ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕ್ಯಾಂಟೀನ್‌, ಕಾರ್‌ ಶೆಡ್‌ನಲ್ಲಿ ಕೋರ್ಟ್‌ ಕಾರ್ಯಕಲಾಪ

ಜಾಗದ ಕೊರತೆಯಿಂದ ನಡೆಯದ ಕೌಟುಂಬಿಕ ವ್ಯಾಜ್ಯ, ಪೋಕ್ಸೊ ವಿಚಾರಣೆ, ನ್ಯಾಯದಾನ ವಿಳಂಬ, ಹೈರಾಣಾದ ಕಕ್ಷಿದಾರರು
Last Updated 11 ಏಪ್ರಿಲ್ 2022, 18:44 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಕಲಾಪ ನಡೆಸಲು ಸ್ಥಳಾವಕಾಶದ ಕೊರತೆ ತೀವ್ರವಾಗಿದ್ದು, ಕ್ಯಾಂಟೀನ್‌, ಕಾರ್ ಶೆಡ್‌, ವರಾಂಡವನ್ನೇ ಕೋರ್ಟ್‌ ಕೊಠಡಿಯನ್ನಾಗಿ ಪರಿವರ್ತಿಸಿ ಕಲಾಪ ನಡೆಸಲಾಗುತ್ತಿದೆ. ಕಕ್ಷಿದಾರರು, ವಕೀಲರು, ನ್ಯಾಯಾಧೀಶರು ನಿತ್ಯ ಪರದಾಡುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಸಂಕೀರ್ಣದಲ್ಲಿ 15 ನ್ಯಾಯಾಲಯಗಳು ಕಲಾಪ ನಡೆಸುತ್ತಿವೆ. ವಿವಿಧ ವ್ಯಾಜ್ಯಗಳಿಗೆ ಪ್ರತ್ಯೇಕ ನ್ಯಾಯಾಲಯ ಮಂಜೂರಾಗಿ ವರ್ಷಗಳೇ ಕಳೆದಿದ್ದರೂ, ಕಟ್ಟಡಗಳಿಲ್ಲದೆ ಕಲಾಪ ನಡೆಸಲು ಸಾಧ್ಯವಾಗುತ್ತಿಲ್ಲ. ಏಳು ನ್ಯಾಯಾಲಯಗಳಿಗೆ ಕೊಠಡಿ ಕೊರತೆ ಎದುರಾಗಿದೆ. ಈ ಸಮಸ್ಯೆ ನಡುವೆ ಪ್ರಕರಣಗಳೂ ಹೆಚ್ಚುತ್ತಿವೆ.

ನಾಲ್ಕು ವರ್ಷಗಳ ಹಿಂದೆಯೇ ಪ್ರತ್ಯೇಕ ಕೌಟುಂಬಿಕ ನ್ಯಾಯಾಲಯ ಮಂಜೂರಾಗಿದ್ದರೂ, ನಿಯಮಿತವಾಗಿ ಕಲಾಪ ನಡೆಯದೆ, ವಿವಾಹ ವಿಚ್ಛೇದನ ಸೇರಿ ಕೌಟುಂಬಿಕ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ಮಹಿಳೆಯರು ಚಿಕ್ಕ ಮಕ್ಕಳೊಂದಿಗೆ ದಿನವಿಡೀ ಕಾಯುವ ದೃಶ್ಯಗಳು ಸಾಮಾನ್ಯ.

‘ಸಮರ್ಪಕವಾಗಿ ಕಲಾಪ ನಡೆದಿದ್ದರೆ ಎರಡು ವರ್ಷಗಳ ಹಿಂದೆಯೇ ವಿಚ್ಛೇದನ ಸಿಗಬೇಕಿತ್ತು. ದಿನಾಂಕ ನಿಗದಿಯಾಗಿದ್ದರೂಕೋರ್ಟ್ ಕಟ್ಟಡವಿಲ್ಲದೆ ಕಲಾಪ ನಡೆಯುತ್ತಿಲ್ಲ. ಸುಮ್ಮನೇ ಕಾದು ವಾಪಸ್‌ ಹೋಗುತ್ತಿದ್ದೇನೆ’ ಎಂದು ಮಹಿಳೆಯೊಬ್ಬರು ನೋವು ತೋಡಿಕೊಂಡರು.

ಪೋಕ್ಸೊ ಪ್ರಕರಣಗಳ ವಿಚಾರಣೆ ಇಕ್ಕಟ್ಟಾದ ಸ್ಥಳದಲ್ಲಿ ನಡೆಯುತ್ತಿದೆ. ದಾಖಲಾತಿ ಕೊಠಡಿ, ಶೌಚಾಲಯ ತೆರವುಗೊಳಿಸಿ, ವರಾಂಡದ ಜಾಗ ಬಳಸಿ ಕೋರ್ಟ್‌ ರೂಪ ನೀಡಲಾಗಿದೆ. ವರಾಂಡದಲ್ಲಿ ನ್ಯಾಯಾಧೀಶರ ಪೀಠ ಹಾಕುವ ಅನಿವಾರ್ಯ ಸ್ಥಿತಿ ಎದುರಾಗಿದೆ.

ನ್ಯಾಯಾಲಯದ ಹಿಂಬದಿಯಲ್ಲಿದ್ದ ಕಾರ್‌ ಶೆಡ್‌ ಹಾಗೂ ಕ್ಯಾಂಟೀನ್‌ ಕೊಠಡಿಯನ್ನೇ ಕೋರ್ಟ್‌ ಕೊಠಡಿಯನ್ನಾಗಿಸಿ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯ ನಡೆಸಲಾಗುತ್ತಿದೆ. 10X10 ಅಳತೆಯ ಕೊಠಡಿಯ ಇಕ್ಕಟ್ಟಿನ ಜಾಗದಲ್ಲಿ ನ್ಯಾಯಾಧೀಶರು, ಸಹಾಯಕರು, ವಕೀಲರು, ಕಕ್ಷಿದಾರರು ಕುಳಿತುಕೊಳ್ಳುತ್ತಾರೆ.

ಕಾರ್ಮಿಕ ನ್ಯಾಯಾಲಯ ಮಂಜೂರಾಗಿ ವರ್ಷವಾಗಿದ್ದು, ಕಲಾಪ ಮಾತ್ರ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಕಕ್ಷಿದಾರರು, ವಕೀಲರು ಅಲ್ಲಿಗೇ ತೆರಳಬೇಕು. ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೂ ಜಾಗ ಇಲ್ಲ. ಆಡಳಿತ ಕಚೇರಿ ಕೊಠಡಿಗಳನ್ನೂ ಕೋರ್ಟ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಕಕ್ಷಿದಾರರಿಗೆ ಕುಳಿತುಕೊಳ್ಳಲೂ ಜಾಗವಿಲ್ಲ.

‘ಕೋರ್ಟ್‌ ಸಮೀಪದಲ್ಲಿರುವ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಒಂದೆರಡು ಕೊಠಡಿ ಬಿಟ್ಟುಕೊಡುವಂತೆ ಕೋರಿದ್ದೆವು. ಆರಂಭದಲ್ಲಿ ಒಪ್ಪಿದ್ದರು, ನಂತರ ನಿರಾಕರಿಸಿದರು. ಕಲಾಪ ತಡವಾಗುತ್ತಿದ್ದು ನ್ಯಾಯದಾನವೂ ವಿಳಂಬವಾಗುತ್ತಿದೆ. ಗೌರವಾನ್ವಿತ ನ್ಯಾಯಾಧೀಶರನ್ನು ಕ್ಯಾಂಟೀನ್‌ ಜಾಗದಲ್ಲಿ ಕೂರಿಸುತ್ತಿರುವುದಕ್ಕೆ ಜಿಲ್ಲೆಯ ವಕೀಲ ಸಮೂಹಕ್ಕೆ ನೋವಾಗಿದೆ’ ಎಂದು ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಬೇಸರ ವ್ಯಕ್ತಪಡಿಸಿದರು.

ಅನುದಾನ ವಾಪಸ್‌: ಮಂಜೂರಾಗಿದ್ದ ಏಳು ಕೋರ್ಟ್‌ ಕಟ್ಟಡ ನಿರ್ಮಾಣ ಹಾಗೂ ಮೂಲಸೌಕರ್ಯಕ್ಕೆಂದು 2017ರಲ್ಲೇ ಸರ್ಕಾರ ₹ 24 ಕೋಟಿ ಹಣ ಬಿಡುಗಡೆ ಮಾಡಿದ್ದರೂ, ಜಾಗವಿಲ್ಲದೆ ವಾಪಸ್‌ ಹೋಗಿದೆ. ಪ್ರತಿ ವರ್ಷ ಪ್ರಸ್ತಾವ ಸಲ್ಲಿಸಲಾಗುತ್ತಿದ್ದು ನಾಲ್ಕು ವರ್ಷಗಳಿಂದ ಹಣ ಮಂಜೂರಾಗಿ ವಾಪಸ್‌ ಹೋಗುತ್ತಿದೆ.

‘2027ಕ್ಕೆ ಪಾಂಡವಪುರ ತಾಲ್ಲೂಕು ಇಂಗಲಗುಪ್ಪೆ ಛತ್ರ ಗ್ರಾಮದ ಬಿ.ವಿ.ನಾಗರತ್ನಾ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ. ಅವರ ತವರು ಜಿಲ್ಲೆಯಲ್ಲೇ ನ್ಯಾಯಾಲಯಕ್ಕೆಸೂಕ್ತ ಕಟ್ಟಡವಿಲ್ಲದಿರುವುದಕ್ಕೆ ನಾವೆಲ್ಲ ತಲೆತಗ್ಗಿಸಬೇಕಾಗಿದೆ’ ಎಂದು ವಕೀಲ ಟಿ.ಎಸ್‌.ಸತ್ಯಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT