ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ದನಗಳ ಜಾತ್ರೆಯಲ್ಲಿ ಹಳ್ಳಿಕಾರ್‌ ಕಾರುಬಾರು

10 ದಿನಗಳ ಉತ್ಸವ, ಹಾಲು ಬಾಯಿ, ಎರಡು, ನಾಲ್ಕು , ಆರು ಹಲ್ಲು ರಾಸುಗಳ ಆಕರ್ಷಣೆ
Published 20 ಜನವರಿ 2024, 5:51 IST
Last Updated 20 ಜನವರಿ 2024, 5:51 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಬಳಿ ಜ.15ರಂದು ಆರಂಭವಾದ 10 ದಿನಗಳ ದನಗಳ ಜಾತ್ರೆ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಹಳ್ಳಿಕಾರ್‌ ರಾಸುಗಳ ಕಾರುಬಾರು ಜೋರಾಗಿದೆ.

38 ವರ್ಷದಿಂದ ನಡೆಯುತ್ತಿರುವ ಜಾತ್ರೆಗೆ ಈ ಬಾರಿ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳ ಸಹಸ್ರಾರು ರಾಸುಗಳು ಬಂದಿವೆ. ಈ ಪೈಕಿ ಶೇ 80ರಷ್ಟು ಹಳ್ಳಿಕಾರ್‌ ತಳಿಯ ರಾಸುಗಳೇ ಇವೆ. ಹಾಲು ಬಾಯಿ, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು ಮತ್ತು ಹೊಸಬಾಯಿ ಆಗಿರುವ ರಾಸುಗಳನ್ನು ರೈತರು ಜಾತ್ರೆಗೆ ತಂದಿದ್ದಾರೆ.

ಹಾಲು ಬಿಳುಪು ಮತ್ತು ರೂಪಾಯಿ ಬಣ್ಣದ ಹಳ್ಳಿಕಾರ್‌ ತಳಿಯ ಎತ್ತುಗಳು ನೋಡುಗರನ್ನು ಆಕರ್ಷಿಸುತ್ತಿವೆ. ಜಾತ್ರೆಗೆ ಬಂದಿರುವ ಯುವ ರೈತರು ನೀಳ ದೇಹದ, ಉದ್ದನೆ ಹಾಗೂ ಚೂಪಾದ ಕೊಂಬಿನ ಹಳ್ಳಿಕಾರ್‌ ತಳಿಯ ರಾಸುಗಳ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ. ಬೀಜದ ಹೋರಿಗಳು ಕೂಡ ಅಲ್ಲಲ್ಲಿ ಕಂಡು ಬರುತ್ತಿವೆ.

ಮೈಸೂರು ತಾಲ್ಲೂಕು ಸಿದ್ದಲಿಂಗಪುರದ ಸೂರಿ ಅವರ ₹ 4 ಲಕ್ಷ ಬೆಲೆಯ ಹಳ್ಳಿಕಾರ್‌ ತಳಿಯ ಎತ್ತುಗಳು ಗಮನ ಸೆಳೆಯುತ್ತಿವೆ. ಇದೇ ತಾಲ್ಲೂಕಿನ ಬೆಳಗೊಳ ಗ್ರಾಮದ ಪೈ.ಪ್ರಮೋದ್‌ ಅವರ ₹ 4 ಲಕ್ಷ ಬೆಲೆಯ ಬೆಳ್ಳನೆ ಬಣ್ಣದ ರಾಸುಗಳು ಫಳ ಫಳ ಹೊಳೆಯುತ್ತಿವೆ. ರಾಸುಗಳಿಗೆ ಕೊರಳ ಗೆಜ್ಜೆ, ಕಪ್ಪು ಹುರಿ, ಕೊಂಬಿಗೆ ಕರಡಿಗೆ ಕಟ್ಟಿ ಅಲಂಕರಿಸಲಾಗಿದೆ. ಮೆತ್ತನೆಯ ಹುಲ್ಲಿನ ಹಾಸಿಗೆ ಸಿದ್ದಪಡಿಸಿ ಅವುಗಳ ಮೇಲೆ ರಾಸುಗಳು ಮಲಗಲು ವ್ಯವಸ್ಥೆ ಮಾಡಲಾಗಿದೆ.

ಮೈಸೂರು ತಾಲ್ಲೂಕು ಕುಂಬಾರಕೊಪ್ಪಲಿನ ಶಿವರಾಜು ಅವರ ಹಳ್ಳಿಕಾರ್‌ ತಳಿಯ ಹಾಲು ಬಿಳುಪು ಬಣ್ಣದ ರಾಸುಗಳಿಗೆ ₹ 3.5 ಲಕ್ಷ ಬೆಲೆ ಕಟ್ಟಲಾಗಿದೆ. ಆಕರ್ಷಕ ಮೈ ಕಟ್ಟಿನ ಈ ರಾಸುಗಳು ಜನರನ್ನು ಆಕರ್ಷಿಸುತ್ತಿದ್ದು, ಇಂತಹ ಹತ್ತಾರು ಜೋಡಿ ರಾಸುಗಳು ಕಣ್ಮನ ಸೆಳೆಯುತ್ತಿವೆ.

‘ಕೆಆರ್‌ಎಸ್‌ ದನಗಳ ಜಾತ್ರೆಗೆ ಇದೇ ಮೊದಲ ಬಾರಿಗೆ ಎತ್ತುಗಳನ್ನು ಹೊಡೆದು ತಂದಿದ್ದೇನೆ. ನೀರು, ನೆರಳಿನ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಈ ಬಾರಿ ಬರ ಪರಿಸ್ಥಿತಿಯಿಂದಾಗಿ ಮೇವಿಗೆ ಕೊರತೆ ಉಂಟಾಗಿದ್ದು, ಜಾತ್ರೆಯಲ್ಲಿ ಕೊಡು– ಕೊಳ್ಳುವ ವ್ಯವಹಾರ ಅಷ್ಟೇನೂ ಬಿರುಸಾಗಿ ನಡೆಯುತ್ತಿಲ್ಲ’ ಎಂದು ಹುಣಸೂರಿನ ಲೋಕೇಶ್‌ ಹೇಳಿದರು.

‘ಕೋವಿಡ್‌ ಮತ್ತು ಚರ್ಮಗಂಟು ರೋಗದ ಕಾರಣ ಎರಡು ವರ್ಷಗಳ ಕಾಲ ಇಲ್ಲಿ ದನಗಳ ಜಾತ್ರೆ ನಡೆದಿರಲಿಲ್ಲ. ನಿರೀಕ್ಷೆಯಷ್ಟು ರಾಸುಗಳು ಜಾತ್ರೆಗೆ ಬಾರದಿದ್ದರೂ ಇಲ್ಲಿರುವ ಉತ್ತಮ ರಾಸುಗಳು ಜಾತ್ರೆ ಕಳೆಗಟ್ಟುವಂತೆ ಮಾಡಿವೆ. ಆಕರ್ಷಕ ರಾಸುಗಳಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನವನ್ನೂ ನೀಡಲಾಗುತ್ತದೆ’ ಎಂದು ಉಪ್ಪರಿಕೆ ದನಗಳ ಜಾತ್ರಾ ಮಹೋತ್ಸವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಂ.ಬಿ. ಕುಮಾರ್‌ ತಿಳಿಸಿದರು.

ಹಾಲು ಬಿಳುಪು, ರೂಪಾಯಿ ಬಣ್ಣದ ಹಳ್ಳಿಕಾರ್‌ ಜಾತ್ರೆಯಲ್ಲಿ ಬೀಜದ ಹೋರಿಗಳ ಆಕರ್ಷಣೆ ರಾಸುಗಳಿಗೆ ನೀರು ನೆರಳಿನ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT