ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಎಚ್‌ಡಿಡಿ-ಎಚ್‌ಡಿಕೆ-ನಿಖಿಲ್‌; ಮೂವರಲ್ಲೊಬ್ಬರು ಅಭ್ಯರ್ಥಿ?

ಬಿಜೆಪಿ–ಜೆಡಿಎಸ್‌ ಮೈತ್ರಿ; ಫ್ಲೆಕ್ಸ್‌ ಸಂದೇಶ
Published 6 ಜನವರಿ 2024, 0:30 IST
Last Updated 6 ಜನವರಿ 2024, 0:30 IST
ಅಕ್ಷರ ಗಾತ್ರ

ಮಂಡ್ಯ: ಬಿಜೆಪಿ–ಜೆಡಿಎಸ್‌ ಜತೆಯಾಗಿ ಚುನಾವಣೆ ಎದುರಿಸಲಿವೆ ಎಂಬ ಸಂದೇಶವನ್ನು ಮತದಾರರಿಗೆ ಮುಟ್ಟಿಸಲು ಜೆಡಿಎಸ್‌ ಮುಖಂಡರು ಜಿಲ್ಲೆಯ ವಿವಿಧೆಡೆ ಬೃಹತ್‌ ಫ್ಲೆಕ್ಸ್‌ಗಳನ್ನು ಅಳವಡಿಸುತ್ತಿದ್ದಾರೆ. ‘ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರ ಕುಟಂಬದ ಯಾರಾದರೂ ಸ್ಪರ್ಧಿಸುತ್ತಾರೆಯೇ’ ಎಂಬ ಪ್ರಶ್ನೆಯನ್ನೂ ಇದು ಮೂಡಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್‌ ಮುಖಂಡರು ಮೈತ್ರಿ ನಿಯಮ ಉಲ್ಲಂಘಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದ್ದರು. ಪ್ರತಿ ಚುನಾವಣೆಯಲ್ಲಿ ಜಿದ್ದಾಜಿದ್ದಿಗೆ ಬೀಳುತ್ತಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಳೆದ ಬಾರಿ ಹೊಂದಾಣಿಕೆ ಮಾಡಿಕೊಂಡಿದ್ದು ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರಿರಲಿಲ್ಲ.

‘ಹಿಂದಿನ ತಪ್ಪು ಮರುಕಳಿಸಬಾರದು’ ಎಂದು ‌ಜೆಡಿಎಸ್‌ ಮುಖಂಡರು ಮೈತ್ರಿ ಕುರಿತ ಫ್ಲೆಕ್ಸ್‌ಗಳನ್ನು ಪ್ರಮುಖ ರಸ್ತೆ, ವೃತ್ತಗಳಲ್ಲಿ ಅಳವಡಿಸುತ್ತಿದ್ದಾರೆ. ಕಳೆದ ತಿಂಗಳು ಪ್ರಧಾನಿ ಮೋದಿ ಅವರನ್ನು ದೇವೇಗೌಡರು ಹಾಗೂ ಅವರ ಪುತ್ರರು ಭೇಟಿ ಮಾಡಿದ ಚಿತ್ರಗಳನ್ನೇ ಬಳಸಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಇರುವ ಚಿತ್ರ ಬಳಸಿಕೊಳ್ಳಲಾಗಿದೆ. ಫ್ಲೆಕ್ಸ್‌ನಲ್ಲಿ ನಿಖಿಲ್‌ ಕುಮಾರಸ್ವಾಮಿಯೂ ಇದ್ದಾರೆ. ‘ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪರಿಹಾರ; ಜನತಾದಳ ಮತ್ತು ಬಿಜೆಪಿಯ ಮೈತ್ರಿಗೆ ಅಧಿಕಾರ’ ಎಂಬ ಬರಹ ರಾರಾಜಿಸುತ್ತಿದೆ.

ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ಗಳು ಗಮನ ಸೆಳೆಯುತ್ತಿವೆ. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಇಂಡುವಾಳು ಬಳಿ ಜೆಡಿಎಸ್‌ ಮುಖಂಡ ಬಿ.ಆರ್‌.ರಾಮಚಂದ್ರ ಅಳವಡಿಸಿರುವ ಬೃಹತ್‌ ಫ್ಲೆಕ್ಸ್‌ ಗಮನ ಸೆಳೆಯುತ್ತಿದೆ. ಶ್ರೀರಂಗಪಟ್ಟಣದಲ್ಲೂ ಹೆದ್ದಾರಿ ಬದಿಯಲ್ಲಿ ಮುಖಂಡ ರವೀಂದ್ರ ಶ್ರೀಕಂಠಯ್ಯ ಫ್ಲೆಕ್ಸ್‌ ಅಳವಡಿಸಿದ್ದಾರೆ.

‘ಮೈತ್ರಿಯ ವಿಷಯ ಎಲ್ಲರಿಗೂ ಗೊತ್ತಿದೆ. ಆದರೂ ಅದನ್ನು ಮತ್ತಷ್ಟು ಗಟ್ಟಿಯಾಗಿ ಹೇಳಲು ಸ್ಥಳೀಯ ನಾಯಕರು ಫ್ಲೆಕ್ಸ್‌ ಅಳವಡಿಸಿದ್ದಾರೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳುತ್ತಾರೆ.

ಎಚ್‌.ಡಿ.ರೇವಣ್ಣ ಚಿತ್ರವಿಲ್ಲದ ಫ್ಲೆಕ್ಸ್‌

ಎಚ್‌.ಡಿ.ದೇವೇಗೌಡ ಕುಮಾರಸ್ವಾಮಿ ಅವರೊಂದಿಗೆ ಎಚ್‌.ಡಿ.ರೇವಣ್ಣ ಕೂಡ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆದರೆ ಫೆಕ್ಸ್‌ನಲ್ಲಿ ರೇವಣ್ಣ ಚಿತ್ರವನ್ನು ಕೈಬಿಡಲಾಗಿದೆ. ‘ಮುಂಬರುವ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡ ಕುಮಾರಸ್ವಾಮಿ ನಿಖಿಲ್‌ –ಈ ಮೂವರಲ್ಲಿ ಒಬ್ಬರು ಸ್ಪರ್ಧಿಸುತ್ತಾರೆ. ರೇವಣ್ಣ ಹಾಸನಕ್ಕೆ ಸೀಮಿತ ಎಂಬ ಸಂದೇಶವನ್ನು ಫ್ಲೆಕ್ಸ್‌ ಮೂಲಕ ನೀಡುತ್ತಿದ್ದಾರೆ’ ಎಂಬ ಮಾತು ಸ್ಥಳೀಯರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT