ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಕೆರೆಗೆ ಲೋಕಪಾವನಿ ನದಿ ನೀರು

ನೀರು ತುಂಬಿಸುವ ಪ್ರಾಯೋಗಿಕ ಕಾರ್ಯಕ್ಕೆ ರವೀಂದ್ರ ಶ್ರೀಕಂಠಯ್ಯ ಚಾಲನೆ
Last Updated 2 ಮಾರ್ಚ್ 2020, 12:33 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಜಕ್ಕನಹಳ್ಳಿ ಸೇರಿದಂತೆ ಕ್ಷೇತ್ರದ 6 ಗ್ರಾಮಗಳ ಕೆರೆಗಳಿಗೆ ಲೋಕ ಪಾವನಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಜಕ್ಕನಹಳ್ಳಿ ಕೆರೆಗೆ ನೀರು ತುಂಬಿಸುವ ಪ್ರಾಯೋಗಿಕ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇದು ₹18.5 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯಾಗಿದ್ದು, 2012–13ನೇ ಸಾಲಿನಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಕೆಲವು ಕಾರಣ ಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ನೀರು ಬರುವ ಮಾರ್ಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಡೆತಡೆ ನಿವಾರಿಸಲಾಗಿದೆ. ಈ ಯೋಜನೆಯ ಮೂಲಕ ತೂಬಿನಕೆರೆ, ಜಕ್ಕನಹಳ್ಳಿ, ಉರಮಾರ ಕಸಲಗೆರೆ, ಆಲಗೂಡು, ಎಲೆಚಾಕನಹಳ್ಳಿ, ಕಾಳೇನಹಳ್ಳಿ ಕೆರೆಗಳಿಗೆ ಲೋಕಪಾವನಿ ನದಿಯ ನೀರು ಹರಿದು ಬರಲಿದೆ. ಕೆರೆಗಳು ಭರ್ತಿಯಾದರೆ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಬೇಸಿಗೆಯಲ್ಲಿ ಜನರು ಎದುರಿಸುತ್ತಿದ್ದ ನೀರಿನ ಬವಣೆ ನಿವಾರಣೆ ಯಾಗಲಿದೆ ಎಂದು ಅವರು ತಿಳಿಸಿದರು.

‘ಕಾವೇರಿ ನದಿ ಒಡ್ಡಿನ ನಾಲೆಗಳಾದ ವಿರಿಜಾ, ಸಿಡಿಎಸ್‌ ಮತ್ತು ಬಂಗಾರದೊಡ್ಡಿ ನಾಲೆಗಳಿಗೆ 15 ದಿನಗಳ ನಂತರ ನೀರು ಬಿಡಿಸಲು ಪ್ರಯತ್ನಿಸುತ್ತೇನೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕೆ ನೀರು ಅಗತ್ಯವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರ ಜತೆ ಚರ್ಚಿಸಿ ನೀರು ಬಿಡಿಸಲು ಒಪ್ಪಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜತೆಗಿದ್ದರು.

‘ನ್ಯಾಯ ಸಿಗದಿರುವುದು ದುರದೃಷ್ಟಕರ’

350 ವರ್ಷಗಳ ಹಿಂದೆ ತೋಡಿರುವ ಕಾವೇರಿ ಒಡ್ಡಿನ ನಾಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ಬೆಳೆಗೆ ನೀರು ಕೊಡದ ಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಪರಿಣಾಮ ರೈತರು ತೊಂದರೆಗೆ ಸಿಲುಕಿದ್ದಾರೆ. ಸಹಸ್ರಾರು ಎಕರೆ ಕೃಷಿ ಭೂಮಿ ಪಾಳು ಬಿದ್ದಿದೆ. ನ್ಯಾಯಾಧಿಕರಣದ ತೀರ್ಪು ರಾಜ್ಯದ ವಿರುದ್ಧ ಬರಲು ರಾಜ್ಯದ ವಕೀಲರ ತಂಡದ ನಿಷ್ಕ್ರಿಯತೆ ಕಾರಣ ಎಂಬುದು ಸರಿಯಲ್ಲ. ಅವರು ಸಮರ್ಥವಾಗಿ ವಾದ ಮಂಡಿಸಿದ್ದರೂ ನ್ಯಾಯ ಸಿಗದಿರುವುದು ದುರದೃಷ್ಟಕರ. ಮುಂದಿನ ದಿನಗಳಲ್ಲಿ ಈ ಅನ್ಯಾಯ ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT