ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಸೆ.14,15ರಂದು 'ಗಗನಚುಕ್ಕಿ ಜಲಪಾತೋತ್ಸವ'

ಪ್ರಾಣಿ ಸಂಗ್ರಹಾಲಯ, ಅಕ್ವಾ ಪಾರ್ಕ್‌ ನಿರ್ಮಾಣಕ್ಕೆ ಪ್ರಸ್ತಾವ: ಶಾಸಕ ನರೇಂದ್ರಸ್ವಾಮಿ
Published 5 ಸೆಪ್ಟೆಂಬರ್ 2024, 13:22 IST
Last Updated 5 ಸೆಪ್ಟೆಂಬರ್ 2024, 13:22 IST
ಅಕ್ಷರ ಗಾತ್ರ

ಮಳವಳ್ಳಿ (ಮಂಡ್ಯ ಜಿಲ್ಲೆ): ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ‘ಗಗನಚುಕ್ಕಿ ಜಲಪಾತೋತ್ಸವ’ವನ್ನು ಸೆ.14 ಮತ್ತು 15ರಂದು ಆಯೋಜಿಸಲಾಗುವುದು ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಗಗನಚುಕ್ಕಿ ತಾಣದಲ್ಲಿ ಗುರುವಾರ ಜಲಪಾತೋತ್ಸವದ ಲಾಂಛನ ಬಿಡುಗಡೆ ಮಾಡಿ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಸೆ.14ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಪಾತೋತ್ಸವದ ಲೇಸರ್ ಹಾಗೂ ಲೈಟಿಂಗ್‌ಗಳಿಗೆ ಚಾಲನೆ ನೀಡಲಿದ್ದಾರೆ. ಗಗನಚುಕ್ಕಿಯನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿಸಲು ಹಾಗೂ ಹೆಚ್ಚಿನ ಯುವಜನರನ್ನು ಆಕರ್ಷಿಸಲು ಇಂಥ ಕಾರ್ಯಕ್ರಮ ಅವಶ್ಯವಾಗಿದೆ ಎಂದರು.

ಸರ್ಕಾರದಿಂದ ₹2 ಕೋಟಿ ಅನುದಾನ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಜಲಪಾತೋತ್ಸವ ನಡೆಯಲಿದ್ದು, ಕಾರ್ಯಕ್ರಮಕ್ಕೆ ಬರುವ ಜನರಿಗೆ ಎರಡು ದಿನ ಉಚಿತವಾಗಿ ತಿಂಡಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುತ್ತೇವೆ. ಪರಿಸರದ ಸೌಂದರ್ಯ ಸವಿಯುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಡೆಯಲಿದೆ ಎಂದರು.

ಪ್ರಾಣಿ ಸಂಗ್ರಹಾಲಯ:

ಏಷಿಯಾದಲ್ಲೇ ಮೊದಲ ಜಲ ವಿದ್ಯುತ್ ಉತ್ಪಾದನೆ ಮಾಡಿದ ಹೆಗ್ಗಳಿಕೆ ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಲ್ಲುತ್ತದೆ. ಮೈಸೂರು-ಮಂಡ್ಯ- ಚಾಮರಾಜನಗರ ಜಿಲ್ಲೆಗಳಲ್ಲಿ ಇರುವ ಪ್ರವಾಸಿ ಸ್ಥಳಗಳ ‘ಪ್ರವಾಸಿ ಸರ್ಕ್ಯೂಟ್‌’ ರಚಿಸಬೇಕು. ಇಲ್ಲಿರುವ ದ್ವೀಪ ಪ್ರದೇಶದಲ್ಲಿ ‘ಪ್ರಾಣಿ ಸಂಗ್ರಹಾಲಯ’ ಮತ್ತು ವಾಕಿಂಗ್ ಪಾಥ್ ನಿರ್ಮಿಸಿ ಅಭಿವೃದ್ಧಿಪಡಿಸಲು ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗುವುದು. ಇದರಿಂದ 10 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ ಎಂದರು.

ಅಕ್ವಾ ಪಾರ್ಕ್‌ ನಿರ್ಮಾಣ:

ಕೇಂದ್ರ ಸರ್ಕಾರದ ಸಹಯೋಗದಲ್ಲಿ ‘ಅಕ್ವಾ ಪಾರ್ಕ್‌’ ನಿರ್ಮಾಣ ಮಾಡಲು 100 ಎಕರೆ ಜಾಗ ಗುರುತಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುಮತಿ ಸಿಗುವ ಭರವಸೆಯಿದೆ. ಅಗತ್ಯಬಿದ್ದರೆ, ಮಂಡ್ಯ ಸಂಸದ ಎಚ್‌.ಡಿ.ಕುಮಾರಸ್ವಾಮಿಯವರ ಸಹಕಾರವನ್ನೂ ಪಡೆಯುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ನರೇಂದ್ರಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT