ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಜಿಲ್ಲೆಯಲ್ಲಿ 249 ಹೆಕ್ಟೇರ್‌ ಬೆಳೆ ಹಾನಿ

ಮಳೆ/ನೆರೆಗೆ 44 ಮನೆಗಳಿಗೆ ಹಾನಿ: ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನೀರುಪಾಲು
Published : 12 ಆಗಸ್ಟ್ 2024, 7:34 IST
Last Updated : 12 ಆಗಸ್ಟ್ 2024, 7:34 IST
ಫಾಲೋ ಮಾಡಿ
Comments

ಮಂಡ್ಯ: ಈ ಬಾರಿ ಮುಂಗಾರು ಮಳೆಯ ಆರ್ಭಟ ಹಾಗೂ ಉಕ್ಕಿ ಹರಿದ ಕಾವೇರಿ, ಹೇಮಾವತಿ ನದಿಗಳ ಪ್ರವಾಹದಿಂದ (ನೆರೆ) ಜಿಲ್ಲೆಯಲ್ಲಿ 249 ಹೆಕ್ಟೇರ್‌ ಬೆಳೆಹಾನಿಯಾಗಿದ್ದು, 44 ಮನೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 106.5 ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಗೊಳಗಾದ ತಾಲ್ಲೂಕು ಎನಿಸಿದೆ. ಮಂಡ್ಯ, ಮದ್ದೂರು ಮತ್ತು ನಾಗಮಂಗಲದಲ್ಲಿ ಇದುವರೆಗೆ ಯಾವುದೇ ಕೃಷಿ ಬೆಳೆ ಹಾನಿ ಕಂಡುಬಂದಿಲ್ಲ. ನೀರಿನ ಪ್ರಮಾಣ ಕಡಿಮೆಯಾದ ನಂತರ ನಷ್ಟದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. 

90 ಸಮಸ್ಯಾತ್ಮಕ ಗ್ರಾಮ:

ಕಾವೇರಿ ಮತ್ತು ಹೇಮಾವತಿ ನದಿಗಳಿಂದ ಪ್ರತಿಕೂಲ ಪರಿಣಾಮ ಬೀರಬಹುದಾದ 34 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 90 ಸಮಸ್ಯಾತ್ಮಕ ಹಳ್ಳಿಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಈ ಗ್ರಾಮಗಳಲ್ಲಿ 95,481 ಜನಸಂಖ್ಯೆಯಿದೆ ಎಂದು ಅಂದಾಜಿಸಲಾಗಿದೆ. 

ಕೆಆರ್‌ಎಸ್‌ ಅಣೆಕಟ್ಟೆಯಿಂದ ಕಾವೇರಿ ನದಿಗೆ 1.5 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹರಿಸಿದ ಪರಿಣಾಮ, ಜಲಾಶಯದ ತಗ್ಗಿನಲ್ಲಿರುವ ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ತೋಟ ಮತ್ತು ಕೃಷಿ ಜಮೀನುಗಳು ಜಲಾವೃತಗೊಂಡು, ಬೆಳೆ ನಷ್ಟವಾಗಿದೆ. ಶ್ರೀನಿವಾಸ ಅಗ್ರಹಾರದ ಬಳಿ ಕಬ್ಬು, ತೆಂಗು, ಬಾಳೆ ತೋಟಗಳು ಜಲಾವೃತವಾಗಿವೆ. 

ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡ‍ಪಾಳ್ಯ ಸಮೀಪ ನದಿಯ ನೀರು ಹಳ್ಳಕ್ಕೆ ಹಿಮ್ಮುಖವಾಗಿ ಬಂದ ಕಾರಣ ಹಳ್ಳದ ಇಕ್ಕೆಲಗಳಲ್ಲಿರುವ ತೋಟ, ತುಡಿಕೆಗಳು ಜಲಾವೃತವಾಗಿದ್ದವು. ಮರಳಾಗಾಲ, ಗಂಜಾಂ, ಮಹದೇವಪುರ, ಮೇಳಾಪುರ, ಚಂದಗಾಲು, ನಗುವನಹಳ್ಳಿ ಬಳಿ ನದಿ ಅಂಚಿನಲ್ಲಿರುವ ನೂರಾರು ಎಕರೆ ಕಬ್ಬಿನ ಬೆಳೆ ನೀರು ಪಾಲಾಗಿವೆ. 

ಹೇಮಾವತಿ ನದಿಯ ಅಬ್ಬರ:

ಹೇಮಾವತಿ ಜಲಾಶಯ ತುಂಬಿದ ಹಿನ್ನಲೆಯಲ್ಲಿ ನದಿಗೆ ಸರಾಸರಿ 90 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ಬಿಟ್ಟಿ ಪರಿಣಾಮ ಅಪಾಯದ ಮಟ್ಟ ಮೀರಿ ಹರಿಯಿತು. ಇದರಿಂದ ಜಮೀನು, ಗದ್ದೆಗಳಿಗೆ ನೀರು ನುಗ್ಗಿ ಅನ್ನದಾತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. 

ನದಿತೀರದ ಪ್ರದೇಶಗಳಾದ ಮಾದಾಪುರ, ಮಂದಗೆರೆ, ಚಿಕ್ಕಮಂದಗೆರೆ, ಹೇಮಗಿರಿ, ಗದ್ದೆ ಹೊಸೂರು ಶ್ರವಣೂರು, ಕುಪ್ಪಹಳ್ಳಿ, ಬಂಡಿಹೊಳೆ, ಆಲಂಬಾಡಿ, ಹರಿಹರಪುರ, ಜೈನ್ನಹಳ್ಳಿ , ಅಕ್ಕಿಹೆಬ್ಬಾಳು ವ್ಯಾಪ್ತಿಯ ತಗ್ಗು ಪಾತ್ರಗಳಲ್ಲಿ ಹೇಮಾವತಿ ನದಿಯ ನೀರು ಹೊಲ, ಗದ್ದೆ, ತೋಟಗಳಲ್ಲಿ ತುಂಬಿಕೊಂಡಿತು. ಅಲಸಂದೆ, ಜೋಳ, ಕಬ್ಬು, ತೆಂಗು, ಅಡಿಕೆ ತೋಟಗಳಿಗೆ ಹಾನಿಯಾಗಿದೆ ಎಂದು ರೈತರು ಕಣ್ಣೀರು ಮಿಡಿದಿದ್ದಾರೆ. 

ವೈಜ್ಞಾನಿಕ ಪರಿಹಾರ ನೀಡಿ:

‘ಹೇಮಾವತಿ ನದಿಯಲ್ಲಿ ಪ್ರವಾಹವಾದಾಗ ನಮ್ಮ ಜಮೀನು, ತೋಟಕ್ಕೆ ನೀರು ನುಗ್ಗುತ್ತದೆ. ಬೆಳೆ ನಷ್ಟವಾಗುತ್ತದೆ. ಆದರೆ ಸರ್ಕಾರ ನೀಡುವ ಪರಿಹಾರ ಒಂದು ದಿನದ ಕೂಲಿಗೆ ಸಮನಾಗಿರುವುದಿಲ್ಲ. ಹಳೆ ಕಾಲದ ಪರಿಹಾರ ಬದಲಿಸಿ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು’ ಎಂದು ರೈತ ಸುಬ್ಬೇಗೌಡ ಮನವಿ ಮಾಡಿದರು. 

ಕಿಕ್ಕೇರಿ ಸಮೀಪದ ಚಿಕ್ಕಮಂದಗೆರೆ ಗ್ರಾಮದಲ್ಲಿ ಮಳೆ ಆರ್ಭಟಕ್ಕೆ ತೆಂಗು, ಅಡಿಕೆ ಮರಗಳು ಉರುಳಿವೆ. ಬೇವಿನಹಳ್ಳಿ ಅಂಕನಾಥೇಶ್ವರ ದೇಗುಲದ ಪಕ್ಕದಲ್ಲಿದ್ದ ಮೇವಿನ ಜೋಳದ ಬೆಳೆ ಕೊಚ್ಚಿ ಹೋಗಿದೆ. ರೈತರ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿ ಬಾಳೆ, ಅಡಿಕೆ ಬೆಳೆ ನಷ್ಟವಾಗಿದೆ.

ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್‌, ಟಿ.ಕೆ. ಲಿಂಗರಾಜು, ಕೆ.ವಿ.ಗೋವಿಂದರಾಜು

ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಬಳಿ ತೆಂಗು ಮತ್ತು ಅಡಿಕೆ ತೋಟ ಜಲಾವೃತವಾಗಿತ್ತು
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಬಳಿ ತೆಂಗು ಮತ್ತು ಅಡಿಕೆ ತೋಟ ಜಲಾವೃತವಾಗಿತ್ತು
ಕಿಕ್ಕೇರಿ ಸಮೀಪದ ಮಾಕವಳ್ಳಿ ಗ್ರಾಮದ ರೈತ ಮಂಜಯ್ಯ ಅವರ ಮನೆ ಮಳೆಗೆ ಕುಸಿದಿರುವ ದೃಶ್ಯ
ಕಿಕ್ಕೇರಿ ಸಮೀಪದ ಮಾಕವಳ್ಳಿ ಗ್ರಾಮದ ರೈತ ಮಂಜಯ್ಯ ಅವರ ಮನೆ ಮಳೆಗೆ ಕುಸಿದಿರುವ ದೃಶ್ಯ
ಕುಮಾರ ಜಿಲ್ಲಾಧಿಕಾರಿ
ಕುಮಾರ ಜಿಲ್ಲಾಧಿಕಾರಿ
ಮರಳಾಗಾಲ ಕೃಷ್ಣೇಗೌಡ 
ಮರಳಾಗಾಲ ಕೃಷ್ಣೇಗೌಡ 
ಚಿಕ್ಕವೆಂಕಟಯ್ಯ ರೈತ ಬೆಳಕವಾಡಿ
ಚಿಕ್ಕವೆಂಕಟಯ್ಯ ರೈತ ಬೆಳಕವಾಡಿ

ಮಳೆ/ನೆರೆಯಿಂದ ಕೃಷಿ ಬೆಳೆ ಹಾನಿ ವಿವರ (ಹೆಕ್ಟೇರ್‌ಗಳಲ್ಲಿ)  ತಾಲ್ಲೂಕು;ಕೃಷಿಬೆಳೆ;ತೋಟಗಾರಿಕಾ ಬೆಳೆ;ಒಟ್ಟು ಮಂಡ್ಯ;00;00;00; ಮದ್ದೂರು;00;00;00 ಮಳವಳ್ಳಿ;43.9;2.4;46.3 ಪಾಂಡವಪುರ;32.9;18.9;51.8 ನಾಗಮಂಗಲ;00;00;00 ಕೆ.ಆರ್‌.ಪೇಟೆ;32.7;11.8;44.5 ಶ್ರೀರಂಗಪಟ್ಟಣ;92.9;13.6;106.5 ಒಟ್ಟು;202.4;46.7;249.1 ಆಧಾರ; ಜಿಲ್ಲಾಡಳಿತ ಮಂಡ್ಯ

03 ಶಾಲೆಗಳಿಗೆ ಹಾನಿ ಮಂಡ್ಯ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ 103 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ₹ 4.14 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ 12 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳಿಗೆ ಹಾನಿಯಾಗಿದ್ದು ಅಂದಾಜು ₹2 ಕೋಟಿ ನಷ್ಟವಾಗಿದೆ.  573 ವಿದ್ಯುತ್‌ ಕಂಬಗಳಿಗೆ ಹಾನಿ ಜಿಲ್ಲೆಯಲ್ಲಿ ಮಂಡ್ಯ ತಾಲ್ಲೂಕು (99) ಮದ್ದೂರು (54) ಮಳವಳ್ಳಿ (90) ಪಾಂಡವಪುರ (3) ನಾಗಮಂಗಲ (206) ಕೆ.ಆರ್.ಪೇಟೆ (107) ಶ್ರೀರಂಗಪಟ್ಟಣ (14) ಸೇರಿದಂತೆ ಒಟ್ಟು 573 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.  ಅಷ್ಟೇ ಅಲ್ಲ 12 ವಿದ್ಯುತ್‌ ಪರಿವರ್ತಕಗಳು (ಟಿ.ಸಿ) ಹಾನಿಯಾಗಿದ್ದು ಒಟ್ಟಾರೆ ಜೂನ್‌ 1ರಿಂದ ಆಗಸ್ಟ್‌ 1ರವರೆಗೆ ಚಾಮುಂಡೇಶ್ವರಿ ವಿದ್ಯುತ್‌ ಕಂಪನಿಗೆ (ಸೆಸ್ಕ್‌) ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ₹82 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

ಕುಸಿದ ಮನೆ; ಬೀದಿಗೆ ಬಿದ್ದ ಬದುಕು

ಮಳೆ ಮತ್ತು ನೆರೆಯಿಂದ ಮಂಡ್ಯ ತಾಲ್ಲೂಕು (7) ನಾಗಮಂಗಲ ತಾಲ್ಲೂಕು (6) ಪಾಂಡವಪುರ (7) ಕೆ.ಆರ್‌.ಪೇಟೆ (14) ಶ್ರೀರಂಗಪಟ್ಟಣ (10) ಮನೆಗಲು ಭಾಗಶಃ ಶಿಥಿಲಗೊಂಡಿವೆ. ಸಂಪೂರ್ಣ ಶಿಥಿಲ ಮತ್ತು ಹೆಚ್ಚು ಹಾನಿಯಾದ ಮನೆಗಳಿಗೆ ₹1.20 ಲಕ್ಷ ಪರಿಹಾರ ಸಿಗಲಿದೆ. ಭಾಗಶಃ ಹಾನಿಯಾದ ಮನೆಗಳಿಗೆ ₹6500 ಪರಿಹಾರ ಎಸ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಸಿಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.  ಕಿಕ್ಕೇರಿ ಸಮೀಪದ ಮಾಕವಳ್ಳಿ ಗ್ರಾಮದ ರೈತ ಮಂಜಯ್ಯ ಅವರ ಹೆಂಚಿನ ಮನೆ ಮಳೆಯಿಂದಾಗಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ‘ಮನೆಯಲ್ಲಿದ್ದ ದವಸ ಧಾನ್ಯ ಪಾತ್ರೆಗಳು ಗೋಡೆ ಕುಸಿತದಿಂದ ಹಾಳಾಗಿವೆ. ಮನೆಯ ಚಾವಣಿ ಹೆಂಚುಗಳು ಸಂಪೂರ್ಣ ಹಾಳಾಗಿವೆ. ಇದ್ದ ಸೂರು ಇಲ್ಲವಾಗಿ ಬದುಕಲು ಕಷ್ಟವಾಗಿದೆ’ ಎಂದು ಮಂಜಯ್ಯ ಅಲವತ್ತುಕೊಂಡಿದ್ದಾರೆ.

ಏನಂತಾರೆ? ಪ್ರವಾಹ ಎದುರಿಸಲು ಸಜ್ಜು ಪ್ರವಾಹ ಎದುರಿಸಲು ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತಾಲ್ಲೂಕು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ರಕ್ಷಣಾ ಸಾಮಗ್ರಿಗಳನ್ನು ಸಜ್ಜುಗೊಳಿಸಲಾಗಿದೆ. ಬೆಳೆ ಹಾನಿ ಮತ್ತು ಮನೆ ಹಾನಿಗೆ ಪರಿಹಾರ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ– ಕುಮಾರ ಜಿಲ್ಲಾಧಿಕಾರಿ ಮಂಡ್ಯ *** ವೈಜ್ಞಾನಿಕ ಪರಿಹಾರ ಕೊಡಿ ಕಳೆದ ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದ್ದೆವು. ಈ ಬಾರಿ ಪ್ರವಾಹದಿಂದ ಕಟಾವಿಗೆ ಬಂದಿದ್ದ ಒಂದು ಎಕರೆ ಭತ್ತದ ಬೆಳೆ ಸಂಪೂರ್ಣ ನಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕೊಡಬೇಕು – ಚಿಕ್ಕವೆಂಕಟಯ್ಯ ರೈತ ಬೆಳಕವಾಡಿ. *** ತ್ವರಿತ ಪರಿಹಾರ ನೀಡಿ ಕಾವೇರಿ‌ ಹೇಮಾವತಿ ಕಪಿಲಾ ನದಿಗಳ ಪ್ರವಾಹದಿಂದ ಬೆಳೆ ಆಸ್ತಿ- ಪಾಸ್ತಿ ಕಳೆದುಕೊಂಡಿರುವ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಕೊಡಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸುವ ನಷ್ಟಕ್ಕೆ ಸದ್ಯ ಸರ್ಕಾರ ಕೊಡುತ್ತಿರುವ ಪರಿಹಾರ ಅತ್ಯಂತ‌ ಕಡಿಮೆ ಇದೆ. ನಷ್ಟದ ಅರ್ಧದಷ್ಟನ್ನಾದರೂ ಪರಿಹಾರ ರೂಪದಲ್ಲಿ ನೀಡುವಂತಾಗಬೇಕು. - ಮರಳಾಗಾಲ ಕೃಷ್ಣೇಗೌಡ ರೈತ ಮುಖಂಡ ಶ್ರೀರಂಗಪಟ್ಟಣ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT