ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರಗೌಡರು ಸಾಂಸ್ಕೃತಿಕ ಪ್ರಗತಿಯ ಹರಿಕಾರ

ಜಾನಪದ ನಿಘಂಟು, ಜೀವಂತ ದಂತಕಥೆ ಕೃತಿ ಬಿಡುಗಡೆ; ಡಿ.ಬಿ.ನಾಯಕ ಅಭಿಮತ
Last Updated 15 ಜುಲೈ 2019, 13:51 IST
ಅಕ್ಷರ ಗಾತ್ರ

ಮಂಡ್ಯ: ‘ಸರ್.ಎಂ.ವಿಶ್ವೇಶ್ವರಯ್ಯ ಅವರು ಜಿಲ್ಲೆಯಲ್ಲಿ ಕನ್ನಂಬಾಡಿ ಕಟ್ಟಿ ಆರ್ಥಿಕ ಅಭಿವೃದ್ಧಿಗೆ ಕಾರಣವಾದರೆ, ಕೆ.ವಿ.ಶಂಕರಗೌಡರು ಜಿಲ್ಲೆಯ ಭೌತಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯ ಹರಿಕಾರರಾಗಿದ್ದಾರೆ’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಬಿ.ನಾಯಕ ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕರ್ನಾಟಕ ಸಂಘದ ವತಿಯಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸೋಮವಾರ ನಡೆದ ಕನ್ನಡ ಜಾನಪದ ನಿಘಂಟು ಪದಸಂಸ್ಕೃತಿ ಕೋಶದ 4ನೇ ಸಂಪುಟ ಬಿಡುಗಡೆ ಹಾಗೂ ಕೆ.ವಿ.ಶಂಕರಗೌಡ ಜನ್ಮೋತ್ಸವ ಅಂಗವಾಗಿ ಹೊರತಂದಿರುವ ಸಾಹಿತಿ ಡಾ.ರಾಗೌ ಅವರ ‘ಜೀವಂತ ದಂತಕಥೆ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ವ್ಯಕ್ತಿಯ ದೇಹಕ್ಕೆ ಸಾವಿದೆ, ಆದರೆ ಅವರು ಮಾಡಿರುವ ಸಾಧನೆಗೆ ಸಾವಿಲ್ಲ ಎನ್ನುವುದು ದೇಶದ ಅನೇಕ ಗಣ್ಯರ ವಿಷಯದಲ್ಲಿ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಗಾಂಧಿವಾದಿಯಾಗಿದ್ದ ಕೆ.ವಿ.ಶಂಕರಗೌಡರು ಉತ್ತಮ ರಾಜಕಾರಣಿಯಾಗಿದ್ದರು. ಅಲ್ಲದೆ ಅಭಿವೃದ್ಧಿ ಹರಿಕಾರರೂ ಆಗಿದ್ದರು. ಹೀಗಾಗಿ ಶಂಕರಗೌಡರು ನಮ್ಮಿಂದ ದೂರವಾಗಿ ಎಷ್ಟೇ ವರ್ಷ ಕಳೆದರೂ, ಜೀವಂತ ದಂತಕತೆಯಾಗಿ ನಮ್ಮೊಂದಿಗಿದ್ದಾರೆ. ಅವರು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸುಧಾರಣೆಗಳು, ಜಿಲ್ಲೆಯಲ್ಲಿ ನಿರ್ಮಿಸಿರುವ ಶೈಕ್ಷಣಿಕ ಸಂಸ್ಥೆಗಳು ಹಾಗೂ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳು ಇಂದಿಗೂ ಜೀವಂತವಾಗಿವೆ’ ಎಂದರು.

‘ಸಾಹಿತಿಗಳಿಗೆ ಪುಸ್ತಕ ಬರವಣಿಗೆ ಸುಲಭವಾಗಬಹುದು. ಆದರೆ ನಿಘಂಟು ರಚನೆ ಮಾಡುವುದು ಅತ್ಯಂತ ಕಷ್ಟದ ಕೆಲಸ. ಅದರಲ್ಲಿ ಪದಸಂಸ್ಕೃತಿ ಕೋಶದಲ್ಲಿ ಸ್ಥಳೀಯ ಹಾಗೂ ಜಾನಪದೀಯ ಪದಗಳನ್ನು ಕಟ್ಟಿಕೊಡುವುದು ಸಾಹಸವೇ ಆಗಿದೆ. ಆದರೆ ಕನ್ನಡ ಜಾನಪದ ವಿಶ್ವವಿದ್ಯಾಲಯಕ್ಕೆ ಪದಸಂಸ್ಕೃತಿ ಕೋಶದ 10 ನಿಘಂಟುಗಳನ್ನು ರಚಿಸುತ್ತಿರುವ ಸಾಹಿತಿ ಡಾ.ರಾಗೌ ಅವರು ಮುಂದೊಂದು ದಿನ ಜಾನಪದ ನಿಘಂಟುಗಳ ಕಿಟೆಲ್ ಆಗಿ ಹೊರಹೊಮ್ಮಲಿದ್ದಾರೆ’ ಎಂದರು.

ಪದಸಂಸ್ಕೃತಿ ಕೋಶದ 4ನೇ ಲೋಕಾರ್ಪಣೆ ಮಾಡಿದ ಹಿರಿಯ ಸಾಹಿತಿ ಪ್ರೊ.ಕರೀಮುದ್ದಿನ್ ಮಾತನಾಡಿ ‘ವಿಶ್ವದಲ್ಲಿ ಕೋಟಿ–ಕೋಟಿ ಜನಸಂಖ್ಯೆಯಿದ್ದರೂ, ಗೌತಮ ಬುದ್ಧ, ಮಹಾವೀರ, ಪ್ರವಾದಿಗಳು ಹಾಗೂ ವಿಶ್ವದ ತತ್ವಜ್ಞಾನಿಗಳು ಯಾರೊಬ್ಬರೂ ಮನುಷ್ಯನಿಗೆ ಆತ್ಮವಿದೆ ಎಂದು ಒಪ್ಪಿಕೊಂಡಿಲ್ಲ. ಆದರೆ ಗೌತಮ ಬುದ್ಧ ಮಾತ್ರ ಪುನರ್ಜನ್ಮವಿದೆ ಎಂದು ತಿಳಿಸಿದ್ದಾರೆ. ವಿಶ್ವದ ಅನೇಕ ಸಾಧಕರು ಮಿಂಚು ಹುಳುವಿನಂತೆ ಬದುಕು ಸಾಗಿಸಿ, ತಮ್ಮ ನಂತರವೂ ಬೆಳಕನ್ನು ಉಳಿಸಿ ಹೋಗಿದ್ದಾರೆ. ಅವರ ಸಾಲಿನಲ್ಲಿ ಕೆ.ವಿ.ಶಂಕರಗೌಡ ಅವರು ನಿಲ್ಲುತ್ತಾರೆ. ಸಾಧಕರ ಆದರ್ಶ ಪಾಲನೆ ಮೂಲಕ ನಾವೆಲ್ಲರೂ ಸಾಧನೆಯ ಹಾದಿಯಲ್ಲಿ ಸಾಗಬೇಕು’ ಎಂದು ಸಲಹೆ ನೀಡಿದರು.

ಕೆ.ವಿ.ಶಂಕರಗೌಡ ಅವರ ಕುರಿತ ‘ಜೀವಂತ ದಂತಕಥೆ’ ಪುಸ್ತಕಕ್ಕೆ ನೆರವು ನೀಡಿದ ಉದ್ಯಮಿ ಹುಳೇನಹಳ್ಳಿ ಎಚ್.ಇ.ನಾಗರಾಜು ಹಾಗೂ ಪುಸ್ತಕ ಮುದ್ರಣಕಾರ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಉಪಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಸಾಹಿತಿ ಡಾ.ರಾಗೌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT