲು ಪೋಷಕರ ಹಿಂದೇಟು
Last Updated 16 ಮೇ 2022, 3:53 IST
ಅಕ್ಷರ ಗಾತ್ರ

ಮಂಡ್ಯ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ತಿದ್ದುಪಡಿ ನಂತರಇಷ್ಟಪಟ್ಟ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಸೀಟು ದೊರೆಯುತ್ತಿಲ್ಲ. ಇದರಿಂದಾಗಿ ಪೋಷಕರು, ಮಕ್ಕಳು ಆರ್‌ಟಿಇ ಸೀಟುಗಳ ಮೇಲೆ ಆಸಕ್ತಿ ಕಳೆದುಕೊಂಡಿದ್ದು, ಕಾಯ್ದೆಯ ಮೂಲ ಉದ್ದೇಶ ಈಡೇರದಂತಾಗಿದೆ.

ಬಡ ಮಕ್ಕಳಿಗಾಗಿ ಸಮಾನ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಆರ್‌ಟಿಇ ಕಾಯ್ದೆ ರೂಪಿಸಿದೆ. ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಬಡಮಕ್ಕಳಿಗೆ ಮೀಸಲಿಡಬೇಕು ಎಂಬ ನಿಯಮ ರೂಪಿಸಲಾಗಿದೆ. 2018ರ ವರೆಗೂ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಯಾವುದೇ ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗುವ ಅವಕಾಶವಿತ್ತು. ಆದರೆ, 2019–20ನೇ ಸಾಲಿನಿಂದ ಕಾಯ್ದೆಗೆ ತಿದ್ದುಪಡಿ ತಂದ ನಂತರ ಆರ್‌ಟಿಇ ಅಡಿ ದಾಖಲಾತಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಹೊಸ ತಿದ್ದುಪಡಿ ಪ್ರಕಾರ ಗ್ರಾಮ, ವಾರ್ಡ್‌ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳು ಇದ್ದರೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಈ ನಿಯಮದಿಂದಾಗಿ ಈ ಬಾರಿಯ ದಾಖಲಾತಿ ಸಂಖ್ಯೆ ಜಿಲ್ಲೆಯಲ್ಲಿ 20ಕ್ಕೆ ಕುಸಿದಿದೆ. ಜಿಲ್ಲೆಯಾದ್ಯಂತ ಶೇ 25ರಷ್ಟು ಮೀಸಲಾತಿ ಅಡಿ ಈ ವರ್ಷ 366 ಸೀಟುಗಳನ್ನು ಗುರುತಿಸಲಾಗಿತ್ತು.

ಲಭ್ಯವಿದ್ದ ಒಟ್ಟು ಸೀಟುಗಳಲ್ಲಿ ಸಲ್ಲಿಕೆ ಯಾದ ಅರ್ಜಿಗಳ ಆಧಾರದ ಮೇಲೆ ಮೊದಲ ಸುತ್ತಿನಲ್ಲಿ 78, 2ನೇ ಸುತ್ತಿನಲ್ಲಿ 39 ಸೀಟುಗಳನ್ನು ವಿವಿಧ ಶಾಲೆಗಳಲ್ಲಿ ಮಂಜೂರಾತಿ ನೀಡಲಾಯಿತು. ಅವುಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 20 ಮಾತ್ರ. ಎಲ್ಲಾ ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲಿ ದಾಖಲಾಗಿದ್ದಾರೆ. 2 ಮತ್ತು 3ನೇ ಸುತ್ತಿನಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ.

ಕುಗ್ಗಿದ ಸೀಟುಗಳು: ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು 450 ಸೀಟುಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ ಮಂಜೂರಾದ ಸೀಟುಗಳ ಸಂಖ್ಯೆ 169 ಇತ್ತು. ಆದರೆ, ಅವುಗಳ ಸಂಖ್ಯೆ ಈ ವರ್ಷ ಕುಸಿತ ಕಂಡಿದೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಪ್ರಚಾರದ ಕೊರತೆ, ಆರ್‌ಟಿಇ ಸೀಟುಗಳ ಮೇಲೆ ಪೋಷಕರ ನಿರಾಸಕ್ತಿಯೇ ಕಾರಣ ಎಂದು ಹೇಳಲಾಗುತ್ತದೆ.

ಜಿಲ್ಲೆಯ ಒಟ್ಟು 8 ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಮಳವಳ್ಳಿ ಬ್ಲಾಕ್‌ನಿಂದ 6 ಮಂದಿ ದಾಖಲಾಗಿದ್ದು ಜಿಲ್ಲೆಯಲ್ಲಿ ಅದೇ ಹೆಚ್ಚು. ನಂತರ ಮಂಡ್ಯ ದಕ್ಷಿಣ 6, ಶ್ರೀರಂಗಪಟ್ಟಣದಲ್ಲಿ 5, ಮಂಡ್ಯ ಉತ್ತರದಲ್ಲಿ 4 ಮಕ್ಕಳು ದಾಖಲಾಗಿದ್ದಾರೆ.

ಮಕ್ಕಳ ಮನೆ, ಪಬ್ಲಿಕ್‌ ಸ್ಕೂಲ್‌: ಸದ್ಯ ಸರ್ಕಾರಿ ಶಾಲೆಗಳ ಗುಣಮಟ್ಟ ಉತ್ತಮಗೊಳ್ಳುತ್ತಿದ್ದು, ಕಾನ್ವೆಂಟ್‌ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾದ ಉದಾಹರಣೆಗಳಿವೆ. ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ದಾನಿಗಳ ನೆರವಿನಿಂದ ‘ಮಕ್ಕಳ ಮನೆ’ ತೆರೆದಿದ್ದಾರೆ.

ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಸಾವಿರಾರು ರೂಪಾಯಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಾರೆ ಎಂಬ ಅಭಿಪ್ರಾಯವೂ ಇದೆ.

ಜೊತೆಗೆ ಸರ್ಕಾರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ತೆರೆದ ನಂತರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟವೂ ದೊರೆಯುತ್ತಿರುವ ಕಾರಣ ಖಾಸಗಿ ಶಾಲೆಗಳಿಗೆ ಕಳುಹಿಸುವ ಅವಶ್ಯಕತೆ ಇಲ್ಲ. ಜೊತೆಗೆ ಪಂಚಾಯಿತಿ ಪಬ್ಲಿಕ್‌ ಶಾಲೆಗಳೂ ಬರುತ್ತಿದ್ದು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಅಭಿವೃದ್ಧಿಗೊಳ್ಳಲಿವೆ. ಇದರಿಂದಾಗಿ ಖಾಸಗಿ ಶಾಲೆಗಳ ಆರ್‌ಟಿಇ ಸೀಟುಗಳು ಮಹತ್ವ ಕಳೆದುಕೊಂಡಿವೆ ಎಂದು ಪೋಷಕರು ತಿಳಿಸುತ್ತಾರೆ.

‘ಸಮಾನ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಆರ್‌ಟಿಇ ಜಾರಿಗೊಳಿಸಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾದ ಮಕ್ಕಳನ್ನು ತಾರತಮ್ಯ ಮಾಡುತ್ತಿದ್ದರು. ಹಲವು ಶಾಲೆಗಳಲ್ಲಿ ಪ್ರತ್ಯೇಕವಾಗಿ ಕೂರಿಸುತ್ತಿದ್ದರು. ಇದರಿಂದಾಗಿ ಬೇಸರಗೊಂಡ ಪೋಷಕರು ಆರ್‌ಇಟಿ ಅಡಿ ದಾಖಲಿಸಲು ಹಿಂದೇಟು ಹಾಕಿದರು’ ಎಂದು ಪೋಷಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT