ಮಂಡ್ಯ: ಏಲಕ್ಕಿ ಬಾಳೆಹಣ್ಣು ದರ ತೀವ್ರ ಏರಿಕೆಯಾಗಿದ್ದು, ಕೆ.ಜಿ.ಗೆ ₹120ಕ್ಕೆ ತಲುಪಿದೆ. ಪಚ್ಚ ಬಾಳೆಹಣ್ಣಿನ ದರವೂ ₹50ಕ್ಕೆ ಏರಿಕೆಯಾಗಿದೆ. ಸ್ಥಳೀಯ ಬಾಳೆಹಣ್ಣು ಕೊರತೆಯಾಗಿರುವ ಪರಿಣಾಮ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಗೆ ಉತ್ತಮ ಟೊಮೆಟೊ ಹರಿದು ಬರುತ್ತಿದ್ದು, ಅಗ್ಗದ ದರಕ್ಕೆ ಮಾರಾಟವಾಗುತ್ತಿದೆ.
ಹೊರರಾಜ್ಯದಿಂದ ಏಲಕ್ಕಿ ಬಾಳೆಹಣ್ಣು ಬಾರದ ಪರಿಣಾಮ ಏಲಕ್ಕಿ ಬಾಳೆಹಣ್ಣು ದರ ಏರಿಕೆಯಾಗಿದೆ. ಪ್ರಮುಖವಾಗಿ ತಮಿಳುನಾಡಿನಲ್ಲಿ ಬಾಳೆಹಣ್ಣಿನ ಹಂಗಾಮು ಮುಗಿದಿದ್ದು ಜಿಲ್ಲೆಗೆ ಬಾರದ ಕಾರಣ ದರದಲ್ಲಿ ವ್ಯತ್ಯಾಸ ಉಂಟಾಗಿದೆ. ಸ್ಥಳೀಯ ಹಣ್ಣು ಮಾತ್ರ ಮಾರಾಟವಾಗುತ್ತಿದ್ದು ₹110ರ ಗಡಿ ದಾಟಿದೆ. ಏಲಕ್ಕಿ ಬಾಳೆಹಣ್ಣು ದರ ಏರಿಕೆಯಾಗಿರುವ ಕಾರಣ ವರ್ತಕರು ಪಚ್ಚ ಬಾಳೆಹಣ್ಣಿನ ದರವನ್ನೂ ಹೆಚ್ಚಳ ಮಾಡಿದ್ದು ₹50ಕ್ಕೆ ಮಾರಾಟವಾಗುತ್ತಿದೆ.
ಕಳೆದ ತಿಂಗಳು ಟೊಮೆಟೊಗೆ ಭರ್ಜರಿ ಬೆಲೆ ಬಂದಿದ್ದ ಕಾರಣ ಬಹುತೇಕ ರೈತರು ಟೊಮೆಟೊ ಬೆಳೆದಿದ್ದಾರೆ. ಮಾರುಕಟ್ಟೆಗೆ ಟೊಮೆಟೊ ಹರಿದು ಬರುತ್ತಿದ್ದು ಕೆ.ಜಿಗೆ ₹10– ₹15ರಂತೆ ಮಾರಾಟವಾಗುತ್ತಿದೆ. ಉಳಿದಂತೆ ತರಕಾರಿ ಬೆಲೆ ಸ್ಥಿರವಾಗಿದೆ.
ಸೌತೆಕಾಯಿ ₹16, ಪಡಲಕಾಯಿ, ಎಲೆಕೋಸು, ಮೂಲಂಗಿ, ಬೆಂಡೆಕಾಯಿ, ಮಂಗಳೂರುಸೌತೆ, ಬದನೆಕಾಯಿ ₹20ರಂತೆ ಕೆ.ಜಿ ಮಾರಾಟವಾಗುತ್ತಿವೆ. ಫಾರಂ ಬೀನ್ಸ್, ಗೆಡ್ಡೆಕೋಸು, ಸೀಮೆಬದನೆಕಾಯಿ, ಹೂಕೋಸು, ಹೀರೇಕಾಯಿ, ಬೀಟ್‌ರೂಟ್, ಸೋರೆಕಾಯಿ, ಆಲೂಗೆಡ್ಡೆ, ಸಿಹಿಗುಂಬಳ, ಬೂದುಗುಂಬಳ ₹30, ಈರುಳ್ಳಿ ₹33ಕ್ಕೆ ದೊರೆಯುತ್ತಿವೆ.
ನಾಟಿ ಬೀನ್ಸ್, ಕ್ಯಾರೆಟ್, ದಪ್ಪಮೆಣಸಿನಕಾಯಿ, ಹಾಗಲಕಾಯಿ, ನುಗ್ಗೇಕಾಯಿ, ಅವರೆಕಾಯಿ, ಗೋರಿಕಾಯಿ, ತೊಂಡೆಕಾಯಿ, ಸಿಹಿಗೆಣಸು, ಮರಗೆಣಸು, ತಗಣಿಕಾಯಿ, ಬಜ್ಜಿ ಮೆಣಸಿನಕಾಯಿ ₹40, ಸುವರ್ಣಗೆಡ್ಡೆ, ಹಸಿರುಮೆಣಸಿನಕಾಯಿ ₹60ಕ್ಕೆ ಬಿಕರಿಯಾಗುತ್ತಿವೆ. ಹಸಿಬಟಾಣಿ, ಫಾರಂ ಬೆಳ್ಳುಳ್ಳಿ ₹120, ರಾಜ್‌ಈರುಳ್ಳಿ, ನಾಟಿಬೆಳ್ಳುಳ್ಳಿ ₹160 ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿದ್ದರೆ, ಒಂದು ನಿಂಬೆಹಣ್ಣು ₹5 ರಂತೆ ಮಾರಾಟ ಮಾಡಲಾಗುತ್ತಿದೆ.
ಸೊಪ್ಪುಗಳಲ್ಲಿ ಸಬ್ಬಸಿಗೆ, ಚಿಕ್ಕಿಸೊಪ್ಪು, ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ಏರಿಕೆಯಾಗಿದೆ. ಇತರ ಸೊಪ್ಪುಗಳ ಬೆಲೆ ಸಾಧಾರಣವಾಗಿದೆ. ಕೀರೆ ₹5, ಕಿಲಕೀರೆ, ದಂಟು ₹6, ಪಾಲಾಕ್, ಪುದೀನಾ, ಕರಿಬೇವು ₹10, ಮೆಂತೆ, ಸಬ್ಬಸಿಗೆ, ಫಾರಂ ಕೊತ್ತಂಬರಿ ₹25, ಚಿಕ್ಕಿಸೊಪ್ಪು, ನಾಟಿ ಕೊತ್ತಂಬರಿ ₹20ರಂತೆ ಮಾರಾಟವಾಗುತ್ತಿವೆ.
ವರಮಹಾಲಕ್ಷ್ಮಿ ಹಬ್ಬ, ಶ್ರಾವಣ ಪೂಜೆ ಅಂಗವಾಗಿ ಹೂವುಗಳ ಬೆಲೆ ಏರಿಕೆಯಾಗಿದ್ದವು. ಈಗ ನಿಯಂತ್ರಣಕ್ಕೆ ಬಂದಿದ್ದು ಗ್ರಾಹಕರು ನಿರಾಳರಾಗಿದ್ದಾರೆ. ಕೆ.ಜಿ ಚೆಂಡುಹೂ ₹30, ಸೇವಂತಿಗೆ, ಬಟನ್ಸ್ ₹100, ಬಿಳಿಸೇವಂತಿಗೆ ₹120, ಕಾಕಡ, ಕಲ್ಕತ್ತಾ ಮಲ್ಲಿಗೆ, ಗಣಗಲೆ ₹150, ಮರಳೆ, ಸುಗಂಧರಾಜ ₹200, ಮಲ್ಲಿಗೆ, ಕನಕಾಂಬರ ₹500ರಂತೆ ಮಾರಾಟವಾಗುತ್ತಿವೆ.
ಮಾರು ತುಳಸಿ, ಕಾಕಡ, ಸೇವಂತಿಗೆ, ಗಣಗಲೆ, ಕೆಂಪು ಚೆಂಡುಹೂ, ಹಳದಿ ಚೆಂಡುಹೂ ₹30, ಕನಕಾಂಬರ, ಮರಳೆ, ಬಟನ್ಸ್ ₹50, ಮಲ್ಲಿಗೆ ₹60ರಂತೆ ಮಾರಾಟವಾಗುತ್ತಿವೆ.
ಹಣ್ಣುಗಳಲ್ಲಿ ಸೇಬು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಪಪ್ಪಾಯ ₹20, ಕಲ್ಲಂಗಡಿ ₹25, ಕರಬೂಜ, ಸೀಬೆ ₹40, ಅನಾನಸ್, ಮೂಸಂಬಿ ₹70, ಏಲಕ್ಕಿಬಾಳೆ ₹120, ಮರಸೇಬು ₹120, ಕಿವಿಹಣ್ಣು (ಬಾಕ್ಸ್) ₹130, ಸಣ್ಣದ್ರಾಕ್ಷಿ ₹170, ದಾಳಿಂಬೆ ₹180, ಆಸ್ಟ್ರೇಲಿಯಾ ಕಿತ್ತಳೆ ₹210, ಸೇಬು ₹200ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ.
ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆಯಲ್ಲಿ ಏರಿಕೆ ದುಬಾರಿಯಾದ ಸೇಬು ಹಣ್ಣು ಮಾರುಕಟ್ಟೆಗೆ ಬರುತ್ತಿದೆ ಗುಣಮಟ್ಟದ ಟೊಮೆಟೊ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.