ಶನಿವಾರ, ಮಾರ್ಚ್ 25, 2023
25 °C
ಜಿ.ಮಾದೇಗೌಡರ ನಿಧನಕ್ಕೆ ಕಂಬನಿ ಮಿಡಿದ ಸಕ್ಕರೆ ಜಿಲ್ಲೆ,

ಜಿ.ಮಾದೇಗೌಡರ ಅಂತಿಮ ದರ್ಶನ ಪಡೆದ ಗಣ್ಯರು: ಗಾಂಧಿಭವನದ ಆವರಣದಲ್ಲಿ ನೀರವ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮಾಜಿ ಸಂಸದ, ಮುತ್ಸದ್ಧಿ ನಾಯಕ ಜಿ.ಮಾದೇಗೌಡರ ನಿಧನಕ್ಕೆ ಸಕ್ಕರೆ ನಾಡು ಕಂಬನಿ ಮಿಡಿಯಿತು. ಜಿಲ್ಲೆಯ ವಿವಿಧೆಡೆಯಿಂದ ಬಂದ ಸಾವಿರಾರು ಜನರು ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ನಸುಕಿನ 5.30ರ ವೇಳೆಗೆ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಯಿತು. ಅವರ ಸಂಬಂಧಿಕರು, ಒಡನಾಡಿಗಳು ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ಸಂಸದೆ ಸುಮಲತಾ ಕೂಡ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು. ನಂತರ ಮಾದೇಗೌಡರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬೆಳಿಗ್ಗೆ 10.30ಕ್ಕೆ ಪಾರ್ಥಿವ ಶರೀರವನ್ನು ಗಾಂಧಿಭವನದ ಆವರಣಕ್ಕೆ ಕೊಂಡೊಯ್ಯಲಾಯಿತು. ಅಪಾರ ಸಂಖ್ಯೆಯ ಸಾರ್ವಜನಿಕರು ಅಲ್ಲಿಗೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಗಾಂಧಿ ಭವನದ ಪ್ರವೇಶದ್ವಾರದಲ್ಲಿ ಮಾದೇಗೌಡರೊಂದಿಗೆ ಪತ್ರಿಕೆ ಓದುತ್ತಾ ಕುಳಿತಿರುತ್ತಿದ್ದ ಅವರ ಒಡನಾಡಿಗಳು ಅವರ ಮೃತದೇಹ ಕಂಡು ಕಣ್ಣು ತುಂಬಿಕೊಂಡರು.

ಗಾಂಧಿಭವನದ ಆವರಣದಲ್ಲಿ ನೀರವ ಮೌನ ಆವರಿಸಿತ್ತು. ಭವನದೊಳಗೆ ಮೃತದೇಹ ತಂದಾಗ ವಿವಿಧ ಸಂಘಟನೆಗಳ ಮುಖಂಡರು ಮೌನದಿಂದ ಶ್ರದ್ಧಾಂಜಲಿ ಸಲ್ಲಿಸಿದರು. ಶಾಸಕ ಎಂ.ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ ಮುಂತಾದವರು ದರ್ಶನ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ನಮ್ಮ ಜಿಲ್ಲೆಯಲ್ಲಿ ಜಿ.ಮಾದೇಗೌಡರು ಮಾದರಿ ರಾಜಕಾರಣಿಯಾಗಿದ್ದರು. ಅವರು ನಿಧನದಿಂದ ಇಡೀ ರಾಜ್ಯದ ರಾಜಕಾರಣಕ್ಕೆ ನಷ್ಟ ಉಂಟಾಗಿದೆ’ ಎಂದರು.

ಹೋರಾಟಗಾರರ ಭೇಟಿ: ರಾಜಕಾರಣಿಯಾಗಿಯೂ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಮಾದೇಗೌಡರ ಅಂತಿಮ ದರ್ಶನ ಪಡೆಯಲು ರಾಜ್ಯದ ವಿವಿಧೆಡೆಯಿಂದ ರೈತ ಹೋರಾಟಗಾರರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ ‘ಜಿ.ಮಾದೇಗೌಡರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. 6 ಬಾರಿ ಶಾಸಕರಾಗಿ ಜಿಲ್ಲೆಯಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಅದಲ್ಲದೇ ಇಳಿ ವಯಸ್ಸಿನಲ್ಲೂ ಕಾವೇರಿ ವಿವಾದ ಬಗೆಹರಿಸಬೇಕು ಎಂಬ ಇಚ್ಛಾಶಕ್ತಿ ಇಟ್ಟುಕೊಂಡಿದ್ದರು. ಸರ್ಕಾರದ ತಪ್ಪುಒಪ್ಪುಗಳನ್ನು ತಿದ್ದುತ್ತಿದ್ದರು. ಅಂತಹ ನಾಯಕ ಅಗಲಿರುವುದು ಹೋರಾಟ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು