ಮಂಡ್ಯ: ತಾಲ್ಲೂಕಿನ ಮಾಚಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಇಬ್ಬರು ಯುವಕರಿಗೆ ಚಾಕು ಇರಿತವಾಗಿದ್ದು, ಗಾಯಗೊಂಡವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಚಹಳ್ಳಿಯ ಸಚಿನ್ ಎಂ.ಸಿ. ಮತ್ತು ನಂಜುಂಡಸ್ವಾಮಿ ಗಾಯಗೊಂಡವರು. ಚಾಕು ಇರಿತ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿರುವುದರಿಂದ ಕೈ, ತಲೆ, ಹೊಟ್ಟೆ ಮತ್ತು ಕಣ್ಣಿನ ಭಾಗಕ್ಕೆ ಗಾಯಗಳಾಗಿವೆ.
ಗಣೇಶ ಮೂರ್ತಿ ಮೆರವಣಿಗೆ ವೇಳೆ ನೃತ್ಯ ಮಾಡುತ್ತಿದ್ದ ಸಚ್ಚಿನ್ ಮತ್ತು ನಂಜುಂಡಸ್ವಾಮಿ ಅವರ ಮೇಲೆ ಏಕಾಏಕಿ ಯುವಕರ ಗುಂಪೊಂದು ದಾಳಿ ನಡೆಸಿ ಹಲ್ಲೆ ಮಾಡಿದೆ. ಇದಕ್ಕೆ ಹಳೆಯ ದ್ವೇಷ ಕಾರಣ ಎಂದು ದೂರಲಾಗಿದೆ.
ಮಾಚಹಳ್ಳಿಯ ಮಧು, ಚಿಕ್ಕ ಅಲಿಯಾಸ್ ಪ್ರಜ್ಜು, ರಾಜು, ದರ್ಶನ್, ಲೋಕೇಶ, ಯೋಗೇಶ, ಮಹದೇವಸ್ವಾಮಿ ಎಂಬುವರ ವಿರುದ್ಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.